ಆನೇಕಲ್ ಗಡಿ ಭಾಗದಲ್ಲಿ 36 ಗಜ ಪಯಣ
ಕ.ಪ್ರ. ವಾರ್ತೆ , ಆನೇಕಲ್ , ಜ.14
ಕಳೆದ 15 ದಿನಗಳಿಂದ ಕೃಷ್ಣಗಿರಿ, ವೆಂಕಟೇಶ್ವರ, ಸೂಳಗಿರಿ ಸುತ್ತಮುತ್ತಲೂ ದಾಳಿ ನಡೆಸಿ ರಾಗಿ ಹಾಗೂ ಇತರೇ ಬೆಳೆಗಳನ್ನು ತಿಂದು ಹಾಳು ಮಾಡಿದ ಆನೆಗಳು ಆನೇಕಲ್ ಗಡಿ ಎಲ್ಲೆಯ ದೇವರ ಬೆಟ್ಟ ಅರಣ್ಯ ಪ್ರದೇಶ ದತ್ತ ಮುಖ ಮಾಡಿ ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟಿವೆ. ಸುಮಾರು 36ಕ್ಕೂ ಹೆಚ್ಚು ಆನೆಗಳಿರುವ ಹಿಂಡಿನಲ್ಲಿ 4 ಮರಿ ಆನೆಗಳಿವೆ.
ತಮಿಳುವಾಡಿನ ಗುಮ್ಮಳಾಪುರ ತೋಪಿನಲ್ಲಿ ಆನೆಗಳು ಬಂದಿವೆ ಎಂಬ ಸುದ್ದಿಯನ್ನು ಆಲಿಸಿ ಆನೇಕಲ್ ಸೇರಿದಂತೆ ಸಾವಿರಾರು ಜನರು ಕಾಡಂಚಿಗೆ ತೆರಳಿದರು. ಸೋಮವಾರ ರಾತ್ರಿ ಈ ಪ್ರಾಂತಕ್ಕೆ ಬಂದ ಆನೆಗಳು ಶ್ಯಾಮನತ್ತ, ಭಿನ್ನಮಂಗಲದಲ್ಲಿ ರಾಗಿ ಬೆಳೆ ಹಾಗೂ ಇತರೇ ಬೆಳೆಗಳನ್ನು ತಿಂದು ತುಳಿದು ನಾಶ ಮಾಡಿವೆ. ದೇವರಬೆಟ್ಟ ಅರಣ್ಯ ಪ್ರದೇಶ ಬಿಟ್ಟ ಆನೆಗಳು ಬನ್ನೇರುಘಟ್ಟ ಅರಣ್ಯ ದತ್ತ ಮುಖ ಮಾಡಿವೆ. ಆನೆಗಳ ಉಪಟಳ ತಾಳದ ತಮಿಳುನಾಡಿನ ಅರಣ್ಯ ಸಿಬ್ಬಂದಿ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಎಂದಿನಂತೆ ಬನ್ನೇರುಘಟ್ಟ ಕಾಡಿನತ್ತ ಆನೆಗಳನ್ನು ಅಟ್ಟುವ ಸಂಚು ಹೂಡಿದ್ದಾರೆ.
ಎಚ್ಚೆತ್ತುಕೊಂಡ ಬನ್ನೇರುಘಟ್ಟ ಅರಣ್ಯ ಸಿಬ್ಬಂದಿ ಇಂದೆ ಮುಂಜಾಗ್ರತೆ ವಹಿಸದಿದ್ದಲ್ಲಿ ತಮ್ಮನಾಯಕನಹಳ್ಳಿ, ಬನ್ನೇರುಘಟ್ಟ, ರಾಗಿಹಳ್ಳಿ ಮಂಟಪ ಕಡೆ ಬರುವ ಸೂಚನೆಯಿದೆ. ಮೇಲ್ಕಂಡ ಹಳ್ಳಿಗಳು ಆನೆ ಜಾಡಿನಲ್ಲಿ ಬರುವುದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಕಾಡಾನೆ ನಾಡಿಗೆ ಬರುವ ಸಂಭವವಿದೆ. ಬೆಳೆ ನಾಶ, ಮನುಷ್ಯರ ಮೇಲೆ ದಾಳಿ ಮುಂತಾದ ಅವಘಡಗಳಿಗೆ ನಂತರ ಪಶ್ಚತ್ತಾಪ ಪಡುವ ಬದಲು ಆನೆ ಬರದಂತೆ ತಡೆಯುವುದು ಸೂಕ್ತ ಎಂದು ಗ್ರಾಮಸ್ಥರು ಹೇಳುತ್ತಾರೆ.