ಶ್ರದ್ಧಾಭಕ್ತಿಯೊಂದಿಗೆ ಸಂಕ್ರಾಂತಿ ಸಂಭ್ರಮ
ಕ.ಪ್ರ.ವಾರ್ತೆ , ರಾಮನಗರ , ಜ.15
ಸತತ ಕಾಡುತ್ತಲೇ ಇರುವ ಭೀಕರ ಬರ. ಮಳೆ ಅಭಾವದಿಂದ ತಳ ಮುಟ್ಟಿದ ಅಂತರ್ಜಲ. ಬೇಸಿಗೆಗೆ ಮುನ್ನವೇ ಬಾಧಿಸಲಾರಂಭಿಸಿದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ನಾನಾ ಬವಣೆಗಳ ನಡುವೆ ಸುಗ್ಗಿಯ ಹಬ್ಬ ಸಂಕ್ರಾಂತಿ ಅಷ್ಟೇನೂ ಕಳೆಕಟ್ಟದಾಯಿತಾದರೂ ಜಿಲ್ಲಾದ್ಯಂತ ಶ್ರದ್ಧಾಭಕ್ತಿಯೊಂದಿಗೆ ಆಚರಿಸಲಾಯಿತು.
ಹಿಂದೂಗಳ ಪಾಲಿಗೆ ವರ್ಷಾರಂಭದ ಪ್ರಥಮ ಹಬ್ಬವಾದ ಸಂಕ್ರಾಂತಿಯು ಕೃಷಿ ಅವಲಂಬಿತರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಸುಗ್ಗಿಯ ಹಿಗ್ಗನ್ನು ಸಂಭ್ರಮಿಸಬೇಕಾದ ರೈತರು ಅರೆಬರೆ ತುಂಬಿದ ಕಣಜ, ಮನೆ, ಬಣವೆಗಳಿಗೆ ಪೂಜೆ ಸಲ್ಲಿಸಿದ್ದಾರೆ. ನೊಗಕ್ಕೆ ಹೆಗಲೊಡ್ಡಿ ವರ್ಷವಿಡೀ ದುಡಿದ, ಹಾಲು ಕರೆಯುವ ಮತ್ತು ಇತರೆ ರಾಸುಗಳ ಮೈತೊಳೆದು ಸಿಂಗರಿಸಿ ಕಿಚ್ಚು ಹಾಯಿಸಿದ್ದಾರೆ.
ಹೆಚ್ಚು ಹಚ್ಚಲಿಲ್ಲ ಕಿಚ್ಚು: ಒಂದು ಕಾಲಕ್ಕೆ ಸಂಪೂರ್ಣ ಕೃಷಿಮಯವಾಗಿದ್ದ ಈ ಜಿಲ್ಲೆಯಲ್ಲೀಗ ಶೇ. 50ರಷ್ಟು ಭಾಗವನ್ನು ಕೃಷಿಯೇತರ ಚಟುವಟಿಕೆ ಆವರಿಸಿಕೊಂಡಿದೆ. ಬೇಸಾಯ, ಆಹಾರೋತ್ಪಾದನೆ ಪ್ರಮಾಣವೂ ಕುಸಿದಿದೆ. ಇದರೊಂದಿಗೆ ಹೈನೋದ್ಯಮ ಹೊರತಾದ ಜಾನುವಾರುಗಳ ಸಂಖ್ಯೆಯೂ ಕ್ಷೀಣಿಸಿದೆ. ಹೀಗಾಗಿ ಸಂಕ್ರಾಂತಿ ಹಬ್ಬಕ್ಕೆ ಕಿಚ್ಚು ಹಾಯಿಸುವ ಅಬ್ಬರ ಎಲ್ಲೂ ಅಷ್ಟಾಗಿ ಕಾಣಲಿಲ್ಲ.
ಹಿಂದೆಲ್ಲಾ ಆಳೆತ್ತರ ಹುಲ್ಲು, ಗರಿ ಮತ್ತಿತರೆ ವಸ್ತುಗಳನ್ನು ಬೆಂಕಿ ಹಚ್ಚಿ ಕಿಚ್ಚು ಹಾಯಿಸಲಾಗುತ್ತಿತ್ತು. ಆದರೆ, ಈ ಬಾರಿ ಅಬ್ಬರದೊಟ್ಟಿಗೆ ಕಿಚ್ಚು ಹಚ್ಚುವಿಕೆ ಅಷ್ಟೇನೂ ಎತ್ತರವಿರಲಿಲ್ಲ. ಹುಲ್ಲು ಬದಲು ಒಣಗಿದ ತೆಂಗಿನ ಗರಿ ಮತ್ತಿತರೆ ತ್ಯಾಜ್ಯಗಳನ್ನೇ ಕಿಚ್ಚು ಹಾಯಿಸುವುದಕ್ಕೆ ಹೆಚ್ಚಾಗಿ ಬಳಕೆ ಮಾಡಲಾಗಿತ್ತು.
