ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಂಗನಾಥಸ್ವಾಮಿಗೆ ದಶಾವತಾರ ರೂಪದ ಅಲಂಕಾರ

Vishwanath S
Updated On : 16 Jan 2014, 1:43 am

ಮಾಗಡಿ: ಐತಿಹಾಸಿಕ ಪ್ರಸಿದ್ಧ ತಿರುಮಲೆ ರಂಗನಾಥಸ್ವಾಮಿ ದೇವಾಲಯದಲ್ಲಿ ಕಳೆದ 10 ದಿನಗಳಿಂದಲೂ  ಕೊಠರೋತ್ಸವದ ಪ್ರಯುಕ್ತ ರಂಗನಾಥಸ್ವಾಮಿಗೆ ದಶಾವತಾರದ ವಿವಿಧ ರೂಪದಲ್ಲಿ ಅಲಂಕಾರಿಸಲಾಗಿತ್ತು.
ಕೊನೆ ದಿನವಾದ ಮಂಗಳವಾರ ರಾತ್ರಿ ಉತ್ಸವಮೂರ್ತಿ ರಂಗನಾಥಸ್ವಾಮಿಗೆ ಶ್ರೀಕೃಷ್ಣನ ಅಲಂಕಾರರೂಪ ಏರ್ಪಡಿಸಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.  ಶ್ರೀರಂಗ ಸೇವಾ ಟ್ರಸ್ಟ್ ವತಿಯಿಂದ ಕಲಾವಿದರನ್ನು, ಪೂಜಾ ಸೇವಾಕರ್ಥರನ್ನು ಟ್ರಸ್ಟ್  ಅಧ್ಯಕ್ಷ ಟಿ.ಎಸ್. ಸತೀಶ್ ಗೌರವಿಸಿದರು.
ಜಿಲ್ಲಾ ಹೋರಾಟ ಸಮಿತಿ ಸಭೆ ಇಂದು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಹೋರಾಟದ ರೂಪರೇಷೆಗಳು ಮತ್ತು ವಾಸ್ತವದ ಸ್ಥಿತಿಗತಿ-ಬೆಳವಣಿಗೆಗಳ ಅವಲೋಕನ ಹಾಗೂ ಮುಂದಿನ ಹೋರಾಟದ ಸ್ವರೂಪ ನಿರ್ಧರಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಸಭೆಯನ್ನು ಜ.16ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಕನ್ನಡ ಜಾಗೃತ ಭವನದಲ್ಲಿ ಕರೆಯಲಾಗಿದೆ. ಸಭೆಯಲ್ಲಿ ಹೋರಾಟ ಸಮಿತಿಯ ಎಲ್ಲ ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ನಾಗರಿಕರು ಪಾಲ್ಗೊಂಡು ಸಲಹೆ ನೀಡುವಂತೆ ಹೋರಾಟ ಸಮಿತಿ ಸಂಚಾಲಕ ರಾಜೇಂದ್ರಕುಮಾರ್ ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಪೂರ್ವಭಾವಿ ಸಭೆ
ದೊಡ್ಡಬಳ್ಳಾಪುರ: ಇಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತೃತ್ಪದಲ್ಲಿ ಭಾರತ ಗಣರಾಜ್ಯೋತ್ಸವ ಸಮಾರಂಭದ ಪೂರ್ವಭಾವಿ ಸಭೆ ಜ.16ರ ಗುರುವಾರ ಮಧ್ಯಾಹ್ನ 3 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಯಾವುದೇ ಕಾರಣಕ್ಕೂ ಪ್ರತಿನಿಧಿಗಳನ್ನು ನಿಯೋಜಿಸದೆ ಖುದ್ದು ಹಾಜರಾಗಲು ಕೋರಲಾಗಿದೆ. ಅದೇ ರೀತಿ ಸಂಘಟನೆಗಳ ಮುಖಂಡರು, ಗಣ್ಯರು ಹಾಜರಿದ್ದು ಸಲಹೆ-ಸೂಚನೆಗಳನ್ನು ನೀಡುವಂತೆ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಬ್ಬಗೂಳಿ ಜಾತ್ರಾ ಮಹೋತ್ಸವ
ಕನಕಪುರ: ತಾಲೂಕಿನ ಗಡಿಭಾಗವಾದ ತಮಿಳುನಾಡಿನ ಪ್ರಾಂತ್ಯದ ಕಾವೇರಿ ನದೀ ತೀರದಲ್ಲಿರುವ ದಬ್ಬಗೂಳಿ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಫೆ.1 ಮತ್ತು 2 ರಂದು ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣಸ್ವಾಮೀಜಿ, ಶ್ರೀ ಮುಮ್ಮಡಿ ಮಹಾಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ.
ಠಾಣೆಯಲ್ಲಿ ಸಂತಾಪ
ದೇವನಹಳ್ಳಿ: ಗುಲ್ಬರ್ಗ ಠಾಣೆಯಲ್ಲಿ ಪಿಎಸೈ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಂಡೆ ಅವರು ಆಗುಂತಕರ ಗುಂಡಿಗೆ ತೀವ್ರ ಗಾಯವಾಗಿ ನಿಧನರಾದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬಂಡೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಂತಿಮ ನಮನ ಕಾರ್ಯಕ್ರಮವನ್ನು ಪಿಎಸೈ ನಂದೀಶ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಯವರು ಭಾಗವಹಿಸಿದ್ದರು.   ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಮಾನವ ಹಕ್ಕುಗಳ ಜಾಗೃತಿ ಸಮಿತಿಯಿಂದಲೂ ಪಿಎಸೈ ಮಲ್ಲಿಕಾರ್ಜುನ ಬಂಡೆ ಅಕಾಲಿಕ ನಿಧನಕ್ಕೆ ಒಂದು ನಿಮಿಷ ಮೌನ ಆಚರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ಸ್ವಾಭಿಮಾನಿ ಮಲ್ಲಿಕಾರ್ಜುನ ಬಂಡೆಯವರು ನಿಧನರಾಗಿದ್ದರೂ ಅವರ ಧೈರ್ಯ ಮತ್ತು ಸ್ಥೈರ್ಯ ಇತರ ಪೊಲೀಸ್ ಅಧಿಕಾರಿಗಳಿಗೆ ಮಾದರಿಯಾಗಲಿ ಎಂದರು.  
ಸಂಕ್ರಾಂತಿ ಹಬ್ಬದ ಪ್ರಯುಕ್ತ ಗೋಪೂಜೆ
ಮಾಗಡಿ: ಬೆಲೆ ಏರಿಕೆಯ ನಡುವೆಯೂ ತಾಲೂಕಿನಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಹಿಳೆಯರು ಮಕ್ಕಳು ಶ್ರದ್ಧಾಭಕ್ತಿಯಿಂದ ಗೋಪೂಜೆ ನೆರವೇರಿಸಿದರು. ಮನೆಯಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳು  ಎಳ್ಳು-ಬೆಲ್ಲ ಮಿಶ್ರಿತ ಸಿಹಿಯನ್ನು ತಯಾರಿಸಿ ಅಕ್ಕಪಕ್ಕದ ಮನೆಗಳಿಗೆ ತೆರಳಿ ಹಂಚುವ ಮೂಲಕ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಂಡರು. ರೈತರು ತಮ್ಮ ರಾಸುಗಳಿಗೆ ಬೆಳಿಗ್ಗೆಯೇ ಮೈ ತೊಳೆದು, ಕಾಲಿಗೆ ಕರಿದಾರ, ಕೊರಳಿಗೆ ಗೆಜ್ಜೆ, ಕೊಂಬಿಗೆ ಕಳಸವಿಟ್ಟು, ಬಣ್ಣ ಬಣ್ಣಗಳಿಂದ ಅಲಂಕರಿಸಿ ಹೂ ಹಾರ ಹಾಕಿ ಶ್ರದ್ಧಾಭಕ್ತಿಯಿಂದ ಪೂಜಿಸಿದರು. ವಿಶೇಷವಾಗಿ ಪೊಂಗಲ್, ಬೇಯಿಸಿದ ಸಿಹಿ ಗೆಣಸು, ಕಬ್ಬು, ಕಡಲೆಕಾಯಿ ಅವರೆ ಕಾಯಿಯನ್ನು ರಾಸುಗಳಿಗೆ ತಿನಿಸಿದರು. ನಂತರ ಮನೆಯಲ್ಲಿ ತಯಾರಿಸಿದ  ಅವರೆಕಾಯಿ ಬೇಳೆ ಸೇರಿದಂತೆ ಬಗೆ ಬಗೆ ಭಕ್ಷ್ಯಗಳನ್ನು ಸವಿದರು. ಸಂಜೆ ಊರ ಹೊರಗೆ ನಿರ್ಮಿಸಿದ ಪುಣ್ಯಕೋಟಿ ಗುಡಿ ಬಳಿ ರೈತರು ತಮ್ಮ ಅಲಂಕೃತ ರಾಸುಗಳನ್ನು ಕರೆದೊಯ್ದು, ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ನಂತರ ಮನೆಗೆ ವಾಪಸಾಗುವಾಗ ಹೊರ ಬಾಗಿಲ ಬಳಿ ರಸ್ತೆಗೆ ಅಡ್ಡಲಾಗಿ ತೆಂಗಿನ ಗರಿ, ಹುಲ್ಲಿನಿಂದ ಹರಡಿ ಬೆಂಕಿಯಿಟ್ಟು ರಾಸುಗಳನ್ನು ಕಿಚ್ಚು ಹಾಯಿಸುವ ಮೂಲಕ ಸಂಭ್ರಮಿಸಿದರು.
ಅವ್ವೇರಹಳ್ಳಿ ಗ್ರಾಮದ ಕೆರೆಯಲ್ಲಿ 2 ಆನೆ ಪ್ರತ್ಯಕ್ಷ
ಚನ್ನಪಟ್ಟಣ: ತಾಲೂಕು ಅವ್ವೇರಹಳ್ಳಿ ಗ್ರಾಮದ ಕೆರೆಯಲ್ಲಿ ಎರಡು ಆನೆಗಳು ಕಾಣಿಸಿ ಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬುಧವಾರ ಸಂಜೆ ನಾಲ್ಕು ಗಂಟೆಯ ಸುಮಾರಿನಲ್ಲಿ ಕೆರೆಯಂಗಳದಲ್ಲಿ ಕಾಣಿಸಿಕೊಂಡ ಆನೆಗಳು ಒಂದು ಗಂಟೆಗೂ ಹೆಚ್ಚುಕಾಲ ಜಲಕ್ರಿಡೆಯಲ್ಲಿ ನಿರತವಾಗಿದ್ದು ನಂತರ ಅಲ್ಲೆ ಮರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಶ್ರದ್ಧಾಂಜಲಿ ಸಭೆ
ಕನಕಪುರ: ಕನಕಪುರದ ರೋಟರಿ ಭವನದಲ್ಲಿ ಇತ್ತೀಚೆಗೆ ಅಗಲಿದ ಪತ್ರಕರ್ತ ದಿ.ಸಿ.ಎ.ಶಾಂತಕುಮಾರ್ ಅವರಿಗೆ ಶ್ರದ್ಧಾಂಜಲಿ ಸಭೆ ಪತ್ರಕರ್ತರು, ಸ್ನೇಹಿತರು ಹಾಗೂ ಸಂಘಸಂಸ್ಥೆಗಳ ಪ್ರತಿನಿಧಿಗಳಿಂದ ನಡೆಯಿತು.  ಜಯಕರ್ನಾಟಕ ಸಂಘಟನೆ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡುತ್ತಾ, ಸರಳ ಸಜ್ಜನಿಕೆಯ ಸ್ನೇಹಜೀವಿ ಶಾಂತಕುಮಾರ್ ಅನೇಕ ಜನಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದವರು. ಜಿಲ್ಲೆಯಾದ್ಯಂತ ಜನಪ್ರಿಯತೆ ಗಳಿಸಿದ್ದರು ಎಂದು ಹೇಳಿದರು.  ಪತ್ರಕರ್ತರ ಸಂಘದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಶಿವಲಿಂಗಯ್ಯ ಮಾತನಾಡಿದರು.  ಸಂಪತ್‌ಕುಮಾರ್, ಜಿ.ಎನ್.ಸತೀಶ್, ಕಬ್ಬಾಳಯ್ಯ, ಎಂ.ಎನ್.ಸುರೇಶ್, ಕೃಷ್ಣಮೂರ್ತಿ, ಕೂ.ಗಿ.ಗಿರಿಯಪ್ಪ, ನುಡಿನಮನ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement