ನಿಷೇಧ ಲೆಕ್ಕಿಸದ ರೈತರು ದನಗಳ ಜಾತ್ರೆ ಅಬಾಧಿತ
ಕ.ಪ್ರ. ವಾರ್ತೆ , ರಾಮನಗರ , ಜ. 14
ಕಾಲುಬಾಯಿ ಜ್ವರಬಾಧೆ ಹಿನ್ನೆಲೆಯಲ್ಲಿ ಕೆಂಗಲ್ ಜಾತ್ರೆಗೆ ಜಿಲ್ಲಾಡಳಿತ ಹೇರಿದ್ದ ನಿಷೇಧವನ್ನೂ ಲೆಕ್ಕಿಸದೆ ರೈತರು ದನಗಳನ್ನು ಕಟ್ಟಲಾರಂಭಿಸಿದ್ದಾರೆ.
ಅಯ್ಯನಗುಡಿ ಜಾತ್ರೆ ಎಂದೇ ಹೆಸರಾದ ಮತ್ತು ರಾಜ್ಯದಲ್ಲೇ ಅತಿದೊಡ್ಡ ಪ್ರಮಾಣದ ಈ ದನಗಳ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ರಾಜ್ಯ ಮತ್ತು ಹೊರ ರಾಜ್ಯದ ಸಹಸ್ರಾರು ರೈತರು ಇಲ್ಲಿ ದನಗಳ ಮಾರಾಟ, ಖರೀದಿ ಮುಂದುವರೆಸಿಕೊಂಡು ಬಂದಿದ್ದಾರೆ.
ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ: ಕಾಲುಬಾಯಿ ಜ್ವರ ರಾಜ್ಯದಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದೇ ರಾಮನಗರದಲ್ಲಿ. ಅತಿ ಹೆಚ್ಚು ರಾಸುಗಳ ಸಾವು ಸಂಭವಿಸಿದ ಜಿಲ್ಲೆಯೂ ಇದೇ ಆಗಿದೆ. ಈ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಜಾತ್ರೆ ರದ್ದುಪಡಿಸಿ ಆದೇಶ ಹೊರಡಿಸಿತ್ತು.
ಇದೀಗ ಜಿಲ್ಲೆಗೆ ಕಾಲುಬಾಯಿ ಜ್ವರ ಮತ್ತೆ ವಕ್ಕರಿಸಿದೆ. ತನ್ಮಧ್ಯೆ, ಹಬ್ಬಕ್ಕೆ ಮುನ್ನಾ ದಿನವಾದ ಮಂಗಳವಾರವೇ ಸಹಸ್ರಾರು ರಾಸುಗಳನ್ನು ಕೆಂಗಲ್ ಜಾತ್ರೆಯಲ್ಲಿ ಕಟ್ಟಲಾಗಿದೆ. ಇಷ್ಟಾಗಿಯೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿ.
ಆತಂಕಕಾರಿ ಬೆಳವಣಿಗೆ: ರಾಜ್ಯದ ಹಲವೆಡೆ ಕಾಲುಬಾಯಿ ಜ್ವರದಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ರಾಸುಗಳು ಸಾವನ್ನಪ್ಪಿವೆ. ಈ ಪೈಕಿ ರಾಮನಗರ ಜಿಲ್ಲೆಯಲ್ಲೇ ಸಾವಿನ ಸಂಖ್ಯೆ 2 ಸಾವಿರಕ್ಕೂ ಅಧಿಕ. ಈ ವರ್ಷಾರಂಭದಲ್ಲೇ ಮತ್ತೆ ಕಾಲುಬಾಯಿ ಜ್ವರ ರಾಮನಗರ ಜಿಲ್ಲೆಯಲ್ಲಿ ವಕ್ಕರಿಸಿದೆ.
ಪಶು ಸಂಗೋಪನಾ ಇಲಾಖೆ ಮತ್ತು ಬಮೂಲ್ ಮಾಹಿತಿ ಪ್ರಕಾರ ಇಲ್ಲಾಗಲೇ ವಿವಿಧ ಗ್ರಾಮಗಳ 10ಕ್ಕೂ ಹೆಚ್ಚು ರಾಸುಗಳು ರೋಗಪೀಡಿತವಾಗಿವೆ. ತನ್ಮಧ್ಯೆ, ಕೆಂಗಲ್ ಜಾತ್ರೆ ಕಟ್ಟಿರುವುದು ರೋಗ ಉಲ್ಬಣಿಸುವುದಕ್ಕೆ ರಹದಾರಿ ಮಾಡಿಕೊಡುವ ಆತಂಕ ಕಾಡಲಾರಂಭಿಸಿದೆ.
ಸೌಲಭ್ಯಗಳನ್ನು ಕಲ್ಪಿಸಿಲ್ಲ: ಈ ಬಾರಿ ಕೆಂಗಲ್ ಜಾತ್ರೆಯನ್ನು ರದ್ದುಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಗೋಜಿಗೆ ಅಧಿಕಾರಿಗಳು ಮುಂದಾಗಿರಲಿಲ್ಲ. ಏಕಾಏಕಿ ಜಾತ್ರೆ ಕಟ್ಟಿರುವುದು ಜಿಲ್ಲಾಡಳಿತ, ಚನ್ನಪಟ್ಟಣ ತಾಲೂಕು ಆಡಳಿತ ಮತ್ತು ಪಶು ಸಂಗೋಪನಾ ಇಲಾಖೆಗೆ ಸವಾಲಾಗಿದೆ.
ಕೆಂಗಲ್ ಸಮೀಪದ ಕೆರೆಯಲ್ಲಿ ಅಷ್ಟಿಷ್ಟು ನೀರಿದ್ದು, ದನಗಳಿಗೆ ನೀರಿನ ಸೌಕರ್ಯಕ್ಕೆ ಅಷ್ಟೇನೂ ಸಮಸ್ಯೆ ಇಲ್ಲವೆಂದೇ ಹೇಳಬಹುದು. ಆದರೆ, ರಾಸುಗಳೊಂದಿಗೆ ಆಗಮಿಸಿರುವ ರೈತರಿಗೆ ಊಟ, ಕುಡಿಯುವ ನೀರು, ರಾತ್ರಿ ವೇಳೆ ವಿದ್ಯುತ್ ದೀಪದ ಬೆಳಕು, ರಕ್ಷಣೆ ಸೌಲಭ್ಯಕ್ಕೆ ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ.
ಕಾಡುವ ಅಭದ್ರತೆ: ಬೆಂಗಳೂರು-ಮೈಸೂರು ಮಾರ್ಗದ ರೇಲ್ವೆ ಜೋಡಿ ಮಾರ್ಗ, ಚತುಷ್ಪಥ ಹೆದ್ದಾರಿ ನಿರ್ಮಾಣವಾದ ಬಳಿಕ ಕೆಂಗಲ್ ಜಾತ್ರೆಯಲ್ಲಿ ದನ ಕಟ್ಟುವವರಿಗೆ ಜಾಗದ ಸಮಸ್ಯೆ ಕಾಡಲಾರಂಭಿಸಿದೆ. ಕೃಷಿ ಜಮೀನುಗಳಲ್ಲಿ ಹೊಟೇಲ್, ಅಂಗಡಿ-ಮುಂಗಟ್ಟು, ಮನೆಗಳ ನಿರ್ಮಾಣವೂ ಜಾತ್ರೆಗೆ ಅಡ್ಡಿಯಾಗಿದೆ.
ಹೆದ್ದಾರಿ ಮತ್ತು ರೈಲು ಮಾರ್ಗದ ಆಸುಪಾಸಿನಲ್ಲಿ ದನಗಳನ್ನು ಕಟ್ಟುವವರಿಗೆ ಬೆಳಕಿನ ಸಮಸ್ಯೆ, ಅಭದ್ರತೆ ಅಷ್ಟಾಗಿ ಕಾಣಿಸದು. ರಸ್ತೆಯಿಂದ ತುಸು ದೂರ, ಅಷ್ಟಿಷ್ಟು ಇರುವ ಕೃಷಿ ಜಮೀನು, ಪಾಳು ಬಂಗಲೆಯಾಗಿರುವ ಸಿಲ್ಕ್‌ಫಾರಂನಲ್ಲಿ ದೀಪಗಳಿಲ್ಲದೆ ಅಭದ್ರತೆ ಮತ್ತು ಆತಂಕ ಎದುರಾಗಿದೆ.
