ಏಕತಾ ಪ್ರತಿಮೆಗೆ ಲೋಹ ಸಂಗ್ರಹಣೆ: ಸಚ್ಚಿದಾನಂದ
ಕ.ಪ್ರ. ವಾರ್ತೆ, ಆನೇಕಲ್ಲು, ಜ.15
ಸರದಾರ್ ವಲ್ಲಭ ಭಾಯಿ ಪಟೇಲ್ ಅವರು ದೇಶ ಕಂಡ ಅಪ್ರತಿಮ ಹೋರಾಟಗಾರ. ಹರಿದು ಹಂಚಿ ಹೋಗಿದ್ದ ಸಂಸ್ಥಾನಗಳನ್ನು ದಿಟ್ಟ ನಿರ್ಧಾರದಿಂದ ಒಗ್ಗೂಡಿಸಿ ದೇಶದ ಐಕ್ಯತೆಗೆ ಹೋರಾಡಿದ ಅವರು ಪ್ರಾತಃಸ್ಮರಣೀಯರು. ಪಟೇಲರ ಸಾರ್ಥಕ್ಯದ ನೆನಪಿನಲ್ಲಿ ಅಂದಾಜು ರು. 2600 ಕೋಟಿ ವೆಚ್ಚದಲ್ಲಿ 600 ಅಡಿ ಎತ್ತರದ ಏಕತಾ ಪ್ರತಿಮೆಯನ್ನು ಸ್ಥಾಪಿಸಲು ಸಂಕಲ್ಪ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಸಂಚಾಲಕ ಸಚ್ಚಿದಾನಂದ ತಿಳಿಸಿದ್ದಾರೆ.
ಅವರು ಆನೇಕಲ್ ತಾಲೂಕು ಮುಗಳೂರಿನಲ್ಲಿ ತಾಲೂಕು ಬಿಜೆಪಿ ಘಟಕ ಏರ್ಪಡಿಸಿದ್ದ ಏಕತಾ ಪ್ರತಿಮೆಗೆ ಲೋಹ ಸಂಗ್ರಹ ಅಭಿಯಾನದಲ್ಲಿ ಮಾತನಾಡಿ ದೇಶದ 5 ಲಕ್ಷ 60 ಸಾವಿರ ಗ್ರಾಮಗಳಿಂದ ತಲಾ 1 ಕೆಜಿ ಲೋಹವನ್ನು ಸಂಗ್ರಹಿಸುವ ಗುರಿ ಇದೆ. ಸ್ವಾಭಿಮಾನದ ಪ್ರತೀಕವಾದ ಏಕತಾ ಶಿಲೆಗೆ ಎಲ್ಲ ದೇಶವಾಸಿಗಳು ತನು ಮನ ಸಹಕಾರ ನೀಡಬೇಕೆಂದರು.
ಮಾಜಿ ಸಚಿವ ಹಾಗೂ ಎಸ್ಸಿ, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ ಬೃಹತ್ ವೆಚ್ಚದ ಪಟೇಲ್ ಅವರ ಉಕ್ಕಿನ ಪ್ರತಿಮೆ ನಿರ್ಮಾಣ ಯೋಜನೆ ದೇಶದ ಅಭಿಮಾನದ ಸಂಕೇತ. ಪ್ರತಿ ಗ್ರಾಮದಲ್ಲಿ ಪಟೇಲರ ವಿಚಾರಧಾರೆಗಳನ್ನು ತಿಳಿಸಿ ಹೇಳುವ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಸಂಭವವಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ವರಿಷ್ಠರು ಬಯಸಿ ಜವಾಬ್ದಾರಿ ನೀಡಿದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದು ನುಡಿದರು.
ಅಭಿಯಾನದಲ್ಲಿ ಜಿಲ್ಲಾ ಸಂಚಾಲಕ ಲಕ್ಷ್ಮೀಕಾಂತ್, ಬಿ.ಜಿ. ಆಂಜಿನಪ್ಪ, ಕೆ.ಬಿ. ಶಿವಪ್ಪ, ಪಿಎಲ್‌ಡಿ ಆಂಜಿನಪ್ಪ, ಮುರಳಿಕೃಷ್ಣ, ರಾಮಕೃಷ್ಣ ಇದ್ದರು.
ಇದೇ ದಿನ ಕಾರ್ಯಕರ್ತರು ಸಂಕ್ರಾಂತಿ ಶುಭಾಶಯ ವಿನಿಮಯ ಹಾಗೂ ಎಳ್ಳು ಬೆಲ್ಲ ಸೇವನೆ ಮಾಡಿ ಜೋಡೆತ್ತಿನ ಅಲಂಕೃತ ಬಂಡಿಯಲ್ಲಿ ಲೋಹ ಸಂಗ್ರಹಣೆ ಕಾರ್ಯ ನಡೆಸಿದರು.