ಬೆನ್ನಿಹಿನ್ ವಿರುದ್ಧ ಹಿಂಜಾವೇ ಗುಡುಗು
ದೊಡ್ಡಬಳ್ಳಾಪುರ: ಕ್ರೈಸ್ತ ಮತ ಪ್ರಚಾರಕ ಬೆನ್ನಿಹಿನ್ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಸರ್ಕಾರ ನಿಷೇಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಬೆನ್ನಿಹಿನ್ ಈ ಹಿಂದೆ 2005ರಲ್ಲಿ ಬಂದಾಗಲೂ ಭಾರೀ ವಿವಾದ ಸೃಷ್ಟಿಯಾಗಿತ್ತು. ಆಗ ಸಿದ್ಧರಾಮಯ್ಯ ಉಪಮುಖ್ಯಮಂತ್ರಿಯಾಗಿ ಆಮಂತ್ರಣವಿದ್ದರೂ ಸಭೆಯಲ್ಲಿ ಭಾಗವಹಿಸದೆ ಪ್ರಬುದ್ಧತೆ ತೋರಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದು, ಈ ಮೌಢ್ಯ ಬಿತ್ತುವ ಕೆಲಸಕ್ಕೆ ಅವಕಾಶ ಕೊಡಬಾರದು. ವಿವಾದಿತ ದೇವಮಾನವ ತನ್ನ ವಂಚನೆಯ ಜಾಲದಲ್ಲಿ ಹಲವರನ್ನು ವಶೀಕರಣ ಮಾಡಿಕೊಂಡು ನಾಟಕೀಯತೆಯನ್ನು ಪ್ರದರ್ಶಿಸುತ್ತಲೇ ಸಾಮಾನ್ಯ ಜನರಿಗೆ ವಂಚಿಸುವ ದೊಡ್ಡ ಕಪಟಿ ಎಂದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕೇವಲ ಹಿಂದೂ ವಿರೋಧಿ ತೀರ್ಮಾನಗಳನ್ನು ಕೈಗೊಳ್ಳುತ್ತಿದೆ ಎಂಬ ವಾದವಿದೆ. ಮಠ-ಮಂದಿರಗಳ ಬಗ್ಗೆ ನಿಮ್ಮ ನಿಲುವು ಖಂಡನೀಯ. ಶಾದಿ ಭಾಗ್ಯ ಸೇರಿದಂತೆ ಅನೇಕ ಯೋಜನೆಗಳು ಚರ್ಚಾರ್ಹ. ಮೂಢನಂಬಿಕೆ ನಿಷೇಧದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಪೆಟ್ಟುಕೊಡುವ ಕೆಲಸ ಮಾಡಲಾಗುತ್ತಿದೆ. ಸಾಮಾಜಿಕವಾಗಿ ಹಿಂದುಳಿದವರ ಹೆಸರು ಹೇಳಿಕೊಂಡು ಅವರನ್ನೇ ವ್ಯವಸ್ಥಿತವಾಗಿ ವಂಚಿಸುವ ಕೆಲಸ ನಡೆಸುತ್ತಿದೆ. ಅದರ ಇನ್ನೊಂದು ಮುಖವೇ ಬೆನ್ನಿಹಿನ್ ಭೇಟಿ ಕಾರ್ಯಕ್ರಮ. ಇಂತಹ ಕಾರ್ಯಕ್ರಮಕ್ಕೆ ನೀಡಿರುವ ಅನುಮತಿಯನ್ನು ರಾಜ್ಯ ಸರ್ಕಾರ ತಕ್ಷಣ ವಾಪಸ್ ಪಡೆಯಬೇಕು ಎಂದರು.
ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬರುತ್ತಿರುವ ಬೆನ್ನಿಹಿನ್ ಈ ರೀತಿಯ ಸಾರ್ವಜನಿಕ ಸಭೆ ನಡೆಸಲು ಅವಕಾಶವಿಲ್ಲ. ಹಾಗಾಗಿ ಆತನನ್ನು ಜೈಲಿಗಟ್ಟಬೇಕು. ಧರ್ಮ ನಿಂದನೆ, ಅವಹೇಳನ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳು ಕೋಮು ಪ್ರಚೋದನೆಯ ವಸ್ತುಗಳಾಗಿದ್ದು, ಬೆನ್ನಿಹಿನ್ಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಲಾಯಿತು. ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಚಾಲಕ ಮಂಜುನಾಥ್, ಮುಖಂಡರಾದ ಅಮರನಾಥ್ ಮತ್ತಿತರರು ಭಾಗವಹಿಸಿದ್ದರು.