ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರಕ್ಕಾಗಿ ವ್ಯಾಪಕ ಹೋರಾಟ

Vishwanath S
Updated On : 15 Jan 2014, 1:20 am

ಕ.ಪ್ರ. ವಾರ್ತೆ ,  ದೊಡ್ಡಬಳ್ಳಾಪುರ  ,  ಜ. 14
ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ಘೋಷಿಸಬೇಕು ಎಂಬ ಆಗ್ರಹ ಮತ್ತೆ ಹೋರಾಟದ ಹಾದಿ ತಲುಪಿದೆ.
ಹಲವು ವರ್ಷಗಳ ನ್ಯಾಯಸಮ್ಮತ ಬೇಡಿಕೆ ಈಡೇರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಅನಿರ್ದಿಷ್ಟಾವಧಿ ವಿನೂತನ ಚಳವಳಿಗಳು ಆರಂಭವಾಗಲಿವೆ.
ಸರ್ಕಾರದ ಹಂತದಲ್ಲಿ ಈಗಾಗಲೇ ಹಲವು ಬಾರಿ ಗಮನ ಸೆಳೆಯುವ ಪ್ರಯತ್ನಗಳಾಗಿದ್ದು, 2008ರಲ್ಲಿ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿದ ಸಂದರ್ಭದಲ್ಲೇ ದೊಡ್ಡಬಳ್ಳಾಪುರವನ್ನೂ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕಿತ್ತು. ಆದರೆ ಆಗಿನ ಸರ್ಕಾರ ಈ ಬಗ್ಗೆ ಚಿಂತಿಸದ ಕಾರಣ ಈಗ ಹೋರಾಟದ ಹಾದಿ ಹಿಡಿಯುವಂತಾಗಿದೆ. ಅವಿಭಜಿತ ಜಿಲ್ಲೆಯ ಈ ಎರಡೂ ಉಪವಿಭಾಗಗಳಲ್ಲಿ ದೊಡ್ಡಬಳ್ಳಾಪುರಕ್ಕೆ ಅರ್ಹತೆ ವಂಚಿಸಲಾಗಿದೆ. ಇಲ್ಲಿನ ಜನರ ಬಹುದಿನದ ಹೋರಾಟ ಮತ್ತು ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ಸರ್ಕಾರದ ವಿವಿಧ ಇಲಾಖೆಗಳ ಅಂಕಿ-ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಬಹುದಿನದ ಬೇಡಿಕೆ: ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಬೇಕು ಎಂಬುದು ಬಹುದಿನದ ಬೇಡಿಕೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ದೇವನಹಳ್ಳಿಯಲ್ಲೂ ಈ ಹೋರಾಟ ಆರಂಭವಾಗಿದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರದ ವಿಸ್ತೃತ ಭಾಗವಾಗಿ ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆ ನಗರಗಳನ್ನು ಕ್ಲಸ್ಟರ್ ಸಿಟಿಗಳಾಗಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದೆ. ಹೀಗಾಗಿ ಜಿಲ್ಲಾ ಕೇಂದ್ರವಾಗಲು ಸೂಕ್ತವಾಗಿರುವ ಏಕೈಕ ನಗರ ದೊಡ್ಡಬಳ್ಳಾಪುರ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಜೊತೆಗೆ ಜಿಲ್ಲಾ ಕೇಂದ್ರವಾಗಲು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯಾವ ಕಾರಣಕ್ಕೂ ಅರ್ಹತೆಯ ಪ್ರಶ್ನೆ ಅಲ್ಲ. ಮೂಲಭೂತವಾಗಿ ಒಂದು ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನು ನಿಗ್ರಹಿಸುವ ವಿವಿಧ ಇಲಾಖೆಗಳ ಬೆಳವಣಿಗೆ ಮತ್ತು ವಾಸ್ತವಿಕ ಸ್ಥಿತಿಗತಿಗಳನ್ನು ಪ್ರಧಾನವಾಗಿಟ್ಟುಕೊಂಡು ಬೇಡಿಕೆಗಳನ್ನು ಮಂಡಿಸಬೇಕಾಗುತ್ತದೆ. ಈ ಹಂತದಲ್ಲಿ ದೊಡ್ಡಬಳ್ಳಾಪುರದ ಏಕೈಕ ಆಯ್ಕೆಯಾಗಬೇಕು ಎಂಬ ವಾದ ಇಲ್ಲಿನ ಸಂಘಟನೆಗಳದ್ದು.
