ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೇಸಿಗೆಗೆ ಮುನ್ನವೇ ಕುಡಿವ ನೀರಿನ ಬವಣೆ

Vishwanath S
Updated On : 14 Jan 2014, 1:24 am

ಕ.ಪ್ರ.ವಾರ್ತೆ ,  ರಾಮನಗರ ,  ಜ. 13
ಜಿಲ್ಲೆಯಲ್ಲಿ ಬೇಸಿಗೆಗೆ ಮುನ್ನವೇ ಕುಡಿಯುವ ನೀರಿನ ಬವಣೆ ಮತ್ತೊಮ್ಮೆ ಎದುರಾಗಿದೆ. ಅಸಮರ್ಪಕ ಕುಡಿಯುವ ನೀರು ಪೂರೈಕೆ ಹಿನ್ನೆಲೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿ ಗ್ರಾಮಸ್ಥರು ಈಗಾಗಲೇ ಬೀದಿಗೆ ಇಳಿದಿದ್ದಾರೆ.
ಕಳೆದೆರಡು ವರ್ಷದಿಂದ ಕುಡಿಯುವ ನೀರಿಗಾಗಿ ಈ ಗ್ರಾಮದಲ್ಲಿ ಕೊರೆದ ಎಲ್ಲ ಕೊಳವೆ ಬಾವಿಗಳು ವಿಫಲಗೊಂಡಿದ್ದು, ನೀರಿಗಾಗಿ ಹಾಹಾಕಾರ ಎದುರಾದ ಹಿನ್ನೆಲೆಯಲ್ಲಿ ಖಾಲಿ ಕೊಡ ಹಿಡಿದ ಗ್ರಾಮಸ್ಥರು ನಗರದ ಜಿ.ಪಂ. ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ, ಜಿ.ಪಂ. ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಜಿ.ಪಂ. ಸಿಇಒ ಡಾ.ಎಂ.ವಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿ, ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಸಮಸ್ಯಾತ್ಮಕ ಗ್ರಾಮ: ರಾಮನಗರದಿಂದ ನಾಲ್ಕೈದು ಕಿ.ಮೀ. ದೂರದಲ್ಲಷ್ಟೇ ಇರುವ ಕುರುಬರಹಳ್ಳಿಯು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮವೆಂದು ಕಳೆದ ವರ್ಷ ಬೇಸಿಗೆಯಲ್ಲೇ ಘೋಷಣೆಯಾಗಿತ್ತು. ಅಲ್ಲಿ ಕುಡಿಯುವ ನೀರು ಕಲ್ಪಿಸಲು ಕೊರೆದ ಕೊಳವೆ ಬಾವಿಗಳೆಲ್ಲವೂ ವಿಫಲವಾಗಿವೆ.
ಈ ವರ್ಷ ಬೇಸಿಗೆಗೆ ಮುನ್ನವೇ ಗ್ರಾಮದಲ್ಲಿ ನೀರಿನ ಸಮಸ್ಯೆ ಮರುಕಳಿಸಿದೆ. ಖಾಸಗಿಯವರು ಸರಬರಾಜು ಮಾಡುತ್ತಿರುವ ನೀರನ್ನು ಕೊಡಕ್ಕೆ ರು.3 ಕೊಟ್ಟು ಖರೀದಿಸಬೇಕು ಇಲ್ಲವೇ ಹೊರ ವಲಯದಲ್ಲಿರುವ ಕೃಷಿ ಪಂಪ್ ಸೆಟ್‌ಗಳಿಂದ ನೀರಿಡಿದು ತರುವ ದಯನೀಯ ಸ್ಥಿತಿ ಎದುರಾಗಿದೆ.
