ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿವಿಧೆಡೆ ಕಳ್ಳತನ ಮಾಡಿದ ರು. 11 ಲಕ್ಷ ಮೌಲ್ಯದ ಮಾಲು ವಶ

Vishwanath S
Updated On : 14 Jan 2014, 1:26 am

ರಾಮನಗರ: ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ 9ಕ್ಕೂ ಹೆಚ್ಚು ಕಡೆ ಕಳ್ಳತನ ನಡೆಸಿದ್ದ ಆರೋಪಿಯನ್ನು ಬಂಧಿಸಿರುವ ರಾಮನಗರ ಗ್ರಾಮಾಂತರ ಪೊಲೀಸರು ರು.11 ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
ಕನಕಪುರ ತಾಲೂಕಿನ ಚಿಕ್ಕೊಪ್ಪ ಗ್ರಾಮದ ಲೋಕೇಶ ಅಲಿಯಾಸ್ ಲೋಕಿ(22) ಬಂಧಿತ ಆರೋಪಿ. ಸಹಚರ ಮಹದೇವ ಎಂಬುವನ ಜತೆ ಸೇರಿಕೊಂಡು, ಕಳ್ಳತನ ಕೃತ್ಯ ಎಸಗಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಅನುಪಮ್ ಅಗ್ರವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  ರಾಮನಗರ ತಾಲೂಕಿನ ತಿಬ್ಬೇಗೌಡನದೊಡ್ಡಿಯ ಜ್ಞಾನಸಿಂಧು ಗ್ರಾಮಾಂತರ ಶಾಲೆಯ ಬೀಗ ಮುರಿದು ಅಕ್ಷರ ದಾಸೋಹ ಕಾರ್ಯಕ್ರಮದ ಆಹಾರ ಪದಾರ್ಥ, ಶಾಲೆಯ ಟೇಪ್ ರೆಕಾರ್ಡರ್, ಕಂಪ್ಯೂಟರ್, 2 ಗ್ಯಾಸ್ ಸಿಲಿಂಡರ್‌ಗಳನ್ನು ಆತ ಮಹೇಂದ್ರ ಮ್ಯಾಕ್ಸಿಮೋ ಗೂಡ್ಸ್ ವಾಹನಕ್ಕೆ ತುಂಬುತ್ತಿದ್ದನು.
ಆಗ ಸ್ಥಳೀಯರು ಹಿಡಿಯಲೆತ್ನಿಸಿದಾಗ ವಾಹನ ಬಿಟ್ಟು ಆರೋಪಿ ಲೋಕೇಶ ಸಹಚರರೊಂದಿಗೆ ಪರಾರಿಯಾಗಿದ್ದನು. ಈ ಸಂಬಂಧ ಶಾಲೆ ಮುಖ್ಯಶಿಕ್ಷಕ ಕೆ.ನಾರಾಯಣಗೌಡ ಅವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ರಾಮನಗರ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಗ್ರವಾಲ್ ಹೇಳಿದರು.
ಆರೋಪಿಯು ರಾಮನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 2, ಕೋಡಿಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 2, ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆಯಲ್ಲಿ 1, ಹಾರೋಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 1, ಕನಕಪುರ ಟೌನ್ ಠಾಣೆ ವ್ಯಾಪ್ತಿಯಲ್ಲಿ 2, ಕನಕಪುರ ಗ್ರಾಮಾಂತರ ಠಾಣೆಯಲ್ಲಿ 2, ಹೊಸಕೋಟೆ ಠಾಣೆ ವ್ಯಾಪ್ತಿಯಲ್ಲಿ 1 ಕಳವು ಪ್ರಕರಣ ನಡೆಸಿದ್ದಾನೆ ಎಂದು ವಿವರಿಸಿದರು.  ಕಳ್ಳನಿಂದ ಸಹಸ್ರಾರು ರು. ಬೆಲೆ ಬಾಳುವ ಆಹಾರ ಪದಾರ್ಥಗಳು, ವಾಹನಗಳು, ಕಂಪ್ಯೂಟರ್‌ಗಳು, ಬ್ಯಾಟರಿಗಳು, ಸಿಪಿಯು, ಫ್ಯಾನ್, ಡಿವಿಡಿ ಪ್ಲೇಯರ್, ಕ್ಯಾಮೆರಾ, ಯುಪಿಎಸ್ ಸಹಿತ ನಾನಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ರಾಮನಗರ ಗ್ರಾಮಾಂತರ ಇನ್ಸ್‌ಪೆಕ್ಟರ್ ವಸಂತಕುಮಾರ್ ಮತ್ತು ತಂಡವನ್ನು ಅಗ್ರವಾಲ್ ಅಭಿನಂದಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement