ಕೆಂಗಲ್ ದನಗಳ ಜಾತ್ರೆ ರದ್ದು
ಚನ್ನಪಟ್ಟಣ: ಜಿಲ್ಲಾಡಳಿತದ ನಿಷೇಧದ ನಡುವೆಯೂ ಆರಂಭಗೊಂಡಿದ್ದ ಕೆಂಗಲ್ ದನಗಳ ಜಾತ್ರೆಯನ್ನು ತೆರವು ಗೊಳಿಸುವಲ್ಲಿ ತಹಸೀಲ್ದಾರ್ ಇ.ಶಿವರುದ್ರಯ್ಯ ನೇತತ್ವದ ತಂಡ ಸಫಲವಾಗಿದೆ.
ಕಾಲುಬಾಯಿಜ್ವರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದನಗಳ ಜಾತ್ರೆಗೆ ನಿಷೇಧ ಇದ್ದರೂ ಅಕ್ರಮವಾಗಿ ಜಾತ್ರೆಯಲ್ಲಿ ದನಗಳನ್ನು ಕಟ್ಟುತ್ತಿರುವ ಬಗ್ಗೆ ಜ.15ರ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟ ಗೊಂಡಿದ್ದು, ವರದಿ ಪ್ರಕಟಗೊಂಡ ಬೆನ್ನಲ್ಲೇ ಜಾಗೃತ ಗೊಂಡ ಜಿಲ್ಲಾಡಳಿತ ರೈತರು ಕಟ್ಟಿದ್ದ ದನಗಳನ್ನು ಹಿಂದಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ.
ಬುಧವಾರ ಬೆಳಿಗ್ಗೆ ತಹಸೀಲ್ದಾರ್ ಶಿವರುದ್ರಯ್ಯ, ಗ್ರಾಮಾಂತರ ಪಿಎಸೈ ವೆಂಕಟೇಶ್ ಕುಮಾರ್ ಪಶುಸಂಗೋಪಾನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ದ್ವಾರಕಾನಾಥ್ ಮತ್ತು ಇತರ ಇಲಾಖಾ ಸಿಬ್ಬಂದಿಗಳ ತಂಡ ಜಾತ್ರೆ ಸೇರಿದ್ದ ದನಗಳನ್ನು ತೆರವು ಗೊಳಿಸುವಂತೆ ರೈತರಿಗೆ ತಾಕೀತು ಮಾಡಿದರು.
ಮಾತಿನ ಚಕಮಕಿ: ದನಗಳನ್ನು ತೆರವು ಗೊಳಿಸಲು ಮುಂದಾದ ಅಧಿಕಾರಿಗಳು ಮತ್ತು ರೈತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣ ಗೊಂಡಿತು. ನಾವು ಸಾವಿರಾರು ರು. ಬಾಡಿಗೆ ಹಣ ನೀಡಿ ಜಾತ್ರೆಗೆ ಬಂದಿದ್ದೇವೆ, ನಿನ್ನೆಯೇ ತೆರವು ಗೊಳಿಸುವುದನ್ನು ಬಿಟ್ಟು ಇದೀಗ ಖಾಲಿ ಮಾಡಿ ಎಂದರೆ ನಾವೇನು ಮಾಡುವುದು ಎಂದು ತಕರಾರು ತೆಗೆದರು.
ಕೆಲ ರೈತರು ನಾವು ಯಾವುದೇ ಕಾರಣಕ್ಕೂ ಹಿಂದಿರುಗುವುದಿಲ್ಲ, ದನಗಳ ಜಾತ್ರೆ ನಡೆಸೇ ತೀರುತ್ತೇವೆ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಬಿಗುವು ಗೊಂಡಿತ್ತು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ರೈತರು ಜಾತ್ರೆ ತೆರವುಗೊಳಿಸುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.
ಆತಂಕ ಮೂಡಿಸಿದ್ದ ಜಾತ್ರೆ: ಕಾಲುಬಾಯಿ ಜ್ವರದ ಸೋಂಕು ಮೊದಲಿಗೆ ರಾಮನಗರ ಜಿಲ್ಲೆಯಲ್ಲೇ ಕಾಣಿಸಿ ಕೊಂಡಿತ್ತಲ್ಲದೆ, ಕಾಲುಬಾಯಿ ಬಾದೆಯಿಂದ ಅತಿಹೆಚ್ಚು ರಾಸುಗಳು ಸಾವಿಗೀಡಾಗಿದ್ದು ಚನ್ನಪಟ್ಟಣ ತಾಲೂಕಿನಲ್ಲೇ. ಇದೀಗ ಮತ್ತೆ ಕಾಲುಬಾಯಿ ಜ್ವರ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದು ಈ ಸಂದರ್ಭದಲ್ಲಿ ಜಾತ್ರೆ ಆರಂಭ ಗೊಂಡಿರುವುದು ಆತಂಕಕ್ಕೆ ಎಡೆಮಾಡಿ ಕೊಟ್ಟಿತ್ತು.
ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಧಿಕಾರಿಗಳು ತಾಲೂಕು ಆಡಳಿತಕ್ಕೆ ಸೂಚನೆ ನೀಡುವ ಮೂಲಕ ಜಾತ್ರೆಯಲ್ಲಿ ನೆರೆದಿದ್ದ ದನಗಳನ್ನು ತೆರವು ಗೊಳಿಸಿದ್ದಾರೆ.