ಸಿದ್ದಗಂಗಾ ಮಠಾಧೀಶರಿಗೆ ಗುರುವಂದನೆ
ಮಾಗಡಿ: ತಾಲೂಕಿನ ವೀರಶೈವ ನೌಕರರ ಸಂಘ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಮಾಗಡಿ ಘಟಕದ ವತಿಯಿಂದ ಮಾರ್ಚ್ 9 ರಂದು ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರಸ್ವಾಮಿ ಅವರಿಗೆ ಗುರುವಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರೇಣುಕಾರಧ್ಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಹೊರತರುತ್ತಿದ್ದು, ಸ್ಮರಣ ಸಂಚಿಕೆಗೆ ಧರ್ಮ, ಸಂಸ್ಕೃತಿ, ದೇಶಭಕ್ತಿ, ವೈಚಾರಿಕತೆ, ಸಿದ್ದಗಂಗಾ ಶ್ರೀಗಳರೊಂದಿಗಿನ ಹೊಡನಾಟದ ಅನುಭವ ವಿಷಯಗಳನ್ನು ಕುರಿತು ಲೇಖನ, ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಬರಹಗಾರರು ಜ.30ನೇ ತಾರೀಖಿನೊಳಗೆ ಸ್ವರಚಿತ ಲೇಖನ ಮತ್ತು ಕವನ ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಪೂರ್ಣ ಮಾಹಿತಿಯೊಂದಿಗೆ ಅಂಚೆ ಮೂಲಕ ತಲುಪಿಸಬೇಕು ಎಂದು ರಾಮನಗರ ಜಿಲ್ಲಾ ವೀರಶೈವ ನೌಕರರ ಸಂಘದ ಗೌರವಾಧ್ಯಕ್ಷ ಮುದ್ದವೀರಪ್ಪ ತಿಳಿಸಿದ್ದಾರೆ. ಲೇಖನ ತಲುಪಿಸುವ ವಿಳಾಸ: ಗಂ.ದಯಾನಂದ್, ಕುದೂರು, ಮಾಗಡಿ ತಾಲೂಕು, ರಾಮನಗರ ಜಿಲ್ಲೆ-562120. ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ 9945407405 ಸಂಪರ್ಕಿಸಬಹುದು.
ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ
ಕನಕಪುರ: ಆನಂದಜ್ಯೋತಿ ಸೇವಾಟ್ರಸ್ಟ್, ನಾರಾಯಣ ನೇತ್ರಾಲಯ ಬೆಂಗಳೂರು ಹಾಗೂ ರೋಟರಿ ಕನಕಪುರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಇಲ್ಲಿನ ರೋಟರಿ ಭವನದಲ್ಲಿ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಟ್ರಸ್ಟ್ ಅಧ್ಯಕ್ಷ ಶಿವಾಜಿರಾವ್ ನೆರವೇರಿಸಿದರು.
ರೋಟರಿ ಅಧ್ಯಕ್ಷ ಸಿ. ವಿಜಯ್ ಅಧ್ಯಕ್ಷತೆ ವಹಿಸಿದ್ದರು. ನೇತ್ರ ತಪಾಸಣಾ ಶಿಬಿರದಲ್ಲಿ ಮುನ್ನೂರಕ್ಕು ಹೆಚ್ಚುಮಂದಿಯ ನೇತ್ರ ತಪಾಸಣೆ ನೇತ್ರ ತಜ್ಞೆ ಡಾ.ಪಾಯಲ್ ತಂಡದವರ ನೇತೃತ್ವದಲ್ಲಿ ನಡೆಯಿತು. ಕನ್ನಡಕಗಳ ಅಗತ್ಯವಿದ್ದ 165 ಜನರಿಗೆ ದಾನಿಗಳಾದ ಎಲವನಾಥ ವಿ.ರಾಜಣ್ಣ ಉಚಿತವಾಗಿ ಕನ್ನಡಕಗಳನ್ನು ವಿತರಿಸಿದರು.
ಕಣ್ಣಿನಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ 32 ಜನರನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ರವಾನಿಸಿ ಉಚಿತವಾಗಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.
ಶಿಬಿರದಲ್ಲಿ ಟ್ರಸ್ಟ್ ಕಾರ್ಯದರ್ಶಿ ಎನ್.ರಮೇಶ್, ರೋಟರಿ ಕಾರ್ಯದರ್ಶಿ ಮುರಡಿ ಗಿರೀಶ್, ಸಮುದಾಯಸೇವಾ ನಿರ್ದೇಶಕ ಕೆ.ಎನ್.ಶಿವಕುಮಾರ್, ಸಿ.ಪುಟ್ಟಸ್ವಾಮಿ, ಸಿ.ಎಸ್.ನಾಗರಾಜ, ಚಂದ್ರಪ್ರಭಾ ಪಾಲ್ಗೊಂಡಿದ್ದರು.
ಬಾಲಗಂಗಾಧರನಾಥ ಶ್ರೀ ಪುಣ್ಯಸ್ಮರಣೆ
ಕನಕಪುರ: ಆದಿಚುಂಚನಗಿರಿ ಪೀಠಾಧ್ಯಕ್ಷರಾದ ದಿ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಕನಕಪುರದ ನಾಡೋಜ ಡಾ.ರಾಜ್ಬಯಲು ಮಂದಿರದಲ್ಲಿ ನಡೆಯಿತು.
