ಲಾರಿ ಮುಷ್ಕರ; ಬೇಡಿಕೆ ಈಡೇರಿಸಲು ಆಗ್ರಹ
ಕನ್ನಡಪ್ರಭ ವಾರ್ತೆ, ಬೆಂಗಳೂರು ಜ.12
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮರಳು ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಸರಕು ಸಾಗಣೆ ವಾಹನಗಳ ಮಾಲೀಕರು ಬೆಂಬಲ ಸೂಚಿಸಿದ್ದಾರೆ.
ಮುಷ್ಕರದ ಮೊದಲ ದಿನ ನಗರದಲ್ಲಿ ಅಂತಹ ಯಾವುದೇ ಪರಿಣಾಮ ಬೀರಿಲ್ಲ. ಅಲ್ಲದೇ ಸರಕು ಸಾಗಣೆ ವಾಹನಗಳು ಎಂದಿನಂತೆ ನಗರ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ಪರ್ಮಿಟ್ ನೀಡುವಿಕೆ, ಅಧಿಕಾರಿಗಳಿಂದ ಕಿರುಕುಳ ತಪ್ಪಿಸಲು ಒತ್ತಾಯಿಸಿ ಮರಳು ಲಾರಿ ಮಾಲೀಕರು ಕಳೆದ 25 ದಿನಗಳಿಂದ ಮುಷ್ಕರ ನಡೆಸುತ್ತಿದ್ದು ಮರಳು ಲಾರಿ ಸಾಗಣೆಯನ್ನು ಸ್ಥಗಿತಗೊಳಿಸಿದ್ದಾರೆ. ಮರಳು ಸಾಗಣೆ ನಿಂತಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ನಗರದ ಹಲವು ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಹೀಗಾಗಿ ಸರ್ಕಾರ ಶೀಘ್ರ ಲಾರಿ ಮಾಲೀಕರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಹೇಳಿದರು.
ಜನವರಿ 11ರಿಂದ ಲಾರಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ವಾಣಿಜ್ಯ ವಾಹನಗಳು ಮುಷ್ಕರಕ್ಕೆ ಕೈ ಜೋಡಿಸಿವೆ. ಮುಷ್ಕರದಲ್ಲಿ ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಟೆಂಪೋ, ಗ್ಯಾಸ್ ಟ್ಯಾಂಕರ್‌ಗಳು ಪೆಟ್ರೋಲ್-ಡೀಸೆಲ್ ಟ್ಯಾಂಕ್‌ಗಳು ಐಟಿ-ಬಿಟಿ ವಾಹನಗಳು ಸ್ಥಗಿತಗೊಂಡಿವೆ. ಇದಕ್ಕೆ ತಮಿಳುನಾಡು, ಕೇರಳ, ಪಾಂಡಿಚೇರಿ ಲಾರಿ ಮಾಲೀಕರ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಯಾವುದೇ ಸರಕು ಸಾಗಣೆ ವಾಹನಗಳು ನಗರದಲ್ಲಿ ಸಂಚರಿಸುವುದಿಲ್ಲ ಎಂದು ಷಣ್ಮುಗಪ್ಪ ಹೇಳಿದ್ದಾರೆ.
ಕ್ಯಾಬ್ ಸ್ಥಗಿತವಿಲ್ಲ: ಮರಳು ಲಾರಿ ಮಾಲೀಕರ ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸರ್ಕಾರ ಶೀಘ್ರ ಮಾಲೀಕರ ಸಮಸ್ಯೆಗಳನ್ನು ಬಗೆಹರಿಸಬೇಕು. ಸದ್ಯ ನಮ್ಮ ಸಂಘಟನೆಯಿಂದ ವಾಹನಗಳ ಸಂಚಾರ ಸ್ಥಗಿತಗೊಳಿಸಿಲ್ಲ. ಟೂರಿಸ್ಟ್ ವಾಹನಗಳನ್ನು ಬುಕ್ ಮಾಡಿರುವ ಕಾರಣ ನಿಲ್ಲಿಸುವುದು ಕಷ್ಟ. ಅಲ್ಲದೇ ಐಟಿ-ಬಿಟಿ ಸೇರಿದಂತೆ ವಿವಿಧ ಕಂಪನಿಗಳಿಗೆ ಅಟ್ಯಾಚ್ ಮಾಡಲಾಗಿರುವ ವಾಹನಗಳ ಸಂಚಾರವನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ. ನಿಲ್ಲಿಸಲೇಬೇಕು ಎಂದಾದರೆ ಕನಿಷ್ಠ 15 ದಿನಗಳ ಮುಂಚೆ ಕಂಪನಿಗಳಿಗೆ ತಿಳಿಸಬೇಕಾಗುತ್ತದೆ. ಇದರಿಂದ ಕಂಪನಿಗಳು ಬಿಎಂಟಿಸಿ ಬಸ್ ಪಡೆದರೆ ಅದರಿಂದ ಕ್ಯಾಬ್ ಮಾಲೀಕರು, ಚಾಲಕರಿಗೆ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ ನಮ್ಮ ವಾಹನಗಳು ಹಾಗೂ ಟ್ಯಾಕ್ಸಿಗಳು ಎಂದಿನಂತೆ ಸಂಚರಿಸುತ್ತಿದ್ದು ಲಾರಿ ಮಾಲೀಕರ ಮುಷ್ಕರಕ್ಕೆ ಬೆಂಬಲಿಸುತ್ತೇವೆ ಎಂದು ಕರ್ನಾಟಕ ಟೂರಿಸ್ಟ್ ಮೋಟರ್ ಕ್ಯಾಬ್, ಮ್ಯಾಕ್ಸಿ ಕ್ಯಾಬ್ ಮಾಲೀಕರ ಕಲ್ಯಾಣ ಸಂಘಟನೆ ಅಧ್ಯಕ್ಷ ಭೈರವ ಸಿದ್ದರಾಮಯ್ಯ ತಿಳಿಸಿದರು.
ಬೇಡಿಕೆಗಳು: ಮರಳು ಸಾಗಣೆಗೆ ಪರ್ಮೀಟ್ ನೀಡುವುದು, ಡೀಸೆಲ್ ದರ ನಿಯಂತ್ರಣ, ಟ್ರಕ್ ಟರ್ಮಿನಲ್ ನಿರ್ಮಾಣ, ಓವರ್‌ಲೋಡ್ ರದ್ದುಗೊಳಿಸುವುದು, ರಾಷ್ಟ್ರೀಯ ಪರವಾನಗಿ ಜಾರಿಗೆ ಕ್ರಮ, ಪ್ರವಾಸಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳ ಕಿರುಕುಳ ತಪ್ಪಿಸುವುದು, ಇ-ಸುಗಮ್ ನಿಯಮದಲ್ಲಿ ಸಾಗಣೆಗೆ ನೀಡಿರುವ ಅವಧಿಯಲ್ಲಿ ಕನಿಷ್ಠ 30 ದಿನಕ್ಕೆ ವಿಸ್ತರಣೆ ಮತ್ತು ಟ್ರಾನ್ಸಿಟ್ ಪಾಸ್ ವ್ಯವಸ್ಥೆ ಸುಗಮಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಲಾರಿ ಮಾಲೀಕರು ಮುಷ್ಕರ ಆರಂಭಿಸಿದ್ದಾರೆ.