ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಾಳೆ ಘಾಟಿಯಲ್ಲಿ ಸಂಗೀತ ಕಾರ್ಯಕ್ರಮ

Vishwanath S
Updated On : 13 Jan 2014, 1:18 am

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ಸವಿತಾ ಸಮಾಜ ಯುವ ವೇದಿಕೆ ನೇತೃತ್ವದಲ್ಲಿ ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಶೇಷ ಪೂಜೆ ಮತ್ತು ಸಂಗೀತ ಕಾರ್ಯಕ್ರಮ ಜ.14ರ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಡಾ. ಆನಂದಗುರೂಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಪಿಳ್ಳಮುನಿಶಾಮಪ್ಪ, ಟಿ. ವೆಂಕಟರಮಣಯ್ಯ, ಎಸ್. ವಿಶ್ವನಾಥ್, ಮಾಜಿ ಶಾಸಕ ಜೆ. ನರಸಿಂಹಸ್ವಾಮಿ, ಬಿ.ಎನ್.ಬಚ್ಚೇಗೌಡ, ಆರ್.ಜಿ. ವೆಂಕಟಾಚಲಯ್ಯ, ಬಿಜೆಪಿ ಮುಖಂಡ ಕೆ.ಎಂ.ಹನುಮಂತರಾಯಪ್ಪ, ಕ್ರೀಡಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್, ಜಿ.ಪಂ ಉಪಾಧ್ಯಕ್ಷ ಹನುಮಂತೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ. ಕಲಾನಿಧಿ ಮಂಜುನಾಥ್ ಮತ್ತು ಸಂಗಡಿಗರಿಂದ ಸ್ಯಾಕ್ಸೋಫೋನ್ ಕಚೇರಿ ನಡೆಯಲಿದೆ ಎಂದು ಟಿ.ಜಿ.ಮಂಜುನಾಥ್ ತಿಳಿಸಿದ್ದಾರೆ.
ಇಂದು ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಇಲ್ಲಿನ ತಾಲೂಕು ಮತ್ತು ನಗರ ಬಿಜೆಪಿ ನೇತೃತ್ವದಲ್ಲಿ ಜ.13ರ ಸೋಮವಾರ ಬೆಳಗ್ಗೆ 10.30ಕ್ಕೆ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಸಂಸದ ಎಂ. ವೀರಪ್ಪ ಮೊಯ್ಲಿ ಅವರೇ ಪೆಟ್ರೋಲಿಯಂ ಸಚಿವರಾಗಿದ್ದಾರೆ. ಆದರೆ ಅವರು ಸ್ಥಳೀಯ ಪ್ರದೇಶಾಭಿವೃದ್ಧಿಯನ್ನು ನಿರ್ಲಕ್ಷಿಸುವುದರ ಜೊತೆಗೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಮಾಡಲೂ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ಮತ್ತು ಸರ್ಕಾರದ ನೀತಿ ವಿರುದ್ಧ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಚನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಚಾಲನೆ
ನೆಲಮಂಗಲ: ವಿದ್ಯಾರ್ಥಿ ದೆಸೆಯಲ್ಲಿ ನಡೆಸುವ ರಾಷ್ಟ್ರೀಯ ಸೇವಾ ಯೋಜನೆಯಿಂದ  ಸ್ವಯಂ ಸೇವೆ ಮಾಡುವ ಮನೋಭಾವ ಹೊಂದುತ್ತಾರೆ  ಎಂದು ಬೆಂಗಳೂರಿನ ಎಂ.ಇ.ಎಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕ ಜನಾರ್ದನ್ ತಿಳಿಸಿದರು. ಅವರು ಶನಿವಾರ ತಾಲೂಕಿನ ಮಾಚನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಾ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪಾಲಿಸಲು ಪ್ರತಿನಿತ್ಯ  ರಸ್ತೆಗಳನ್ನು ಸ್ವಚ್ಛಮಾಡುವುದು, ದೇವಾಲಯಗಳ ಆವರಣವನ್ನು ಸ್ವಚ್ಛಗೊಳಿಸುವುದು. ಗ್ರಾಮಸ್ಥರಿಗೆ ಆರೋಗ್ಯದ ಅರಿವು ಮೂಡಿಸುವುದು. ರಸ್ತೆಯ ಎರಡು ಬದಿಗಳಲ್ಲಿ ಸಸಿಗಳನ್ನು ನೆಟ್ಟು ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುವುದು. ಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು  ಸಹಾಯ ಹಸ್ತ ನೀಡುವುದು ಕರ್ತವ್ಯ ಎಂದರು. ಶಿವಗಂಗೆ ಗ್ರಾ.ಪಂ.ಅಧ್ಯಕ್ಷೆ ಜಾನಕಮ್ಮ ಜಯಣ್ಣ, ಗ್ರಾಮದ ಮುಖಂಡರಾದ ಲಕ್ಷ್ಮಣಗೌಡ, ನರಸಿಂಹಮೂರ್ತಿ, ವಕೀಲ ಚರಣ್ ಇದ್ದರು.
