ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗೀತಂ ವಿಶ್ವವಿದ್ಯಾಲಯದ ಅಕ್ರಮ ಒತ್ತುವರಿ ತೆರವು

Vishwanath S
Updated On : 12 Jan 2014, 1:30 am

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಬಳಿ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್‌ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಗೀತಂ) ವಿಶ್ವವಿದ್ಯಾಲಯ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 1 ಎಕರೆ 14 ಗುಂಟೆ ಸರ್ಕಾರಿ ಭೂಮಿಯನ್ನು ಬೆಂ.ಗ್ರಾ.ಜಿಲ್ಲಾಧಿಕಾರಿ ಶಂಕರ್ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ.
ಈಗ ವಶಪಡಿಸಿಕೊಂಡಿರುವ ಭೂಮಿಯ ಮಾರುಕಟ್ಟೆ ಬೆಲೆ 2 ಕೋಟಿಗೂ ಅಧಿಕ ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಶಂಕರ್, ದೊಡ್ಡಬಳ್ಳಾಪುರ ಗ್ರಾಮಾಂತರ ಕಸಬಾ ಹೋಬಳಿ ನಾಗದೇನಹಳ್ಳಿಯಲ್ಲಿನ ಸರ್ವೇ ನಂ.15-1, 15-2ರ ರಾಜಕಾಲುವೆಯಲ್ಲಿ ಒತ್ತುವರಿ ಮಾಡಿಕೊಂಡು ಗೀತಂ ವಿಶ್ವವಿದ್ಯಾಲಯ ಕ್ಯಾಂಟೀನ್ ಮತ್ತು ತಡೆಗೋಡೆಗಳನ್ನು ಕಟ್ಟಿತ್ತು. 2013ರ ನವಂಬರ್ 17ರ ಹೈಕೋರ್ಟ್ ತೀರ್ಪು ಮತ್ತು ಸ್ಥಳೀಯರ ದೂರಿನನ್ವಯ ಪರಿಶೀಲನೆ ನಡೆಸಿ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಈ ಜಾಗದಲ್ಲಿದ್ದ ತಡೆಗೋಡೆ ಮತ್ತು ಕ್ಯಾಂಟೀನ್ ಕೆಡವಲಾಗಿದೆ ಎಂದರು.
ಆರ್‌ಟಿಐಗೆ ಸಂದ ಜಯ: ಈ ಕಾರ್ಯಾಚರಣೆ ಮಾಹಿತಿ ಹಕ್ಕು ಹೋರಾಟಕ್ಕೆ ಸಂದ ಜಯ ಎನ್ನಲಾಗಿದೆ. ಸ್ಥಳೀಯರ ಹೋರಾಟಕ್ಕೆ ಮಣಿದ ಅಧಿಕಾರಿಗಳು ಕೊನೆಗೂ ಪ್ರಭಾವಿಗಳ ಹಿಡಿತದಲ್ಲಿದ್ದ ಸರ್ಕಾರಿ ರಾಜಕಾಲುವೆ ತೆರವು ಮಾಡಲು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗದೇನಹಳ್ಳಿಯ ಮಾಹಿತಿ ಹಕ್ಕು ಕಾರ್ಯಕರ್ತ ಆನಂದಕುಮಾರ್, ಹೀತಂ ವಿಶ್ವವಿದ್ಯಾಲಯದ ಆಡಳಿತ ಮಂಡಲಿ ವಶದಲ್ಲಿ ಇಲ್ಲಿನ ಸುಮಾರು 6 ಎಕರೆ ಸರ್ಕಾರಿ ಜಮೀನು ಇದೆ. ಇದು ಮೊದಲ ಹಂತದ ಜಯವಾಗಿದ್ದು, ಮುಂದಿನ ದಿನಗಳಲ್ಲಿ ಆ ಎಲ್ಲ ಭೂಮಿಯನ್ನೂ ಸರ್ಕಾರ ಪರಿಶೀಲಿಸಿ ವಶಕ್ಕೆ ಪಡೆಯುವ ವಿಶ್ವಾಸವಿದೆ ಎಂದಿದ್ದಾರೆ.
ಬಯಪ ಅನುಮತಿ ಇದೆಯೇ: ಗೀತಂ ವಿಶ್ವವಿದ್ಯಾಲಯ ಇರುವ ವ್ಯಾಪ್ತಿಯ ನಾಗದೇನಹಳ್ಳಿ ಪ್ರದೇಶ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ವ್ಯಾಪ್ತಿಗೆ ಬರುತ್ತದೆ. ಈ ಪ್ರದೇಶದಲ್ಲಿ 2 ಅಂತಸ್ತುಗಳನ್ನು ಮೀರಿ ಕಟ್ಟಡ ಕಟ್ಟಬೇಕಿದ್ದರೆ ಬಯಾಪ ಅನುಮತಿ ಪಡೆಯಬೇಕು. ಆದರೆ ವಿವಿ ಬಹು ಅಂತಸ್ತುಗಳ ಕಟ್ಟಡಗಳನ್ನು ನಿರ್ಮಿಸಿದೆ. ಇದಕ್ಕೆ ಬಯಾಪ ಅನುಮತಿ ನೀಡಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸ್ಥಳೀಯ ಮಾಹಿತಿ ಹಕ್ಕು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಅಲ್ಲದೆ ಭೂ ಪರಿವರ್ತನೆ ಸಂಬಂಧಿಸಿದಂತೆ ಕೂಡ ಅನೇಕ ತೊಡಕುಗಳಿದ್ದು ಈ ಬಗ್ಗೆ ಕೂಡ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಹಸೀಲ್ದಾರ್ ಕೆ.ಬಿ. ಸಿದ್ಧಲಿಂಗಯ್ಯ, ಅಧಿಕಾರಿಗಳಾದ ವಿಜಯಕುಮಾರಿ, ಕಂದಾಯ ಅಧಿಕಾರಿ ರಜನಿಕಾಂತರೆಡ್ಡಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement