ದಕ್ಷಿಣಕಾಶಿಯಲ್ಲಿ ವೈಭವದ ಗಿರಿಜಾ ಕಲ್ಯಾಣೋತ್ಸವ
ನೆಲಮಂಗಲ: ದಕ್ಷಿಣ ಕೈಲಾಸ, ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ತಾಲೂಕಿನ ಕೀರ್ತಿ ಮಕುಟ ಶಿವಗಂಗಾ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಗಂಗಾಧರೇಶ್ವರ ಮತ್ತು ಹೊನ್ನಮ್ಮದೇವಿ ಗಿರಿಜಾ ಕಲ್ಯಾಣ ಮಹೋತ್ಸವವು ಮಕರ ಸಂಕ್ರಾತಿಯಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಉಲ್ಪಿ ಉತ್ಸವ, ನಂದಿಗ್ರಹ ಯಜ್ಞ, ಉರುಟಣೆ, ನಾಕಬಲಿ, ವಸಂತೋತ್ಸವ, ಶಯನೋತ್ಸವ, ಸಂಪ್ರೋಕ್ಷಣೆಯಂತಹ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದು ಜಾತ್ರಾ ಮಹೋತ್ಸವ ರಾಜ್ಯಾದ್ಯಂತ ಸಾವಿರಾರು ಭಕ್ತರನ್ನು ಆಕರ್ಷಿಸಿತು.
ಸ್ಥಳದ ಮಹಿಮೆ: ಪ್ರಶಾಂತ ಪ್ರಕೃತಿ ಸೌಂದರ್ಯದ ಮಡುವಿನಲ್ಲಿ ಈ ಬೆಟ್ಟ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಪ್ರಖ್ಯಾತಿ ಪಡೆದ ಗಿರಿಧಾಮಗಳಲ್ಲಿ ಒಂದಾಗಿದೆ. ದಕ್ಷಿಣಕಾಶಿ ಎಂದೇ ಪುರಾಣ ಪ್ರಸಿದ್ಧಿಯನ್ನು, ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಪುಣ್ಯ ಗಿರಿಯಾಗಿದೆ.
ಸಮುದ್ರ ಮಟ್ಟದಿಂದ 4559 ಅಡಿ ಎತ್ತರದಲ್ಲಿದೆ. ವಿಶೇಷವಾಗಿ ಗಿರಿಶಿಖರವು ಪೂರ್ವ ದಿಕ್ಕಿನಿಂದ ನಂದಿಯಾಕಾರ, ಪಶ್ಚಿಮದಿಂದ ಗಣೇಶಾಕಾರ, ಉತ್ತರದಿಂದ ಲಿಂಗಾಕಾರ, ದಕ್ಷಿಣದಿಂದ ಸರ್ಪಾಕಾರವಾಗಿ ಗೋಚರಿಸಿ, ಭಕ್ತರಲ್ಲಿ ಅಚ್ಚರಿಯನ್ನುಂಟು ಮಾಡಿರುವುದಲ್ಲದೆ ಕೃತಯುಗದಲ್ಲಿ ಮಂದಾಕಿನಿ ಪರ್ವತ, ತ್ರೇತಾಯುಗದಲ್ಲಿ ಏಕ ಶೃಂಗಾದ್ರಿ, ದ್ವಾಪರಯುಗದಲ್ಲಿ ಪುಂಗವಾದ್ರಿಯೆಂದು ಹೆಸರು ಪಡೆದ ಪ್ರತೀತಿ. ಕಲಿಯುಗದಲ್ಲಿ ಕಕುದ್ಗಿರಿ ಎಂದು ನಾಮಾಂಕಿತಗೊಂಡಿದೆ.
ಪರಶಿವನ ಆಜ್ಞೆಯಂತೆ ನಂದೀಶ್ವರನು ಪಾರ್ವತಿಗೆ ಭೂಲೋಕ ತೋರಿಸಲು ಬಂದಾಗ ಈ ಬೆಟ್ಟದ ಪ್ರಶಾಂತ ಸೌಂದರ್ಯಕ್ಕೆ ಮನಸೋತು, ತನ್ನ ಕುತ್ತಿಗೆ ಮೇಲೆ ಈ ಬೆಟ್ಟವನ್ನು ಹೊತ್ತು ದೀರ್ಘಕಾಲ ತಪಸ್ಸು ಆಚರಿಸಿದನಂತೆ, ಈ ಕಾರಣದಿಂದ ಈ ಕ್ಷೇತ್ರಕ್ಕೆ ಕಕುದ್ಗಿರಿ ಎಂಬ ಹೆಸರು ಬಂತೆಂದು ಉಲ್ಲೇಖಗಳು ತಿಳಿಸುತ್ತಿವೆ.
ಕಲ್ಲೆಲ್ಲಾ ಲಿಂಗ: ಶಿವಗಂಗೆಯಲ್ಲಿ ಕಲ್ಲೆಲ್ಲಾ ಲಿಂಗ, ಹುಲ್ಲೆಲ್ಲಾ ಪತ್ರೆ, ನೀರೆಲ್ಲಾ ತೀರ್ಥವಾಗಿದೆ. ಪುರಾಣದಲ್ಲಿ ದೇವಲೋಕದಲ್ಲಿ ನಡೆಯುವ ಗಿರಿಜಾ ಕಲ್ಯಾಣಕ್ಕೆ ಅಗಸ್ತ್ಯ ಮುನಿಗಳು ಹೋಗಲು ತಡವಾಯಿತಂತೆ. ಬೇಸರಗೊಂಡ ಅಗಸ್ತ್ಯಮುನಿ ಶಿವನನ್ನು ಪ್ರಾರ್ಥಿಸಲು ಶಿವನು ಮುನಿಗಳ ಕೋರಿಕೆಯಂತೆ ಕ್ಷೇತ್ರದಲ್ಲಿ ನೆಲೆಸಿ ಪ್ರತಿ ವರ್ಷವೂ ಮುನಿಗಳು ಕಲ್ಯಾಣ ಮಹೋತ್ಸವವನ್ನು ನೋಡುವ ಭಾಗ್ಯ ಕರುಣಿಸಿದನಂತೆ. ಅಂದಿನಿಂದ ಪ್ರತೀ ವರ್ಷ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾತಿಯಂದು ಬೆಟ್ಟದ ತುದಿಯಲ್ಲಿನ ತೀರ್ಥ ಕಂಬದಲ್ಲಿ ಉದ್ಭವಿಸುವ ಪವಿತ್ರ ಗಂಗೋದಕವನ್ನು ತಂದು ಶಾಸ್ತ್ರೋಕ್ತವಾಗಿ ಶ್ರೀ ಗಂಗಾಧರೇಶ್ವರ ಮತ್ತು ಹೊನ್ನಮ್ಮದೇವಿಯ ಮೇಲೆ ಧಾರೆ ಎರೆದು ಗಿರಿಜಾ ಕಲ್ಯಾಣ ನೆರವೇರಿಸಲಾಗುತ್ತದೆ. ಸ್ಥಳೀಯರು ಇದನ್ನು ಗಂಗಪ್ಪನ ಧಾರೆ ಎಂದು ಕರೆಯುವರು.
ಗಂಗಾಧರೇಶ್ವರ ಶಿವಲಿಂಗದ ಮೇಲೆ ಭಕ್ತರು ತುಪ್ಪದ ಅಭಿಷೇಕ ಮಾಡಿದರೆ ಅದು ಮತ್ತೆ ಬೆಣ್ಣೆಯಾಗಿ ವಿಶೇಷ ವಿಸ್ಮಯ ಉಂಟುಮಾಡುವ ಸಂಗತಿ ನಿಜಕ್ಕೂ ರೋಚಕವಾಗಿದೆ.
ಜಾತ್ರೆಯಲ್ಲಿ ದೇವರನ್ನು ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಜನರು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದು, ಯುವಕರು, ಮಹಿಳೆಯರು, ವೃದ್ಧರು ಎಲ್ಲರು ಸರದಿ ಸಾಲಿನಲ್ಲಿ ಶಿಖರವನ್ನೇರಿ ಸಂತಸಪಟ್ಟರು.
-ಎನ್.ರಾಜಶೇಖರ್