ಕಾಣದಾದ ಪೈಪೋಟಿ: ಹಿಂದಿನಂತೆ ಸಂಕ್ರಾಂತಿಯ ಕಿಚ್ಚು ಹಾಯುವ ಕಾರ್ಯಕ್ರಮದಲ್ಲಿ ಸಂಪ್ರದಾಯ, ಪೂಜನೀಯ ಭಾವಗಳಷ್ಟೇ ಅಲ್ಲದೆ ಸಗಡಗರವೂ ಮರೆಯಾಗಿರುವುದು ಸ್ಪಷ್ಟವಾಗಿದೆ. ಜೋಡೆತ್ತು, ದನಗಳೊಂದಿಗೆ ಮೊದಲು ಕಿಚ್ಚು ಹಾಯಬೇಕೆಂದು ಪೈಪೋಟಿಗೆ ಇಳಿಯುವ ರೈತರ ಸಂಖ್ಯೆಯೂ ತೀರಾ ಕಡಿಮೆಯಾಗಿತ್ತು. ಬಹುತೇಕ ಕಡೆ ಕಿಚ್ಚು ಹಾಯಿಸಲು ಕರೆತಂದಿದ್ದ ಜಾನುವಾರುಗಳಲ್ಲಿ ಹೈನೋದ್ಯಮಕ್ಕಾಗಿ ಕಟ್ಟಿದ ಮಿಶ್ರತಳಿ ರಾಸುಗಳೇ ಹೆಚ್ಚಾಗಿದ್ದವು. ದೇಶೀ ತಳಿ ರಾಸುಗಳ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಇದಕ್ಕೆ ಸಾಕಷ್ಟು ರೈತರು ಜಾನುವಾರುಗಳನ್ನು ಮಾರಾಟ ಮಾಡಿರುವುದು, ಕೃಷಿ ಕಾಯಕಕ್ಕೆ ಬೆನ್ನು ತೋರಿರುವುದೇ ಕಾರಣವಾಗಿದೆ.
ಗಾಯಗೊಂಡ ನಿದರ್ಶನ: ಪ್ರತಿ ಹಳ್ಳಿ, ಗಲ್ಲಿಗಳಲ್ಲೂ ಮದ್ಯದಂಗಡಿಗಳು ರಾಜಾರೋಷವಾಗಿಯೇ ನಡೆಯುತ್ತಿವೆ. ಅಲ್ಲಿ ಕುಡಿದ ಜನರು ಕಿಚ್ಚು ಹಾಯುವ ವೇಳೆ ನಿಶಾಬಾಜಿಯಲ್ಲಿ ತೇಲುತ್ತಿದ್ದರು. ಅಮಲಿನಲ್ಲಿ ಅಲ್ಲಲ್ಲಿ ಕೆಲವರು ಕಿಚ್ಚು ಹಾಯಿಸುವ ಕೊಂಡಕ್ಕೆ ಬಿದ್ದು ಗಾಯ ಮಾಡಿಕೊಂಡ ನಿದರ್ಶನಗಳಿವೆ. ರಾಸುಗಳೊಂದಿಗೆ ಕಿಚ್ಚು ಹಾಯುವಾಗ ಎಡವಟ್ಟಿನಿಂದ ಆಯತಪ್ಪಿ ಸಣ್ಣಪುಟ್ಟ ಗಾಯ ಮಾಡಿಕೊಂಡವರೂ ಸಾಕಷ್ಟಿದ್ದಾರೆ.
ಹಬ್ಬಕ್ಕೂ ಗೊಂದಲ: ಮಕರ ಸಂಕ್ರಮಣದಂದು ಆಚರಿಸಲಾಗುವ ಸಂಕ್ರಾಂತಿ ಹಬ್ಬ ಈ ಬಾರಿ ಸಾಕಷ್ಟು ಗೊಂದಲಕ್ಕೂ ಕಾರಣವಾಯಿತು. ಕೆಲವೆಡೆ ಮಂಗಳವಾರವೇ ಹಬ್ಬ ನಡೆಸಿದ್ದು, ಹಲವೆಡೆ ಬುಧವಾರ ಆಚರಿಸಲಾಗಿದೆ.
ಸಂಕ್ರಾಂತಿ ಪ್ರಯುಕ್ತ ದೇಗುಲಗಳಲ್ಲಿ ಇಡೀ ದಿನ ವಿಶೇಷ ಪೂಜೆ ಏರ್ಪಾಟಾಗಿತ್ತು. ಈಶ್ವರ, ಬಸವೇಶ್ವರ ದೇಗುಲಗಳಲ್ಲಿ ದೇವರ ವಿಗ್ರಹವನ್ನು ಅಲಂಕರಿಸಿ ಪೂಜೆ ನೆರವೇರಿಸಲಾಯಿತು. ಗ್ರಾಮ ದೇವರ ದೇವಸ್ಥಾನಗಳಲ್ಲೂ ಭಕ್ತರ ಸಂಖ್ಯೆ ಗಣನೀಯವಾಗಿತ್ತು. ಭಕ್ತರು ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪೊಂಗಲ್ ವಿಶೇಷ: ಈ ಹಬ್ಬದಲ್ಲಿ ಬೆಳಗಿನ ಉಪಹಾರಕ್ಕೆ ಪೊಂಗಲ್, ಕಿಚಡಿ ಸೇವನೆ ವಿಶೇಷ. ರಾತ್ರಿ ಊಟಕ್ಕೆ ಹೋಳಿಗೆ, ವಡೆ, ಅವರೆಕಾಯಿ ಸಂಬಾರ್ ಊಟ ಸವಿಯುವುದನ್ನು ಗ್ರಾಮೀಣರು ಆಚರಣೆಯನ್ನಾಗಿ ಪಾಲಿಸಿಕೊಂಡು ಬಂದಿದ್ದಾರೆ. ಈ ಬಾರಿ ಅವರೆಕಾಯಿ ಉತ್ಪಾದನೆ ಹೇರಳವಾಗಿದ್ದರಿಂದ ಧಾರಣೆ ಅಷ್ಟೇನೂ ಹೆಚ್ಚಾಗಿರಲಿಲ್ಲ. ಕಳೆದ ವರ್ಷ ರು.50 ಇದ್ದ ಕೆಜಿ ಅವರೆ ಧಾರಣೆ ಈ ಬಾರಿ ರು.20-25 ರಷ್ಟಿತ್ತು.
ಎಳ್ಳು-ಬೆಲ್ಲದ ಸವಿ: ನಗರ, ಪಟ್ಟಣಗಳಲ್ಲಿ ಹೆಣ್ಣು ಮಕ್ಕಳಿಂದ ಎಳ್ಳು ಬೀರುವ ಪರಿಪಾಠ ನಡೆದು ಬಂದಿದೆ. ಇದೀಗ ಗ್ರಾಮೀಣ ಪ್ರದೇಶದಲ್ಲೂ ಹೆಚ್ಚು ಆಚರಣೆಯಲ್ಲಿದೆ. ಇದೊಂದು ಫ್ಯಾಷನ್ ಜೊತೆಗೆ ಪೈಪೋಟಿಯ ಆಚರಣೆಯೂ ಆಗಿ ವ್ಯಾಪಿಸುತ್ತಿದೆ. ಎಳ್ಳು-ಬೆಲ್ಲದೊಂದಿಗೆ ನೀಡುವ ಕಬ್ಬಿಗೆ ಬೇಡಿಕೆ ಹೆಚ್ಚಿತ್ತು. ಜೋಡಿ ಪಟಾವಳಿ ಕಬ್ಬಿನ ಬೆಲೆ ರು.50 ದಾಟಿದ್ದು ವಿಶೇಷ.
ಜಾನಪದ ಲೋಕದಲ್ಲಿ ಆಚರಣೆ: ನಗರದ ಹೊರ ವಲಯದಲ್ಲಿರುವ ಜಾನಪದ ಲೋಕದಲ್ಲಿ ಜೋಡೆತ್ತುಗಳ ಸ್ಪರ್ಧೆ ಮತ್ತು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಸಿಂಗರಿಸಿದ್ದ ಎತ್ತುಗಳ ಜತೆ ಆಗಮಿಸಿದ್ದ ರೈತರು ಜೋಡೆತ್ತುಗಳ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಬಳಿಕ ಕಿಚ್ಚು ಹಾಯಿಸುವ ಮೂಲಕ ಸಂಭ್ರಮಿಸಿದರು.
ಜೋಡೆತ್ತುಗಳು ಹಾಗೂ ಕಿಚ್ಚು ಹಾಯುವುದನ್ನು ಜಾನಪದ ಲೋಕಕ್ಕೆ ಆಗಮಿಸಿದ್ದ ವಿದೇಶೀಯರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ನೋಡಿ ಸಂತಸ ಪಟ್ಟರು. ಅತ್ಯತ್ತಮ ಜೋಡೆತ್ತುಗಳಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಮೇನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ, ಸಂಯೋಜನಾಧಿಕಾರಿ ಡಾ.ಕುರುವ ಬಸವರಾಜು ಹಾಜರಿದ್ದರು.