ಮಿತಿಮೀರಿದ ಬಳಕೆಯೇ ನೀರಿನ ಹಾಹಾಕಾರಕ್ಕೆ ಕಾರಣ
ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ಮಾನವ ನೀರಿನ ಮಿತಿಮೀರಿದ ಬಳಕೆಗೆ ಮುಂದಾದ ಪರಿಣಾಮ ಸಾವಿರಾರು ವರ್ಷಗಳಿಂದ ಸಂಗ್ರಹವಾಗಿದ್ದ ಅಂತರ್ಜಲ ಬರಿದಾಗಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ವಿರಕ್ತಮಠದ ಪೀಠಾಧ್ಯಕ್ಷ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ತಿಳಿಸಿದರು.
ನಗರದ ವಿರಕ್ತಮಠದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಜಯಮ್ಮ ಮತ್ತು ವಿ.ಪುಟ್ಟಪ್ಪನವರ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇನ್ನಾದರೂ ನಾವು ನೀರಿನಲ್ಲಿ ದಾರಾಳತನ ತೋರದೆ ಜವಾಬ್ದಾರಿಯುತವಾಗಿ ನೀರನ್ನು ಬಳಸಿ ಮುಂದಿನ ಪೀಳಿಗೆಗೆ ಅಮೂಲ್ಯ ಸಂಪತ್ತನ್ನು ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರನ್ನು ಜಾಗೃತಗೊಳಿಸ ಬೇಕಿದ್ದು ಸಾಹಿತ್ಯ ಪರಿಷತ್ತು ಇಂತಹ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದ ಅವರು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಬರಗಾಲ ತಡೆಯಬಹುದು: ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಹಾಯಕ ಕೃಷಿ ನಿರ್ದೇಶಕ ಬಿ.ಟಿ. ಚಿಕ್ಕಪುಟ್ಟೇಗೌಡ, ಜಲಸಂಪನ್ಮೂಲ ಹಾಗೂ ಮಣ್ಣಿನ ಆರೋಗ್ಯ ಕಾಪಾಡಿದರೆ ಬರಗಾಲವನ್ನು ತಡೆಯಬಹುದು. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ರೈತಾಪಿವರ್ಗ ಗಮನ ಹರಿಸಿದರೆ ದೇಶ ಸಮೃದ್ಧಿಯಾಗುತ್ತದೆ ಎಂದರು.
ಸಾವಯವ ಕೃಷಿ, ನೀರಿನ ಸದ್ಬಳಕೆ ಹಾಗೂ ಅಂತರ್ಜಲ ಸಂರಕ್ಷಣೆ ಕುರಿತು ಮಾತನಾಡಿ, ಜನಸಂಖ್ಯೆ ವೇಗವಾಗಿ ದ್ವಿಗುಣಗೊಳ್ಳುತ್ತಿದ್ದು, ಭೂಮಿ ಮತ್ತು ಮಳೆ ಸ್ಥಿರವಾಗಿದೆ. ಮಳೆ ಕೊಯ್ಲು ವ್ಯವಸ್ಥೆ ಜಗತ್ತಿನ ಮುಂದಿರುವ ತುರ್ತು ನೀರಿಲ್ಲದೆ ಮನುಷ್ಯರಲ್ಲೇ ಅಲ್ಲ ಮರಗಿಡ, ಪ್ರಾಣಿ ಪಕ್ಷಿ ಸಂಕುಲಗಳು ಸಹ ನಾಶವಾಗುವ ದಿನಗಳು ದೂರವಿಲ್ಲ. ಹಾಗಾಗಿ ಮಳೆ ನೀರನ್ನು ಇಂಗಿಸುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಲು ಕ್ರಮ ಕೈಗೊಳ್ಳಬೇಕು. ಸಾವಯವ ಕೃಷಿಯಿಂದ ವಿಮುಖರಾದರೆ ರೋಗ ರುಜಿನಗಳಿಗೆ ತುತ್ತಾಗಬೇಕಾಗುತ್ತದೆ. ರಾಸಾಯನಿಕತೆಯಿಂದ ಆಹಾರ ರಸಹೀನವಾಗುತ್ತದೆ ಎಂದು ತಿಳಿಸಿದರು.
ಜನಜಾಗೃತಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ, ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಉಂಟು ಮಾಡಲು ತಾಲ್ಲೂಕು ಕಸಾಪ ಮುಂದಾಗಿದೆ. ಇಂತಹ ಉಪನ್ಯಾಸಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ನೆಲ, ಜಲ ಮತ್ತು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಟಿ.ಎಂ.ಕೆಂಚೇಗೌಡ, ಸಾಹಿತಿ ಎಲೇಕೇರಿ ಶಿವರಾಂ, ದತ್ತಿ ದಾನಿ ವಿ.ಪಿ.ವರದರಾಜು, ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್.ಶಿವಶಂಕರ್, ಕಸಾಪ ನಿಕಟ ಪೂರ್ವ ಅಧ್ಯಕ್ಷ ತೋಟದ ಮನೆ ಕೃಷ್ಣೇಗೌಡ, ಡಾ.ಅಪ್ಪಗೆರೆ ವೆಂಕಟಯ್ಯ, ಎಂ.ಟಿ.ನಾಗರಾಜ್, ಎಲೇಕೇರಿ ರಾಜಶೇಖರ್ ಹಾಜರಿದ್ದರು.
ತಾಲೂಕು ಕಸಾಪ ಗೌರವ ಕಾರ್ಯದರ್ಶಿ ವಿಜಯ್ ರಾಂಪುರ ಸ್ವಾಗತಿಸಿ ನಿರೂಪಿಸಿದರು. ಬ್ರಹ್ಮಣೀಪುರ ರಾಮಕೃಷ್ಣಯ್ಯ ವಂದಿಸಿದರು.