ಉಪವಿಭಾಗಾಧಿಕಾರಿ ಕಚೇರಿಗೆ ಸ್ಥಳ ಪರಿಶೀಲನೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯನ್ನು ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸಬೇಕು ಎಂಬ ಹೋರಾಟ ತೀವ್ರವಾಗುತ್ತಿರುವ ಬೆನ್ನಲ್ಲೇ ಉಪವಿಭಾಗಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ಪ್ರಕ್ರಿಯೆಗಳು ಸರ್ಕಾರದ ಹಂತದಲ್ಲಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಶನಿವಾರ ಇಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿ.ಶಂಕರ್, ಉಪವಿಭಾಗಾಧಿಕಾರಿ ಕಚೇರಿಯನ್ನು ಆರಂಭಿಸಲು ಕಟ್ಟಡಗಳ ಪರಿಶೀಲನೆ ನಡೆಸಿದ್ದಾರೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ರೈತಭವನ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ತಾತ್ಕಾಲಿಕ ಕಚೇರಿಯಾಗುವ ನಿಟ್ಟಿನಲ್ಲಿ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆದಿದೆ. ರೈತಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಈ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಆರಂಭಿಸಲು ಚಿಂತನೆ ನಡೆದಿದೆ. ಹೊಸ ಕಟ್ಟಡ ಮತ್ತು ಸ್ಥಳಾವಕಾಶಗಳು ಲಭ್ಯವಾಗುವವರೆಗೆ ಇಲ್ಲಿ ಕಚೇರಿ ಕಾರ್ಯನಿರ್ವಹಿಸಬಹುದಾದ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ ಕೆಲ ಖಾಸಗಿ ಕಟ್ಟಡಗಳನ್ನೂ ವೀಕ್ಷಿಸಲಾಗಿದ್ದು, ಈ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದರು.
ಎಸಿ ಕಚೇರಿ ಖಚಿತ: ಈ ಎಲ್ಲಾ ಪ್ರಕ್ರಿಯೆಗಳು ಚುರುಕಾಗಿರುವುದರಿಂದ ದೊಡ್ಡಬಳ್ಳಾಪುರದ ಜನರ ಬಹುದಿನದ ಬೇಡಿಕೆ ಈಡೇರುವ ಆಸೆ ಚಿಗುರಿದೆ. 5 ದಶಕಗಳಿಂದ ಉಪವಿಭಾಗವಾಗಿರುವ ದೊಡ್ಡಬಳ್ಳಾಪುರ ರಾಜ್ಯದ ಹಳೆಯ ಉಪವಿಭಾಗಗಳಲ್ಲಿ ಒಂದು. ಅವಿಭಜಿತ ಗ್ರಾಮಾಂತರ ಜಿಲ್ಲೆಯಲ್ಲಿದ್ದ 2 ಉಪವಿಭಾಗಗಳ ಪೈಕಿ ರಾಮನಗರ ಈಗಾಗಲೇ ಜಿಲ್ಲೆಯಾಗಿದೆ. ದೊಡ್ಡಬಳ್ಳಾಪುರ ಕೂಡ ಜಿಲ್ಲೆಯಾಗಬೇಕು ಎಂಬ ಹಂತದಲ್ಲಿ ಇದು ಮೊದಲ ಶುಭ ಸೂಚನೆ ಎನ್ನಲಾಗಿದೆ.
ಸರ್ಕಾರದ ಹಂತದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ಗೋಪುರದ ಪೋಡಿಯಂ ಬ್ಲಾಕ್ನಿಂದ ವಿಭಾಗದ ವ್ಯಾಪ್ತಿಯ ಕೇಂದ್ರ ಸ್ಥಳಕ್ಕೆ ವರ್ಗಾಯಿಸುವ ಬಗ್ಗೆ ಗಂಭೀರ ಯತ್ನ ನಡೆಯುತ್ತಿದೆ. ರಾಜ್ಯದಲ್ಲೇ ಪ್ರದೇಶ ವ್ಯಾಪ್ತಿಯ ಹೊರಗೆ ಕಾರ್ಯನಿರ್ವಹಿಸುತ್ತಿರುವ ಏಕೈಕ ನತದೃಷ್ಟ ಉಪವಿಭಾಗ ಎಂಬ ಹಣೆಪಟ್ಟಿಯಿಂದ ದೊಡ್ಡಬಳ್ಳಾಪುರ ಶೀಘ್ರವೇ ಮುಕ್ತವಾಗಲಿದೆ ಎನ್ನಲಾಗಿದ್ದು, ಇದರಿಂದ ಬಹುಮುಖ್ಯವಾಗಿ ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ನಗರಗಳು ಮತ್ತು ಗ್ರಾಮಾಂತರ ಪ್ರದೇಶದ ಜನ ಸುಲಭವಾಗಿ ಕಚೇರಿಗೆ ಬಂದು ಹೋಗುವ ವ್ಯವಸ್ಥೆಯಾಗುತ್ತದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ.
ಜಿಲ್ಲಾ ಕೇಂದ್ರ ವರದಿ ಸಲ್ಲಿಕೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನು ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಈಗಾಗಲೇ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ನಗರಗಳ ಸಮಗ್ರ ಅಂಕಿ-ಅಂಶಗಳು, ಅರ್ಹತೆಗಳನ್ನು ಒಳಗೊಂಡ ಮಾಹಿತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲಾ ಕೇಂದ್ರದ ಕುರಿತೂ ಗಂಭೀರ ಚರ್ಚೆಗಳು ಸರ್ಕಾರದ ಹಂತದಲ್ಲಿ ನಡೆಯುತ್ತಿವೆ. ಸಂಬಂಧಪಟ್ಟ ಇಲಾಖೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ವಿವರಿಸಿದರು.