ಬಾಟಲಿ ನೀರೇ ಗತಿ: ಅಂತರ್ಜಲ ಕುಸಿತದಿಂದ ಇದ್ದಬದ್ದ ಕೊಳವೆ ಬಾವಿಗಳೆಲ್ಲಾ ಬತ್ತಿ ಹೋಗಿವೆ. ರಾಸುಗಳ ಜತೆ ಆಗಮಿಸಿರುವ ರೈತರ ಪಾಲಿಗೆ ಕುಡಿಯಲು ಬಿಸ್ಲೇರಿ ಬಾಟಲಿ ನೀರೇ ಗತಿಯಾಗಿದೆ. ನಿಷೇಧ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳಿಲ್ಲದ ಕಾರಣ ರಾಸುಗಳು, ರೈತರಿಗೂ ಸಮಸ್ಯೆ ಬಿಸಿ ತಟ್ಟಲಿದೆ.
ದಿಢೀರ್ ತಲೆ ಎತ್ತಿರುವ ಜಾತ್ರೆಯು ಸ್ಥಳೀಯ ಪೊಲೀಸ್ ವ್ಯವಸ್ಥೆಗೂ ತಲೆನೋವು ತಂದೊಡ್ಡಿದೆ. ಜಾತ್ರೆ ಎಂದ ಮೇಲೆ ಕಳ್ಳರ ಹಾವಳಿ ಇದ್ದೇ ಇರುತ್ತದೆ. ಜಾತ್ರೆಯೇ ರದ್ದಾಗಿದೆ ಎಂದು ಸುಮ್ಮನಿದ್ದ ಪೊಲೀಸ್ ಆಡಳಿತವು ಈಗಷ್ಟೇ ಬಂದೋಬಸ್ತ್ ಏರ್ಪಾಟು ಮಾಡಬೇಕಿದೆ.
ಪಶು ವೈದ್ಯರ ಚಿಂತೆ: ರಾಮನಗರ ಜಿಲ್ಲೆಯಲ್ಲಿ ಮತ್ತೆ ಕಾಲಿಟ್ಟಿರುವ ಕಾಲುಬಾಯಿ ಜ್ವರಬಾಧೆ ನಡುವೆಯೇ ಕೆಂಗಲ್ ಜಾತ್ರೆ ಕಟ್ಟುತ್ತಿರುವುದು ಪಶು ಸಂಗೋಪನಾ ಇಲಾಖೆ ವೈದ್ಯರಿಗೂ ಚಿಂತೆ ಕಾಡುವಂತೆ ಮಾಡಿದೆ. ಇಲ್ಲಿ ಹಾಲು ನೀಡುವ ರಾಸುಗಳನ್ನು ಕಟ್ಟದ ಕಾರಣ ಬಮೂಲ್ ವೈದ್ಯರು ತಮಗೇನೂ ಸಂಬಂಧವಿಲ್ಲದಂತಿದ್ದಾರೆ.
ಜಾತ್ರೆ ರದ್ದತಿ ಬಗ್ಗೆ ಸೂಕ್ತ ಪ್ರಚಾರ ನೀಡದೆ ಜಿಲ್ಲಾಡಳಿತ ತೋರಿದ ಅಸಡ್ಡೆಯೇ ಜಾತ್ರೆ ಕಟ್ಟಲು ಕಾರಣವೆನ್ನುವುದು ಸ್ಪಷ್ಟ. ತಕ್ಷಣ ಜಾತ್ರೆ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವೇ ಜಾತ್ರೆಯಲ್ಲಿ ಕಟ್ಟುವ ಎಲ್ಲ ರಾಸುಗಳಿಗೂ ಮುಂಜಾಗ್ರತಾ ಕ್ರಮದ ಲಸಿಕೆ ಹಾಕುವುದು ಅನಿವಾರ್ಯವಾಗಿದೆ.
-ಮತ್ತೀಕೆರೆ ಜಯರಾಮ್