ಕರ್ನಾಟಕ ರಕ್ಷಣಾವೇದಿಕೆ, ರೈತಸಂಘ, ಆದಿಚುಂಚನಗಿರಿ ಶಾಖಾಮಠ ಮೊದಲಾದ ಸಂಘಸಂಸ್ಥೆಗಳು ಪಾಲ್ಗೊಂಡು ಶ್ರೀಗಳಿಗೆ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದ ಅಂಗವಾಗಿ ಕಲಾವಿದ ಅನಂತಸ್ವಾಮಿ ಸಂಗಡಿಗರಿಂದ ಭಜನೆ, ಭಕ್ತಿಗೀತೆಗಳ ಗಾಯನ ನಡೆಯಿತು.
ಕರವೇ ಅಧ್ಯಕ್ಷ ಕಬ್ಬಾಳೇಗೌಡ ಮಾತನಾಡಿ ಸಮಾಜದ ಶೂದ್ರಾತಿಶೂದ್ರರಿಗೂ ವಿದ್ಯೆ, ವಸತಿ, ಆಹಾರಗಳನ್ನು ನೀಡುವುದರ ಮೂಲಕ ಭವಿಷ್ಯದಲ್ಲಿ ಸುಭದ್ರ ನೆಲೆಯನ್ನು ಕಲ್ಪಿಸಿಕೊಡುವ ಅನನ್ಯ ಸೇವೆಯನ್ನು ಶ್ರೀಗಳು ನಡೆಸಿದ್ದಾರೆ. ಶೈಕ್ಷಣಿಕ ಹಾಗೂ ವೈದ್ಯಕೀಯ ಸೇವಾ ವಿಷಯಗಳಲ್ಲಿ ಕರ್ನಾಟಕದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಹಿರಿಮೆ ದಿ. ಬಾಲಗಂಗಾಧರನಾಥ ಶ್ರೀಗಳದ್ದು ಎಂದು ಹೇಳಿದರು.
ಕರವೇ ಜಗದೀಶ್, ಎಪಿಎಂಸಿ ಗೋವಿಂದಯ್ಯ, ಒಕ್ಕಲಿಗ ಹಿತರಕ್ಷಣಾ ವೇದಿಕೆಯ ಬಸವರಾಜು, ಕೃಷ್ಣಪ್ಪ, ಶಿವರಾಮೇಗೌಡ ಪಾಲ್ಗೊಂಡಿದ್ದರು.
ಹಳಗನ್ನಡ ಕಾವ್ಯಗಳ ಓದುವಿಕೆ ಕಾರ್ಯಾಗಾರ
ಕನಕಪುರ: ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ಹಳಗನ್ನಡ ಕಾವ್ಯವನ್ನು ಸುಲಭವಾಗಿ ಗ್ರಹಿಸುವ, ಅರ್ಥ ಮಾಡಿಕೊಳ್ಳಲು, ವಾಚನ ಮಾಡಲು ಅನುವಾಗುವಂತೆ ರೂಪಿಸಿರುವ ಕಾರ್ಯಾಗಾರ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ಗ್ರಾಮವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷ ಕೆ.ಜಿ. ತಿಮ್ಮಪ್ಪ ಹೇಳಿದ್ದಾರೆ. ಅವರು ಕನಕಪುರದ ರೂರಲ್ ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತವಾಗಿ ಆಯೋಜಿಸಿದ್ದ ಹಳಗನ್ನಡ ಕಾವ್ಯಗಳ ಓದುವಿಕೆ ಕಾರ್ಯಾಗಾರದಲ್ಲಿ ಸಮಾರೋಪ ನೆರವೇರಿಸಿ ಮಾತನಾಡುತ್ತಿದ್ದರು. ಗಮಕಕಲಾ ಪರಿಷತ್ ಜಿಲ್ಲಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಹೆಸರಾಂತ ಗಮಕಿಗಳು, ವಿದ್ವಾಂಸರಾದ ಪದ್ಮಿನಿ, ಶ್ರೀಮತಿ, ರಾಮಮೂರ್ತಿ, ಎಂ.ಆರ್. ಕೇಶವಮೂರ್ತಿ ಮೊದಲಾದವರು ನಾಲ್ಕು ಅವಧಿಗಳಲ್ಲಿ ಜೈಮಿನಿ ಭಾರತ, ರನ್ನನ ಗದಾಯುದ್ಧ, ಮಾದಾರಚನ್ನಯ್ಯನ ರಗಳೆ, ಹರಿಶ್ಚಂದ್ರ ಕಾವ್ಯದ ಭಾಗಗಳನ್ನು ವಾಚನಮಾಡಿ, ಅರ್ಥವಿವರಿಸಿ ಹಳಗನ್ನಡವನ್ನು ಓದುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಕೊಟ್ಟರು.
ಭ್ರಷ್ಟಾಚಾರ ಬೇರು ಸಮೇತ ಕಿತ್ತುಹಾಕುವುದು ಎಲ್ಲರ ಕರ್ತವ್ಯ
ನೆಲಮಂಗಲ: ಭ್ರಷ್ಟಾಚಾರವೆಂಬುದು ಗ್ರಾಮ ಮಟ್ಟದ ಕಚೇರಿಗಳಿಂದ ವಿಧಾನಸೌಧದವರೆಗೂ ಹೆಮ್ಮರವಾಗಿ ಬೆಳೆದು ನಿಂತಿದೆ. ಅದನ್ನು ಬೇರು ಸಮೇತ ಕಿತ್ತು ಹಾಕಬೇಕಾದ್ದು ಪ್ರಜ್ಞಾವಂತರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾನವ ಹಕ್ಕುಗಳ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯ ರಾಜ್ಯಾಧ್ಯಕ್ಷ ಮೋಹನ್ರಾವ್ ನಲ್ವಡಿ ಕರೆ ನೀಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಾನವ ಹಕ್ಕುಗಳ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿ, ಈಗಿನ ರಾಜಕೀಯ ನಾಯಕರಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿರುವುದರಿಂದ ನೂತನ ಪ್ರಾದೇಶಿಕ ಪಕ್ಷಗಳು ಮತ್ತು ಜನರ ಕಷ್ಟಕ್ಕೆ ಸ್ಪಂದಿಸುವ ನಾಯಕರ ಕಡೆ ಜನರ ಒಲವು ತೋರುತ್ತಿದ್ದಾರೆ ಎಂದರು.
ತೊಣಚಿನಕುಪ್ಪೆ ವೆಂಕಟೇಶ್, ಬೂದಿಹಾಲ್ ಬಿ.ಪಿ.ಜಯರಾಮಯ್ಯ, ಜಗನ್ನಾಥ್ ಗೌಡ, ರವಿಚಂದ್ರ, ಕಿರಣ್, ಬಾಲಾಜಿ, ನಾರಾಯಣ್, ಎಸ್. ಕುಮಾರ್, ನಾಗರಾಜು ಇದ್ದರು.
ಬಿ. ಶಶಿಧರ್ ಸ್ಮಾರಕ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆ
ಕನ್ನಡಪ್ರಭ ವಾರ್ತೆ, ಕನಕಪುರ, ಜ.15
ಇಲ್ಲಿನ ಬ್ಲಾಸಂ ಪ್ರೌಢಶಾಲಾ ಸಭಾಂಗಣದಲ್ಲಿ ದಿ.ಬಿ.ಶಶಿಧರ್ ಸ್ಮಾರಕ ತಾಲೂಕು ಮಟ್ಟದ ಏಳನೇ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ತಾಲೂಕಿನ 30ಕ್ಕೂ ಹೆಚ್ಚು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವ್ಯವಸ್ಥಾಪಕ ಧರ್ಮದರ್ಶಿ ಡಾ.ಎಸ್. ನಂದೀಶ್ ನೆರವೇರಿಸಿದರು. ಟ್ರಸ್ಟ್ ಅಧ್ಯಕ್ಷ ಎಂ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಸುರಾಸ್ ಕಲಾನಿಕೇತನ್ ನಿರ್ದೇಶಕ ಸಿ.ವಿ. ಗೋಪಿಮಾಧವ್ ರಸಪ್ರಶ್ನೆ ಕಾರ್ಯಕ್ರಮವನ್ನು ದೃಶ್ಯ, ಶ್ರವ್ಯ ಮಾಧ್ಯಮಗಳನ್ನು ಬಳಸಿಕೊಂಡು ವಿಭಿನ್ನವಾಗಿ, ವಿಶಿಷ್ಟವಾಗಿ ನಡೆಸಿಕೊಟ್ಟರು.
ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಎಸ್ಬಿಎಂ ಬ್ಲಾಸಂ, ಜೆಟ್ ಪಬ್ಲಿಕ್, ಮೊರಾರ್ಜಿ ವಸತಿಶಾಲೆ, ಪ್ರಗತಿವಿದ್ಯಾನಿಕೇತನ್, ಸೇಂಟ್ ಮೈಖೇಲ್ ಶಾಲೆಗಳು ಪಾಲ್ಗೊಂಡಿದ್ದು ಪ್ರಥಮ ಬಹುಮಾನವನ್ನು ಜೆಟ್ ಪಬ್ಲಿಕ್ ಶಾಲೆ ಹಾಗೂ ದ್ವಿತೀಯ ಬಹುಮಾನವನ್ನು ಬ್ಲಾಸಂ ಶಾಲೆ ಪಡೆಯಿತು. ವಿಜೇತರಿಗೆ ಬಹುಮಾನಗಳನ್ನು ಮಹದೇವಸ್ವಾಮಿ ವಿತರಿಸಿದರು. ಪ್ರಾಂಶುಪಾಲರಾದ ಗಂಗಾಂಬಿಕಾ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಕಾ. ಪ್ರಕಾಶ್ ನಿರೂಪಿಸಿದರು. ಖಜಾಂಚಿ ಸತೀಶ್ ವಂದಿಸಿದರು.