'ಜೀವನ ಪ್ರಗತಿಗೆ ಕ್ರೀಡೆ ಸಹಕಾರಿ'
ಆನೇಕಲ್: ಯುವಕರಲ್ಲಿ ಸಹಬಾಳ್ವೆ ಮತ್ತು ನಾಯಕತ್ವದ ಗುಣ ಬೆಳೆಯಲು ಕ್ರೀಡೆಗಳು ಸಹಕಾರಿಯಾಗಿವೆ ಎಂದು ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ಎಎಸ್ಬಿ ಸರ್ಕಾರಿ ಪಿಯು ಕಾಲೇಜಿನ ಮುಂಭಾಗದ ಮೈದಾನದಲ್ಲಿ ಸ್ವಾಮಿ ವಿನೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಘಟಕವು ಆಯೋಜಿಸಿದ್ದ ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ವಿನೇಕಾನಂದರ ಆದರ್ಶ ತತ್ವ ಸಿದ್ಧಾಂತಗಳನ್ನು ಯುವಕರು ಅಳವಡಿಸಿಕೊಂಡು ಬಲಿಷ್ಠ ಭಾರತದ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಶಿವಪ್ಪ ಮಾತನಾಡಿ ಯುವಕರಲ್ಲಿ ಜಾಗೃತಿ ಮೂಡಿಸಲು ಕ್ರೀಡೆಗಳು ಉಪಯುಕ್ತವಾಗಿವೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವಿವೇಕಾನಂದರ ವಿಚಾರ ಧಾರೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಜಿ ಆಂಜನಪ್ಪ, ಮಾಜಿ ಅಧ್ಯಕ್ಷ ಎನ್. ಬಸವರಾಜು, ಕೆ ಜಯಣ್ಣ, ದಿನ್ನೂರು ರಾಜು, ಜಿ.ಪಂ. ಸದಸ್ಯ ಜೆ. ನಾರಾಯಣಪ್ಪ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ. ರಾಮಕೃಷ್ಣ, ಉಪಾಧ್ಯಕ್ಷ ಮುನಿರಾಜು ಯುವ ಮೋರ್ಚಾ ತಾಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವಸಂತ್, ರಕ್ಷಿತ್, ಶ್ರೀಕಾಂತ್, ಭುವನೇಶ್, ರಘು, ರಾಜಶೇಖರ್, ಪುರಸಭಾ ಸದಸ್ಯರಾದ ಕೆ. ನಾಗರಾಜು, ನರಸಿಂಹ ರೆಡ್ಡಿ, ಎಂ.ನಾರಾಯಣಸ್ವಾಮಿ ಮುಖಂಡ ಶ್ರೀನಿವಾಸ ರೆಡ್ಡಿ ಮತ್ತಿತರರು ಹಾಜರಿದ್ದರು.
ವಿಕಲಚೇತನರಿಗೆ ಬಸ್ ಪಾಸ್ ಸೌಲಭ್ಯ ನೀಡದೆ ವಂಚನೆ: ಆರೋಪ
ರಾಮನಗರ: ವಿಕಲಚೇತನ ಸರ್ಕಾರಿ ನೌಕರರಿಗೂ ರಿಯಾಯಿತಿ ಬಸ್ ಪಾಸ್ ಸೌಲಭ್ಯ ಯೋಜನೆ ಇದ್ದರೂ ಕೂಡ ಕೆಲ ಜಿಲ್ಲೆಗಳಲ್ಲಿ ವಿಕಲಚೇತನರಿಗೆ ಬಸ್ ಪಾಸ್ ಸೌಲಭ್ಯ ನೀಡದೆ ವಂಚಿಸಲಾಗುತ್ತಿದೆ ಎಂದು ವಿಕಲಚೇತನ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಆರೋಪಿಸಿದ್ದಾರೆ. ನಿರುದ್ಯೋಗಿ ವಿಕಲಚೇತನರಿಗೆ ನೀಡಲಾಗುತ್ತಿದ್ದ ರಿಯಾಯಿತಿ ದರದ ಬಸ್ ಪಾಸ್ ಸೌಲಭ್ಯವನ್ನು ವಿಕಲಚೇತನ ಸರ್ಕಾರಿ ನೌಕರರಿಗೂ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಅಧಿಕಾರಿಗಳು ಮಾತ್ರ ಬಸ್ಪಾಸ್ ಸೌಲಭ್ಯ ನೀಡದೆ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಅವರಿಗೆ ಮನವಿ ಸಲ್ಲಿಸಿ ರಿಯಾಯಿತಿ ದರದ ಬಸ್ ಪಾಸ್ ಸೌಲಭ್ಯವನ್ನು ಎಲ್ಲಾ ವಿಕಲಚೇತನರಿಗೂ ವಿಸ್ತರಿಸುವಂತೆ ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಅವರು ಎಲ್ಲಾ ವಿಕಲಚೇತನರಿಗೂ ಯೋಜನೆ ಅನ್ವಯಿಸುವಂತೆ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲಾ ವಿಕಲಚೇತನರೂ ಕೂಡ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ಬೀರಪ್ಪ ತಿಳಿಸಿದ್ದಾರೆ.
ನಿತ್ಯಾನಂದನನ್ನು ರಾಜ್ಯದಿಂದ ಗಡಿಪಾರು ಮಾಡಿ
ರಾಮನಗರ: ವಿವಾದಿತ ಬಿಡದಿ ಧ್ಯಾನಪೀಠದ ಕಪಟ ಸನ್ಯಾಸಿ ನಿತ್ಯಾನಂದನನ್ನು ರಾಜ್ಯದಿಂದ ಗಡಿಪಾರು ಮಾಡಿ, ಧ್ಯಾನಪೀಠವನ್ನು ನೆಲಸಮಗೊಳಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾಕಷ್ಟು ಕುಖ್ಯಾತಿಗೆ ಒಳಗಾಗಿರುವ ನಿತ್ಯಾನಂದ ತನ್ನ ಕರ್ಮಕಾಂಡಗಳಿಂದ ರಾಮನಗರ ಜಿಲ್ಲೆಗೂ ಅಪಖ್ಯಾತಿ ತಂದಿದ್ದಾನೆ. ಹರಿದ್ವಾರಕ್ಕೆ ಕನ್ನಡಿಗರನ್ನು ಅಪಮಾನಿಸಿ, ಭಾವನೆಗಳಿಗೆ ಧಕ್ಕೆ ತಂದೊಡ್ಡಿರುವುದನ್ನು ಅವರು ಖಂಡಿಸಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹಿತ ರಾಮನಗರ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ನಿತ್ಯಾನಂದ ಗಡಿಪಾರಿಗೆ ಈ ಹಿಂದೆಯೇ ಒತ್ತಾಯಿಸಿದ್ದಾರೆ. ಈ ಬಗ್ಗೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದವ ಪೊಲೀಸರ ಅತಿಥಿ
ರಾಮನಗರ: ಹಾಡಹಗಲೇ ಮನೆಗೆ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ಸೋಮವಾರ ನಡೆದಿದೆ.
ಬೆಂಗಳೂರಿನ ನಜೀರ್ ಅಹಮದ್ ಬಂಧಿತ ಆರೋಪಿ. ಆತ ವಿವೇಕಾನಂದ ನಗರ ಬಡಾವಣೆಯ ಬಸವರಾಜು ಅವರ ಮನೆಯಲ್ಲಿ ಕಳ್ಳತನ ನಡೆಸಲು ಬಾಗಿಲು ಮುರಿಯುತ್ತಿದ್ದನು. ಆಗ ಸ್ಥಳೀಯರಿಗೆ ಸಿಕ್ಕಿಬಿದ್ದನು.
ಕಳ್ಳನು ಬಾಗಿಲು ಮುರಿಯುತ್ತಿದ್ದಾಗ ಆ ಮನೆ ಪಕ್ಕದ ಸುಶೀಲಮ್ಮ ಅನುಮಾನದಿಂದ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಸಾರ್ವಜನಿಕರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಆರೋಪಿ ನಜೀರ್ ಅಹಮದ್ ಪರಾರಿಯಾಗಲು ಯತ್ನಿಸಿದನು.
ಸಾರ್ವಜನಿಕರು ಬೆನ್ನಟ್ಟಿ ಆತನನ್ನು ಹಿಡಿದು, ಥಳಿಸಿದ್ದಾರೆ. ಸಿಕ್ಕಿಬಿದ್ದಾಗ ಕಳ್ಳನು ತನ್ನನ್ನು ಮನೆ ಮಾಲೀಕ ಬಸವರಾಜು ಸಂಬಂಧಿ ಎಂದು ಹೇಳಿಕೊಂಡನಾದರೂ ಗೂಸ ತಪ್ಪಿಸಿಕೊಳ್ಳಲಾಗಲಿಲ್ಲ. ಆತನ ಇನ್ನಿಬ್ಬರು ಸಹಚರರು ಪರಾರಿಯಾಗಿದ್ದಾರೆ.
ವಿವೇಕಾನಂದ ನಗರ ಬಡಾವಣೆಯಲ್ಲಿ ಹಾಡ ಹಗಲಲ್ಲೇ ಕಳವು ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದರ ಹಿಂದೆ ನಜೀರ್ ಅಹಮದ್ ಗುಂಪಿನ ಕೈವಾಡವನ್ನು ಶಂಕಿಸಲಾಗಿದೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.
ನಾಳೆ ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮ
ರಾಮನಗರ: ಕರ್ನಾಟಕ ಜಾನಪದ ಪರಿಷತ್ತಿನಿಂದ ಜಾನಪದ ಲೋಕದಲ್ಲಿ ಜ.15ರಂದು ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮ ಮತ್ತು ಜೋಡಿ ಎತ್ತುಗಳ ಪ್ರದರ್ಶನ ಸ್ಪರ್ಧೆಯು ಮಧ್ಯಾಹ್ನ 12ಕ್ಕೆ ಬಯಲು ರಂಗವೇದಿಕೆಯ ಮುಂಭಾಗದಲ್ಲಿ ನಡೆಯಲಿದೆ. ನಾನಾ ತಳಿಯ ಅತ್ಯಾಕರ್ಷಕ ಮೈಕಟ್ಟಿನ ಎತ್ತುಗಳ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ರು.10, ದ್ವಿತೀಯ ರು.5 ಹಾಗೂ ತೃತೀಯ ರು.3 ಸಾವಿರ ಬಹುಮಾನ ನೀಡಲಾಗುವುದು. ಮಧ್ಯಾಹ್ನ 3ಕ್ಕೆ ರಾಸುಗಳ ಕಿಚ್ಚುಹಾಯಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಜಾನಪದ ಲೋಕದ ಸಂಯೋಜನಾಧಿಕಾರಿ ಡಾ.ಕುರುವ ಬಸವರಾಜು ತಿಳಿಸಿದ್ದಾರೆ.
ಮಹಿಳೆಯರ ವಸ್ತ್ರವಿನ್ಯಾಸ ತರಬೇತಿ
ರಾಮನಗರ: ಬಿಡದಿಯ ವಾಜರಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಎಡಿಪೈ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯು ಆಸಕ್ತ ನಿರುದ್ಯೋಗಿ ಮಹಿಳೆಯರು ಸ್ವ ಉದ್ಯೋಗ ಪ್ರಾರಂಭಿಸಲು ಅನುವಾಗುವಂತೆ ಮಹಿಳೆಯರ ವಸ್ತ್ರವಿನ್ಯಾಸ ತರಬೇತಿಯನ್ನು ಉಚಿತವಾಗಿ ನೀಡಲಿದೆ. ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿ ಪಾಸಾಗಿದ್ದು, 18ರಿಂದ 35 ವರ್ಷದೊಳಗಿರಬೇಕು. 21 ದಿನಗಳು ನಡೆಯುವ ತರಬೇತಿಯು ಸಂಸ್ಥೆಯ ಆವರಣದಲ್ಲಿಯೇ ನಡೆಯಲಿದೆ. ಶಿಬಿರಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುವುದು. ಆಸಕ್ತರು ಭರ್ತಿ ಮಡಿದ ಅರ್ಜಿಯೊಂದಿಗೆ ತಮ್ಮ ಇತ್ತೀಚಿನ 3 ಭಾವಚಿತ್ರಗಳು, ಪಡಿತರ ಚೀಟಿ ನಕಲು ಪ್ರತಿ ಹಾಗೂ ಅಂಕಪಟ್ಟಿ ನಕಲಿನೊಂದಿಗೆ ಸಂಸ್ಥೆಯ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊ.9740648830, 9900168985 ಸಂಪರ್ಕಿಸಬಹುದು.
ಡಿಕ್ಕಿ: ವ್ಯಕ್ತಿ ಸಾವು, ಇನ್ನೊಬ್ಬನಿಗೆ ಗಾಯ
ಮಾಗಡಿ: ಬೈಕ್ನಲ್ಲಿ ಹೋಗುತ್ತಿದ್ದವರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಒಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಐಯ್ಯಂಡಹಳ್ಳಿ ಬಳಿ ನಡೆದಿದೆ. ಶಿಶಿಧರ್ (23) ಮತೃಪಟ್ಟ ದುರ್ದೈವಿ. ಮತ್ತೊಬ್ಬ ಯುವಕ ರಾಮಕುಮಾರ್ ತೀವ್ರ ಗಾಯಗೊಂಡಿದ್ದು, ಆತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಕುದೂರು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ವಿವೇಕಾನಂದ ಜನ್ಮದಿನಾಚರಣೆ ಪ್ರಯುಕ್ತ ರಕ್ತದಾನ
ದೊಡ್ಡಬಳ್ಳಾಪುರ: ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ಡಿಕ್ರಾಸ್ ರಸ್ತೆಯಲ್ಲಿರುವ ಮಾನಸ ಆಸ್ಪತ್ರೆಯಲ್ಲಿ ಸೋಮವಾರ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ರಕ್ತದಾನಿ, ಮೇಜರ್ ಎಸ್.ಮಹಾಬಲೇಶ್ವರ್ ಉದ್ಘಾಟಿಸಿದರು. ಅವರು ಮಾತನಾಡಿ ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ. ಆಪತ್ತಿನಲ್ಲಿ ಜೀವರಕ್ಷಕ ಎನಿಸಿರುವ ರಕ್ತ ಜಾತಿ-ಮತ-ಧರ್ಮ-ಲಿಂಗ ಮತ್ತು ವಯಸ್ಸನ್ನು ಮೀರಿ ಯಾರಿಗೆ ಯಾವ ಹಂತದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ಹೇಳಲಿಕ್ಕಾಗದು. ವಿಜ್ಞಾನ ಎಷ್ಟೇ ಮುಂದುವರೆದರೂ ಕೃತಕವಾಗಿ ರಕ್ತವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ ಎಂದರು. ಶಿಬಿರದಲ್ಲಿ ಒಟ್ಟು 62 ಮಂದಿ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಚಿಕ್ಕಬಳ್ಳಾಪುರದ ರೆಡ್ಕ್ರಾಸ್ ಸಂಸ್ಥೆ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಿತು. ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡರ ಬಣದ ಸಹಕಾರದಲ್ಲಿ ಹಲವು ಯುವಕರು ರಕ್ತದಾನ ಮಾಡಿದರು. ಆಸ್ಪತ್ರೆಯ ವೈದ್ಯ ಡಾ.ಸುಭಾಷ್ ಶಿಂಪಿಗೇರ್, ಪಿಆರ್ಓ ಜಗದೀಶ್, ಎಓ ಅರುಣ್ಕುಮಾರ್, ಕರವೇ ಕಾರ್ಯದರ್ಶಿ ರಾಜಘಟ್ಟ ರವಿ ಮತ್ತಿತರರು ಭಾಗವಹಿಸಿದ್ದರು.
ಕ್ರೀಡಾಸಕ್ತ ಬಾಲಕ ಬಾಲಕಿಯರ ಆಯ್ಕೆ
ರಾಮನಗರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾಸಕ್ತ ಬಾಲಕ ಬಾಲಕಿಯರನ್ನು ಆಯ್ಕೆ ಮಾಡಲು ಮೊದಲ ಹಂತವಾಗಿ ಪ್ರತಿ ತಾಲೂಕು ಕೇಂದ್ರದಲ್ಲಿ ಜ.21ರಿಂದ 24ರವರೆಗೆ ಆಯ್ಕೆ ನಡೆಸಲಾಗುವುದು. ಜ.21 ರಂದು ಕನಕಪುರದ ಕ್ರೀಡಾಂಗಣದಲ್ಲಿ, ಜ.22 ರಂದು ಮಾಗಡಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ, ಜ.23 ರಂದು ಚನ್ನಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ, ಜ.24 ರಂದು ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 10.30ರಿಂದ 5ರವರೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕಿರಿಯ ಮತ್ತು ಹಿರಿಯ ವಿಭಾಗ ಮಟ್ಟದ ಆಯ್ಕೆಗಳು ಜ.28 ಹಾಗೂ 29ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಿರಿಯ ವಿಭಾಗ ಮಟ್ಟದ ಆಯ್ಕೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಆಯಾ ವರ್ಷದ ಜೂ.1ಕ್ಕೆ 14 ವರ್ಷ ಒಳಪಟ್ಟಿರಬೇಕು. 8ನೇ ತರಗತಿಗೆ ಮಾತ್ರ ಪ್ರವೇಶ ನೀಡಲಾಗುವುದು. ಹಿರಿಯ ವಿಭಾಗ ಮಟ್ಟದ ಆಯ್ಕೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಆಯಾ ವರ್ಷದ ಜೂ.1 ರಂದು 18 ವರ್ಷ ಒಳಪಟ್ಟಿರಬೇಕು. ಪಿಯುಸಿಗೆ ಮಾತ್ರ ಪ್ರವೇಶ ನೀಡಲಾಗುವುದು. ಕಿರಿಯ ಹಾಗೂ ಹಿರಿಯ ಕ್ರೀಡಾ ವಸತಿ ಶಾಲೆಗೆ ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್ಬಾಲ್, ವಾಲಿಬಾಲ್, ಜಿಮ್ನಾಸ್ಟಿಕ್ (ಬಾಲಕ, ಬಾಲಕಿಯರಿಗೆ), ಫುಟ್ಬಾಲ್, ಕುಸ್ತಿ (ಬಾಲಕರಿಗಾಗಿ) ಈ ಕ್ರೀಡೆಗಳಲ್ಲಿ ಆಯ್ಕೆ ನಡೆಯಲಿದೆ. ಈ ಆಯ್ಕೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ರಾಮನಗರ ಇಲ್ಲಿಂದ ಪಡೆದು ಜ.25ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಸದರಿ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂಣ080-27274655, ಮೊ.9449627689 ಸಂಪರ್ಕಿಸಬಹುದು