ಇಂದು ವೈಭವೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಕೆ.ಗೋಪಾಲಕೃಷ್ಣ ಎಜುಕೇಶನಲ್ ಟ್ರಸ್ಟ್‌ನ ಜಿ.ಕೆ.ಪ್ರೌಡಶಾಲೆ ಮತ್ತು ಪದ್ಮಾ ವಿದ್ಯಾನಿಕೇತನ ಶಾಲೆಗಳ ವೈಭವೋತ್ಸವ-2014 ಕಾರ್ಯಕ್ರಮ ಜ.13ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದೆ. ಸಮಾಜಕಲ್ಯಾಣಾಧಿಕಾರಿ ಎನ್. ಹನುಮಂತರಾಯಪ್ಪ ಉದ್ಘಾಟಿಸಲಿದ್ದು, ಬಿಇಓ ತಿಮ್ಮೇಗೌಡ, ಗಾಯತ್ರಿ ಪೀಠ ಟ್ರಸ್ಟ್ ಅಧ್ಯಕ್ಷ ಶಿವಾನಂದ್, ದೇವಾಂಗ ಮಂಡಲಿ ನಿರ್ದೇಶಕ ದಿನೇಶ್ ಭಾಗವಹಿಸಲಿದ್ದಾರೆ. ಸಂಸ್ಥೆ ಕಾರ್ಯದರ್ಶಿ ಕೆ.ಜಿ.ರಘುರಾಂ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾಜದ ಎಲ್ಲಾ ಸಮುದಾಯ ಸೇರಿಸಿದ ಹೆಗ್ಗಳಿಕೆ ಬಸವಣ್ಣನವರಿಗೆ ಸಲ್ಲಬೇಕು
ನೆಲಮಂಗಲ: ಸಮಾಜದ ಎಲ್ಲಾ ಸಮುದಾಯಗಳ ಜನರನ್ನು ಒಂದೆಡೆ ಸೇರಿಸಿ ಅನುಭವ ಮಂಟಪದಡಿ ಶೂನ್ಯಪೀಠ ನಿರ್ಮಿಸಿ ಜಾತಿ ಮತ ಪಂಥವನ್ನು ಮೀರಿದ  ಮಾನವ ಧರ್ಮದ ಸಂವಿಧಾನವನ್ನು ರಚಿಸಿದವರು ಬಸವಣ್ಣನವರು  ಎಂದು ವನಕಲ್ಲು ಮಲ್ಲೇಶ್ವರ ಪೀಠಾಧ್ಯಕ್ಷ ಬಸವರಮಾನಂದ ಸ್ವಾಮೀಜಿ  ಹೇಳಿದರು. ಅವರು ಶನಿವಾರ ತಾಲೂಕಿನ ಹೆಗ್ಗುಂದ  ಗ್ರಾಮದಲ್ಲಿ ಶ್ರೀದೇವಿ ಮತ್ತು ಭೂದೇವಿ ಸಮೇತ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡುತ್ತಾ ಏಕಾದಶಿ ವ್ರತದಿಂದ ಆತ್ಮಶುದ್ಧೀಕರಣ ಮಾಡಿಕೊಳ್ಳಬಹುದು ಎಂದರು. ನರಸೀಪುರ ಗ್ರಾ.ಪಂ.ಅಧ್ಯಕ್ಷೆ ರತ್ನಮ್ಮಭೀಮರಾಜು, ಸರ್ಕಲ್ ಇನ್ಸ್‌ಪೆಕ್ಟರ್ ಗೋವಿಂದರಾಜು, ಮುಖಂಡ ಆಲಪ್ಪಯನಪಾಳ್ಯ ವೆಂಕಟೇಶ್, ವಕೀಲರಾದ ಬಿ.ಎಮ್. ಸ್ವಾಮಿ, ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ ರಾಜೇಂದ್ರ,  ಜಿಪಂ ಮಾಜಿ ಸದಸ್ಯ ವೆಂಕಟೇಶಯ್ಯ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಮಾಜಿ ಖಜಾಂಚಿ ಚೌಡಯ್ಯ, ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಯೋಗಾನಂದ, ವೆಂಕಟೇಶಯ್ಯ ಇದ್ದರು.