ರಾಜಕೀಯ ಇಚ್ಛಾಶಕ್ತಿ ಬೇಕು: ಜಿಲ್ಲಾ ಕೇಂದ್ರ ಹೋರಾಟ ವ್ಯಾಪಕವಾದಾಗ ಇಲ್ಲಿನ ಸ್ಥಳೀಯ ಹತ್ತಾರು ಸಂಘಟನೆಗಳು, ಪ್ರಗತಿಪರ ಚಿಂತನೆಯುಳ್ಳ ಜನರು,ವಿದ್ಯಾರ್ಥಿಗಳು, ಮಹಿಳೆಯರು, ಶಾಸಕರು, ಮಾಜಿ ಶಾಸಕರು, ಹಲವು ರಾಜಕೀಯ ಪಕ್ಷಗಳ ಮುಖಂಡರು ಹೋರಾಟಕ್ಕೆ ಧುಮುಕಿದ್ದರು. ನಂತರ ಸರ್ಕಾರದ ಹಂತಕ್ಕೆ ಹೋರಾಟ ಕೊಂಡೊಯ್ಯಲಾಗಿತ್ತು. ವಿವಿಧ ಹಂತಗಳಲ್ಲಿ ಹೋರಾಟ ಚುರುಕುಗೊಂಡಿತ್ತು. ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಹಂತದಲ್ಲಿ ಒತ್ತಡ ಹೇರುವ ಕಾರ್ಯತಂತ್ರ ನಡೆಯುತ್ತಿದೆ ಎಂಬ ಮಾಹಿತಿ ನೀಡಿದ್ದರು. ಈ ನಿಟ್ಟಿನಲ್ಲಿ ಪ್ರಬಲ ರಾಜಕೀಯ ಇಚ್ಚಾಶಕ್ತಿ ಪ್ರದರ್ಶನವಾಗಲೇಬೇಕು. ಕೂಡಲೇ ಮುಖ್ಯಮಂತ್ರಿಗಳು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕು ಎಂಬ ಆಗ್ರಹ ಪ್ರಬಲವಾಗಿದೆ.
ನಾಳೆ ಸಭೆ: ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಈಗಾಗಲೇ ಹೋರಾಟದಲ್ಲಿ ಆಗಿರುವ ಪ್ರಗತಿ ಮತ್ತು ಸದ್ಯದ ಸ್ಥಿತಿಗತಿಗಳ ಅವಲೋಕನ ಮತ್ತು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳ ಸಭೆಯನ್ನು ಜ.16ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಕನ್ನಡ ಜಾಗೃತ ಭವನದಲ್ಲಿ ಕರೆದಿದೆ. ಈ ಬಗ್ಗೆ ಸಮಿತಿಯ ಸಂಚಾಲಕ ರಾಜೇಂದ್ರಕುಮಾರ್ ಹೇಳಿಕೆ ನೀಡಿದ್ದು, ಸರ್ಕಾರಕ್ಕೆ ಈಗಾಗಲೇ ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ವಿವಿದೆಡೆಯಿಂದ ತಲುಪಿರುವ ಅಂಕಿ-ಅಂಶಗಳ ಮಾಹಿತಿ, ಸರ್ಕಾರದ ಹಂತದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳ ಕುರಿತು ಚರ್ಚಿಸಿ ಹೋರಾಟವನ್ನು ತೀವ್ರಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement