ಹಾಲು ಸಾಗಾಟ ಟೆಂಪೋ ಪಲ್ಟಿ, ಹೆದ್ದಾರಿ ಪಾಲಾದ ಹಾಲು
ಕ.ಪ್ರ. ವಾರ್ತೆ , ಸೂಲಿಬೆಲೆ , ಜ. 14
ಹೊಸಕೋಟೆ, ಕೋಲಾರ ಮಾರ್ಗದ ತಾವರೆಕೆರೆ ಬಳಿ ಹಾಲು ಸಾಗಟ ಮಾಡುತ್ತಿದ್ದ ಟೆಂಪೋವೊಂದು ಮಂಗಳವಾರ ಪಲ್ಟಿ ಹೊಡೆದ ಪರಿಣಾಮ ಹಾಲು ಪ್ಯಾಕೇಟಟ್ಗಳು ಹೊಡೆದು ಹಾಲೆಲ್ಲ ಹೆದ್ದಾರಿ ಪಾಲಾದ ಘಟನೆ ನಡೆದಿದೆ. ಘಟನೆಯಲ್ಲಿ ಅಪಾರ ಪ್ರಮಾಣದ ಹಾಲು ನಷ್ಟವಾಗಿದೆ.
ಕೋಲಾರ - ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಟೆಂಪೋವೊಂದು ಆಂಧ್ರಪ್ರದೇಶದ ಪಲಮೇನೇರು ಕಡೆಯಿಂದ ಗೋದಾವರಿ ಹೆಸರಿನ ಹಾಲು ಪ್ಯಾಕೆಟುಗಳನ್ನು ತುಂಬಿಕೊಂಡು ಬೆಂಗಳೂರಿನತ್ತ ಹೊರಟ್ಟಿತ್ತು. ತಾವರೆಕೆರೆ ಸಮೀಪದಲ್ಲಿ ಬರುತ್ತಿದ್ದಂತೆ ಟೆಂಪೋ ಮುಂಭಾಗದ ಟೈರು ಸಿಡಿದು ಟೆಂಪೋ ಪಲ್ಟಿಯಾಯಿತು. ಈ ವೇಳೆ ಟೆಂಪೋದಲ್ಲಿದ್ದ ಅಪಾರ ಪ್ರಮಾಣದ ಹಾಲು ಪ್ಯಾಕೆಟ್‌ಗಳು ಒಡೆದು ಹಾಲೆಲ್ಲ ಹೆದ್ದಾರಿಯಲ್ಲಿ ಹರಿಯುವಂತಾಯಿತು. ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ಮತ್ತು ಕ್ಲೀನರ್ ಪಾರಾಗಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಸ್ವಲ್ಪಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವಿಷಯ ತಿಳಿದ ನಂದಗುಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.