ತಾಲೂಕು ಸಾಹಿತ್ಯ ಪರಿಷತ್ ಕಾರ್ಯಕಾರಿ
ಚನ್ನಪಟ್ಟಣ: ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ  ಫೆಬ್ರವರಿ ತಿಂಗಳಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ಆಯೋಜಿಸುವ ಹಿನ್ನೆಲೆಯಲ್ಲಿ ಮಂಗಳವಾರ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಂ. ಶಿವಮಾದು ತಿಳಿಸಿದ್ದಾರೆ.
ಸಮ್ಮೇಳನದ ಆಯೋಜನೆ ಬಗ್ಗೆ ಚರ್ಚಿಸುವ ಉದ್ದೇಶದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜ.14 ರಂದು ಸಂಜೆ ನಾಲ್ಕುಗಂಟೆಗೆ ಸಭೆಯನ್ನು ಕರೆಯಲಾಗಿದ್ದು ಈಸಭೆಯಲ್ಲಿ ಸಮ್ಮೇಳನ ರೂಪುರೇಷೆಯ ಬಗ್ಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಪರಿಷತ್ತು ಉದ್ದೇಶಿಸಿದ್ದು, ಕಾರ್ಯಕಾರಿ ಸಭೆಯಲ್ಲಿ ಉಪಸಮಿತಿಗಳ ರಚನೆ, ಸಮ್ಮೇಳನಕ್ಕೆ ಅಗತ್ಯವಿರುವ ಸಂಪನ್ಮೂಲ ಕ್ರೋಡೀಕರಣ ಸೇರಿದಂತೆ ಮಹತ್ವದ ಸಂಗತಿಗಳ ಬಗ್ಗೆ ಚರ್ಚೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಪರಿಷತ್ತಿನ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಸಮ್ಮೇಳನದ ರೂಪುರೇಷೆಯ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡಬೇಕೆಂದು ಶಿವಮಾದು ಮನವಿ ಮಾಡಿದ್ದಾರೆ.
ಸಾಮಾಜಿಕ ಮೌಲ್ಯ  ತಿಳಿಯಬೇಕಾದರೆ ರಂಗ ಭೂಮಿ ಅವಶ್ಯಕ
ಚನ್ನಪಟ್ಟಣ: ಮಹಾಭಾರತ ಮತ್ತು ರಾಮಾಯಣ ನಾಟಕಗಳಲ್ಲಿ ಬರುವ ಪಾತ್ರಗಳು ಹಾಗೂ ಅದರಲ್ಲಿ ಇರುವ ಸಾಮಾಜಿಕ ಮೌಲ್ಯಗಳನ್ನು ತಿಳಿಯಬೇಕಾದರೆ ರಂಗ ಭೂಮಿ ಇಂದು ಅತ್ಯವಶ್ಯಕವಾಗಿ ಬೇಕಾಗಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ವಿಭಾಗದ ಜೆಡಿಎಸ್ ವಿಭಾಗದ ಪ್ರದಾನ ಕಾರ್ಯದರ್ಶಿ ತಿಮ್ಮೇಗೌಡ ಅಭಿಪ್ರಾಯಪಟ್ಟರು. ನವಚೇತನ ಸಾಂಸ್ಕೃತಿಕ ಕಲಾ ಬಳಗ ಹಾಗೂ ಪ್ರಜ್ಞಾ ಸಾಮಾಜಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಹಿರಿಯ ರಂಗ ನಿರ್ದೇಶಕ ದಿ.ಎಂ.ಬಿ.