ದೂರಿಗೆ ಸ್ಪಂದಿಸಿಲ್ಲ: ಕುಡಿಯುವ ನೀರಿನ ಬವಣೆ ನೀಗಿಸುವ ಸಂಬಂಧ ಗ್ರಾಮಸ್ಥರು ಜಿಲ್ಲಾಡಳಿತ ಮತ್ತು ಜಿ.ಪಂ.ಗೆ ಹತ್ತು ಹಲವು ಬಾರಿ ಮನವಿ ಸಲ್ಲಿಸಿದ್ದಾಗ್ಯೂ ಪ್ರಯೋಜನವಾಗಿಲ್ಲ. ಜಡ್ಡುಗಟ್ಟಿದ ಆಡಳಿತ ಮತ್ತು ಬೇಜವಾಬ್ದಾರಿ ಜನಪ್ರತಿನಿಧಿಗಳ ಅಸಡ್ಡೆಯಿಂದ ಗ್ರಾಮಸ್ಥರ ಗೋಳು ಮುಗಿದಿಲ್ಲ.
ಕುಡಿಯುವ ನೀರಿಗಾಗಿ ಸರ್ಕಾರ ಕೋಟಿಗಟ್ಟಲೆ ಅನುದಾನ ಬಿಡುಗಡೆಯಾಗುತ್ತಿದ್ದರೂ ಜಿಲ್ಲಾ ಕೇಂದ್ರ ರಾಮನಗರದಿಂದ ಅನತಿ ದೂರದಲ್ಲಿರುವ ಸುಮಾರು ಒಂದು ಸಾವಿರ ಜನಸಂಖ್ಯೆ ಹೊಂದಿದ ಕುರುಬರಹಳ್ಳಿ ಗ್ರಾಮಸ್ಥರ ನೀರಿನ ಬವಣೆ ನೀಗಿಸದಿರುವುದು ವಿಪರ್ಯಾಸದ ಸಂಗತಿ.
ಪಕ್ಕದಲ್ಲೇ ಪೈಪ್‌ಲೈನ್: ತೊರೆಕಾಡನಹಳ್ಳಿಯಿಂದ ಚನ್ನಪಟ್ಟಣ ಮಾರ್ಗವಾಗಿ ರಾಮನಗರಕ್ಕೆ ಸಂಪರ್ಕ ಕಲ್ಪಿಸಲಾಗಿರುವ ಕಾವೇರಿ ಕುಡಿಯುವ ನೀರಿನ ಪೈಪ್ ಲೈನ್ ಕುರುಬರಹಳ್ಳಿಯಿಂದ ಗರಿಷ್ಠ 3 ಕಿ.ಮೀ. ಅಂತರದಲ್ಲಷ್ಟೇ ಹಾದು ಹೋಗಿದೆ. ಅಲ್ಲಿಂದ ಪೈಪ್‌ಲೈನ್ ಅಳವಡಿಸಿದರೆ ಈ ಗ್ರಾಮದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬಹುದಾಗಿದೆ. ಇಂಥದ್ದೊಂದು ಕಾಮಗಾರಿಗೆ ಹೆಚ್ಚೆಂದರೆ ರು.15 ಲಕ್ಷ ಅನುದಾನವಷ್ಟೇ ಸಾಕು. ಗ್ರಾಮದಲ್ಲಿ ಈಗಾಗಲೇ ಕೊರೆದು, ವಿಫಲವಾಗಿರುವ ಕೊಳವೆ ಬಾವಿಗಳಿಗೆ ಮಂಜೂರು ಮಾಡಿ ಗುತ್ತಿಗೆದಾರರ ಜೇಬು ತುಂಬಿಸಿರುವ ಬಿಲ್ ಮೊತ್ತದಲ್ಲಿ ಪೈಪ್‌ಲೈನ್ ಅಳವಡಿಸಬಹುದಿತ್ತು.
ಕಪಿಮುಷ್ಟಿಗಳ ಅಡ್ಡಗಾಲು: ಕುರುಬರಹಳ್ಳಿ ಗ್ರಾಮಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆ ಕಾಮಗಾರಿ ಅನುಷ್ಟಾನಗೊಳಿಸುವುದಕ್ಕೆ ಸ್ಥಳೀಯ ಪ್ರಭಾವಿಗಳೆನಿಸಿರುವ ಕೆಲವೇ ಕಪಿಮುಷ್ಟಿಗಳ ಅಡ್ಡಗಾಲು ಕಾರಣವಾಗಿದೆ ಎಂದು ಅಲ್ಲಿನ ಗ್ರಾಮಸ್ಥರೇ ಆರೋಪಿಸುತ್ತಾರೆ.
ರಾಮನಗರ ಜಿಲ್ಲೆ ಘಟಾನುಘಟಿ ರಾಜಕಾರಣಿಗಳನ್ನು ಹೊಂದಿದ್ದು, ರಾಜಕೀಯವಾಗಿ ಸಾಕಷ್ಟು ಅಧಿಕಾರವನ್ನು ಸವಿದಿದೆ. ಹೊರ ನೋಟಕ್ಕಷ್ಟೇ ಅಭಿವೃದ್ಧಿ ಹೊಂದಿದ ಪ್ರದೇಶ. ಈ ಜಿಲ್ಲೆಯ ಅರ್ಧದಷ್ಟು ಗ್ರಾಮಗಳಲ್ಲಿ ಕುಡಿಯುವ ನೀರು ಸಹಿತ ಮೂಲ ಸೌಲಭ್ಯಗಳಿಲ್ಲ ಎನ್ನುವ ಸಂಗತಿ ಆತಂಕಕಾರಿಯಾಗಿದೆ.
ಇದು ಕಡೆಯ ಎಚ್ಚರಿಕೆ: ಗ್ರಾಮದಲ್ಲಿ ಎದುರಾಗಿರುವ ಸಮಸ್ಯೆಗೆ ಜಿಲ್ಲಾಡಳಿತ, ಜಿ.ಪಂ. ಸ್ಪಂದನೆ ಇಲ್ಲ. ಸ್ಥಳೀಯವಾಗಿರುವ ಗ್ರಾಮ ಪಂಚಾಯಿತಿ ಕೂಡ ರಾಜಕಾರಣದಲ್ಲೇ ಮುಳುಗಿದೆ. ಗ್ರಾ.ಪಂ. ಆಡಳಿತಕ್ಕೆ ಜನರ ದೂರು, ದುಮ್ಮಾನಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕನಿಷ್ಟ ಕಾಳಜಿ ಇಲ್ಲ. ಸಮಸ್ಯೆ ಹುಟ್ಟುಹಾಕುವಲ್ಲಿ ಗ್ರಾ.ಪಂ. ಆಡಳಿತದ ಪಾಲು ಅರ್ಧದಷ್ಟಿದೆ ಎಂದು ಗ್ರಾಮಸ್ಥರು ದೂಷಿಸಿದ್ದಾರೆ.
ಕುಡಿಯುವ ನೀರಿನ ಬವಣೆ ಕುರಿತು ಪದೇ ಪದೇ ಮನವಿ ಸಲ್ಲಿಸಿ, ಹೋರಾಟ ನಡೆಸುತ್ತಲೇ ಬಂದಿದ್ದೇವೆ. ನಮ್ಮ ತಾಳ್ಮೆಗೂ ಮಿತಿ ಇದೆ. ಶೀಘ್ರ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಸಾಕು ಪ್ರಾಣಿಗಳ ಸಮೇತ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ತಾತ್ಕಾಲಿಕ ವ್ಯವಸ್ಥೆ: ಮನವಿ ಸ್ವೀಕರಿಸಿದ ಜಿ.ಪಂ. ಸಿಇಒ ಡಾ.ಎಂ.ವಿ. ವೆಂಕಟೇಶ್, ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ತಾತ್ಕಾಲಿಕ ವ್ಯವಸ್ಥೆ ಕೈಗೊಳ್ಳುವ ಕುರಿತು ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಂಡಿತು. ಪ್ರತಿಭಟನೆಯಲ್ಲಿ ಸೋಮಶೇಖರ್, ಬೋರಯ್ಯ, ಶಿವಣ್ಣ, ದೇವರಾಜು, ವೆಂಕಟೇಶ್, ಚಕ್ಕಲೂರು ಚೌಡಯ್ಯ, ಶಿವರಾಮ್, ಶಾಂತಮೂರ್ತಿ, ನಿಂಗೇಗೌಡ, ದಂಡುವಯ್ಯ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement