ಕಾಡಾನೆ ದಾಳಿ: ಬೆಳೆ ನಾಶ
ಕ.ಪ್ರ.ವಾರ್ತೆ , ನೆಲಮಂಗಲ , ಜ.15
ಎಡಬಿಡದೆ ಕಾಡುತ್ತಿರುವ 8 ಕಾಡಾನೆಗಳ ಹಿಂಡು ತಾಲೂಕಿನ ಸೋಂಪುರ ಹೋಬಳಿಯಲ್ಲಿ ಕಳೆದ ಮೂರು ತಿಂಗಳಿಂದಲೂ ಅವ್ಯಾಹತವಾಗಿ ದಾಳಿ ನಡೆಸುತ್ತಲೆ ಬಂದಿದ್ದು, ಈಗ ಶ್ರೀಪತಿಹಳ್ಳಿ ಗ್ರಾಮದ ಹತ್ತಾರು ಎಕರೆ ಜಮೀನಿನಲ್ಲಿ ಹಾಕಿದ್ದ ಬೆಳೆಯನ್ನು ತಿಂದು ಹಾಳು ಮಾಡಿರುವ ಘಟನೆ ವರದಿಯಾಗಿದೆ.
ಬೆಳೆಯನ್ನು ಕಳೆದುಕೊಂಡ ಗಂಗಾಧರಯ್ಯ, ತೋಪಯ್ಯ, ತಿಮ್ಮೇಗೌಡ, ಕಾಳೇಗೌಡ, ಗಂಗಯ್ಯ ಅವರ ಜಮೀನಿನಲ್ಲಿ ಬೆಳೆದಿದ್ದ ರಾಗಿ, ಟೊಮೊಟೊ, ಮಾವು, ಬಾಳೆ ಸೇರಿದಂತೆ ಇತರೆ ಬೆಳೆಗಳನ್ನು ತಿಂದು ಹಾಳು ಮಾಡಿವೆ.
ಕಳೆದ ಏಳೆಂಟು ವರ್ಷದಿಂದಲೂ ಕಾಡಾನೆಗಳ ದಾಳಿಯಿಂದ ಕಂಗೆಟ್ಟಿರುವ ಇಲ್ಲಿಯ ರೈತರ ನೋವನ್ನು ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಅರಣ್ಯಾಧಿಕಾರಿಗಳು ಸ್ವಲ್ಪವು ತಲೆ ಕೆಡಿಸಿಕೊಳ್ಳುತ್ತಲೆ ಇಲ್ಲ. ಕಾಡಿನಿಂದ ಬಂದ ಆನೆಗಳನ್ನು ಓಡಿಸಲು ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ. ಹೀಗಾದರೆ ಕಷ್ಟವನ್ನು ನೋಡುವವರು ಯಾರು, ಇವರಿಗಾಗುತ್ತಿರುವ ನಷ್ಟವನ್ನು ಬರಿಸುವವರು ಯಾರು ಎನ್ನುತ್ತಿದ್ದಾರೆ ವೀರಸಾಗರದ ರೈತ ದೇವರಾಜು.
ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಖ್ಯಮಂತ್ರಿಗಳ ಮನೆ ಮುಂದೆ ಬೆಳೆ ಕಳೆದುಕೊಂಡು ಬೀದಿಗೆ ಬಂದಿರುವ ನೂರಾರು ರೈತ ಕುಟುಂಬದವರು ವಿಷ ಸೇವಿಸಿ ಪ್ರಾಣ ಬಿಡುವುದೇ ನಮಗಿರುವ ದಾರಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ 8 ಕಾಡಾನೆಗಳ ಹಿಂಡು ಸಮೀಪದ ವೀರಸಾಗರ ಕಾಡಿನಲ್ಲಿ ಬೀಡು ಬಿಟ್ಟಿವೆ.
ತಾಲ್ಲೂಕು ಅರಣ್ಯಾಧಿಕಾರಿ ವನಿತಾ ಪ್ರತಿಕ್ರಿಯೆ ನೀಡಿ ಸಿಬ್ಬಂದಿ ಕಡಿಮೆ ಇದೆ. ರಾತ್ರಿ ಹಗಲೆನ್ನದೆ ಆನೆಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದೇವೆ. ನಮಗೆ ಮತ್ತಷ್ಟು ಬಲ ಬೇಕಿದೆ ಎಂದಷ್ಟೆ ಉತ್ತರಿಸಿದರು.