ನಿವೃತ್ತ ಶಿಕ್ಷಕಿ ಕೊಲೆ ಭೇದಿಸಿದ ಪೊಲೀಸರು
ಚನ್ನಪಟ್ಟಣ: ಐಪಿಎಲ್ ಬೆಟ್ಟಿಂಗ್ನಿಂದಾಗಿ ಸಾಲದ ಸುಳಿಗೆ ಸಿಲುಕಿದ್ದ ವಿದ್ಯಾರ್ಥಿಗಳು, ಹಣಕ್ಕಾಗಿ ನಿವೃತ್ತ ಶಿಕ್ಷಕಿಯನ್ನು ಕೊಲೆಗೈದಿರುವ ಘಟನೆಯನ್ನು ಎರಡೂವರೆ ತಿಂಗಳ ಬಳಿಕ ಭೇದಿಸುವಲ್ಲಿ ಪುರ ಪೊಲೀಸರು ಸಫಲರಾಗಿದ್ದಾರೆ.
ಪಟ್ಟಣದ ಕೋಟೆ ಲಾಯದ ಬೀದಿಯಲ್ಲಿ ನಿವೃತ್ತ ಶಿಕ್ಷಕಿ ಇಂದ್ರಮ್ಮ (65) ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. ಇವರು 2013ರ ಅ.24 ರಂದು ಸಾವಿಗೀಡಾಗಿದ್ದರು. ಇದು ಅಸ್ವಾಭಾವಿಕ ಮರಣ ಎಂದು ದೂರು ದಾಖಲಿಸಿ ಕೊಂಡಿದ್ದ ಪುರ ಪೊಲೀಸರು ತನಿಖೆ ಕೈಗೊಂಡಿದ್ದರು.
ಮೃತರ ಅಂತಿಮ ಸಂಸ್ಕಾರಕ್ಕೆ ಆಗಮಿಸಿದ ಅವರ ಪುತ್ರ ತಾಯಿಯ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಕಂಡು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ವೃದ್ಧ ಶಿಕ್ಷಕಿಯನ್ನು ಕೊಲೆಗೈದಿದ್ದ ಆರೋಪಿಗಳಾದ ಪ್ರಥಮ ಬಿಎ ವಿದ್ಯಾರ್ಥಿ ರಾಜಾಚಾರಿ, ಕಿರಣ್ ಮತ್ತು ಸಿದ್ದರಾಜು ಅವರನ್ನು ಬಂಧಿಸಿದ್ದಾರೆ.
ಸುಳಿವು ನೀಡಿದ ಮೊಬೈಲ್: ಕಳೆದ ಎರಡೂವರೆ ತಿಂಗಳ ಹಿಂದೆ ನಡೆದಿದ್ದ ಸಾವನ್ನು ಸ್ವಾಭಾವಿಕ ಮರಣ ಎಂದು ಸುಮ್ಮನಾಗಿದ್ದ ಪೊಲೀಸರಿಗೆ ಅನುಮಾನ ಆರಂಭವಾಗಿದ್ದು ಮೃತರ ಮೊಬೈಲ್ ಸಿಗದಿದ್ದರಿಂದ. ಶಿಕ್ಷಕಿಯ ಮೊಬೈಲ್ ಸಂಪರ್ಕದಬಗ್ಗೆ ಮಾಹಿತಿ ಕಲೆಹಾಕಲಾರಂಭಿಸಿದ ಪೊಲೀಸರಿಗೆ ಕೆಲದಿನಗಳ ಹಿಂದಷ್ಟೇ
ಮೊಬೈಲ್ ಬೇರೊಂದು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಗತಿ ಅರಿವಿಗೆ ಬಂದಿದೆ. ಮೊಬೈಲ್ನ ಸುಳಿವಿನ ಮೇರೆಗೆ ಎಚ್. ಕೊತ್ತನೂರು ಗ್ರಾಮದ ರಾಜಾಚಾರಿ ಎಂಬ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಅನಾವರಣ ಗೊಂಡಿದೆ.
ನಿವೃತ್ತ ಶಿಕ್ಷಕಿಯಾಗಿದ್ದ ಇಂದ್ರಮ್ಮ ಕೋಟೆಯ ಲಾಯದ ಬೀದಿಯಲ್ಲಿರುವ ತಮ್ಮ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಇವರ ಮಗ ವಿದೇಶದಲ್ಲಿದ್ದು ಇವರ ಮನೆಯನ್ನು ಉಪನ್ಯಾಸಕ ಮೂರ್ತಿ ಎಂಬುವರಿಗೆ ಬಾಡಿಗೆಗೆ ನೀಡಿದ್ದರು. ಉಪನ್ಯಾಸಕರ ಮನೆಗೆ ನೋಟ್ಸ್, ಪುಸ್ತಕ ಪಡೆಯಲು ಬರುತ್ತಿದ್ದ ರಾಜಾಚಾರಿ ಐಪಿಎಲ್ ಜೂಜಿನಿಂದಾಗಿ ಸಾಲದ ಸುಳಿಗೆ ಸಿಲುಕಿದ್ದು, ಒಂಟಿಯಾಗಿದ್ದ ಶಿಕ್ಷಕಿಯ ಮನೆಯಲ್ಲಿ ಕಳವು ಮಾಡುವ ತಂತ್ರ ಹಣೆದಿದ್ದಾನೆ.
ತನ್ನ ಸ್ನೇಹಿತರಾದ ಕಿರಣ್ ಮತ್ತು ಸಿದ್ದರಾಜು ಸಂಗಡ ಮನೆಗೆ ನುಗ್ಗಿ 53 ಗ್ರಾಂ. ಚಿನ್ನದ ಸರ, 3500 ರು. ನಗದನ್ನು ಕಳವು ಮಾಡಿದ್ದಾರೆ. ಇವರು ಕಳವು ಮಾಡುತ್ತಿರುವುದನ್ನು ಕಂಡ ಇಂದ್ರಮ್ಮ ಪ್ರತಿಭಟಿಸಿದಾಗ ಆರೋಪಿಗಳು ಅವರನ್ನು ಕೆಳಗೆ ತಳ್ಳಿ, ಬಿಗಿಯಾಗಿ ಕುತ್ತಿಗೆ ಹಿಡಿದಿದ್ದಾರೆ. ಇದರಿಂದಾಗಿ ಉಸಿರು ಗಟ್ಟಿದ ಇಂದ್ರಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಅಭಿನಂದನೆ: ಪ್ರಕರಣವನ್ನು ಭೇದಿಸುವಲ್ಲಿ ಸಫಲಗೊಂಡಿರುವ ಎಎಸ್ಪಿ ಕುಲದೀಪ್ ಸಿಂಗ್ ಜೈನ್, ವೃತ್ತ ನಿರೀಕ್ಷಕ ಅಂಜನ್ಕುಮಾರ್, ಪುರಠಾಣೆ ಪಿಎಸೈ ವಿಜಯ್ ಕುಮಾರ್ ಮತ್ತು ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಅಭಿನಂದಿಸಿದ್ದಾರೆ.