ಸಿದ್ದರಾಮು ಅವರ 11ನೇವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಧಾರವಾಹಿಗಳು ಮತ್ತು ದೃಶ್ಯ ಮಾಧ್ಯಾಮಗಳಲ್ಲಿ ಮಾನವೀಯ ಮೌಲ್ಯವನ್ನು ಹಾಳು ಮಾಡುವ ನಿಟ್ಟಿನಲ್ಲಿ ಪ್ರಸಾರವಾಗುತ್ತಿವೆ. ಇದರ ನಡುವೆ ಮಾನವ ಸಂಭಂದಗಳನ್ನು ಎತ್ತಿ ಹಿಡಿಯುವ ಇಂತಹ ನಾಟಕಗಳು ಹೆಚ್ಚು ಹೆಚ್ಚು ಬೆಳಕಿಗೆ ಬರಬೇಕಾಗಿದೆ. ಎಂದು ಅಭಿಪ್ರಾಯಪಟ್ಟರು. ತಾಲೂಕು ಆಹಾರ ನೀರಿಕ್ಷಕ ಮಲ್ಲಿಕಾರ್ಜುನ್, ಮೂಲವ್ಯಾಧಿ ತಜ್ಞ ಶಂಸದ್ದಿನ್, ಶೆಟ್ಟಿಹಳ್ಳಿ ಕೃಷಪ್ಪ, ವಿಷಯ ಪರೀವಿಕ್ಷಕ ಕನಕಪ್ಪ, ಮರಿಯಣ್ಣ, ಜಗದೀಶ್, ಸೇರಿದಂತೆ ಹಿರಿಯ ರಂಗ ನಿರ್ದೃಶಕರು ಹಾಗೂ ರಂಗಭೂಮಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆ.ದೇವೇಂದ್ರಕುಮಾರ್, ಪತ್ರಕರ್ತ ಎಂ.ಎಸ್.ಸುರೇಶ್‌ಕುಮಾರ್, ಪ್ರಜ್ಙಾ ಟ್ರಸ್ಟ್‌ನ ಅಧ್ಯಕ್ಷ ಸಿದ್ದರಾಮು  ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಇಂದಿನಿಂದ ಚನ್ನಸೋಮೇಶ್ವರ ರಥೋತ್ಸವ
ದೊಡ್ಡಬಳ್ಳಾಪುರ: ಇಲ್ಲಿಗೆ ಸಮೀಪದ ಅಲಕಾಪುರ ಶ್ರೀಚನ್ನಸೋಮೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ವಿವಿಧ ಕಾರ್ಯಕ್ರಮಗಳು ಜ.13ರಿಂದ 24ರವರೆಗೆ ನಡೆಯಲಿವೆ. ಮುಜರಾಯಿ ಇಲಾಖೆಗೆ ಸೇರಿರುವ ದೇಗುಲದಲ್ಲಿ ಜ.13ರಂದು ಪುಣ್ಯಾಹ-ನಾಂದಿ, 14ರಂದು ಅಂಕುರಾರ್ಪಣೆ, ಕಳಸ ಪ್ರತಿಷ್ಠಾಪನೆ, 15ರಂದು ಕುಂಕುಮಾರ್ಚನೆ ಮತ್ತು 16ರಂದು ಬ್ರಹ್ಮರಥೋತ್ಸವ ಕಾರ್ಯಕ್ರಮಗಳು ಏರ್ಪಾಟಾಗಿವೆ.ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಗ್ರಾಮ ದೇವತೆ ವನ ಮಹೋತ್ಸವ
ಮಾಗಡಿ: ಪುರಾತನ ಗ್ರಾಮ ದೇವತೆ ಆಧಿಶಕ್ತಿ ಬಿಸಿಲು ಮಾರಮ್ಮದೇವಿಯ ವನಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಭಾನುವಾರ ನೆರವೇರಿತು. ಮಹಿಳೆಯರು ದೇವಿಗೆ  ಆರತಿ ಬೆಳಗಿಸಿ, ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಸಂಜೆ ಅರೆ, ತಮಟೆ, ಮಂಗಳವಾದ್ಯದೊಂದಿಗೆ ದೇವಿಯ ರಾಜಬೀದಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement