ಅಧಿಕಾರ ಹಂಚಿಕೆ ಒಡಂಬಡಿಕೆ ಜೆಡಿಎಸ್‌ಗೆ ಬಿಸಿ ತುಪ್ಪ
ರಾಮನಗರ: ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರದನ್ವಯ ಜಿ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬದಲಾವಣೆ ಪ್ರಕ್ರಿಯೆ ಜೆಡಿಎಸ್ ಪಾಲಿಗೆ ಬಿಸಿ ತುಪ್ಪವಾಗಿದೆ. ಸ್ವಪಕ್ಷೀಯ ಸದಸ್ಯರು ಮತ್ತು ಮುಖಂಡರ ಅಪಸ್ವರ, ಆಡಳಿತಾರೂಢ ಕಾಂಗ್ರೆಸ್‌ನಿಂದ ಆಪರೇಷನ್ಹ್‌ಸ್ತ ಕಾರ್ಯಾಚರಣೆಯ ಭೀತಿಯಿಂದ ಸ್ಪಷ್ಟ ತೀರ್ಮಾನಕ್ಕೆ ಬರಲಾಗದೆ ದಳಪತಿಗಳು ಕಂಗೆಟ್ಟಿದ್ದಾರೆ.
ಎರಡನೇ 20 ತಿಂಗಳ ಅಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನವನ್ನು ಕೆ.ಮುದ್ದುರಾಜ್ ಯಾದವ್, ಎಚ್.ಸಿ.ರಾಜು ಅವರಿಗೆ ತಲಾ 8 ತಿಂಗಳು, ಸುಧಾ ರಾಜು ಅವರಿಗೆ ಕಡೆಯ 4 ತಿಂಗಳು ಮತ್ತು ಉಪಾಧ್ಯಕ್ಷ ಸ್ಥಾನವನ್ನು ಎಸ್.ಬಿ.ಗೌರಮ್ಮ, ಬಿ.ವಿ.ಹಂಸಕುಮಾರಿ ಅವರಿಗೆ ತಲಾ 10 ತಿಂಗಳಂತೆ ಹಂಚಿಕೆ ಮಾಡಲಾಗಿತ್ತು.
ಬದಲಾವಣೆಗೆ ಒತ್ತಡ: ಅವಧಿ ಮೀರಿದ ನಂತರವೇ ಮುದ್ದುರಾಜ್ ಯಾದವ್ ಬದಲಾವಣೆ ಆಗಿದ್ದು, ರಾಜು ಅವರ ಪಟ್ಟಾಭಿಷೇಕ ಕೊಂಚ ತಡವಾಯ್ತು. ಇದೀಗ ಅವರ ಕಾಲಮಿತಿಯೂ ಮೀರಿದೆ. ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿರುವ ಸುಧಾ ರಾಜು ವರಿಷ್ಠರ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಉಪಾಧ್ಯಕ್ಷ ಸ್ಥಾನದ ಅಧಿಕಾರ ಹಂಚಿಕೆ ಸೂತ್ರ ಜಾರಿ ಜೆಡಿಎಸ್ ಪಾಲಿಗೆ ಅನಿವಾರ್ಯವೂ ಅಲ್ಲ. ಆಕಾಂಕ್ಷಿ ಒತ್ತಡವನ್ನೂ ಹೇರುತ್ತಿಲ್ಲ. ಹೀಗಾಗಿ ಉಪಾಧ್ಯಕ್ಷ ಹುದ್ದೆ ವಿಷಯದಲ್ಲಿ ಗೊಂದಲವಿಲ್ಲ.
ಅಧಿಕಾರ ಹಂಚಿಕೆ ಜಾರಿ ವಿಷಯವಾಗಿ ಚರ್ಚಿಸಲು ಎರಡು ದಿನದ ಹಿಂದಷ್ಟೇ ಬೆಂಗಳೂರಿನಲ್ಲಿರುವ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಜೆಡಿಎಸ್ ಸಭೆ ನಡೆದಿದ್ದು, ಒಮ್ಮತ ಮೂಡಿಲ್ಲ. ತಮಗೆ ಹುದ್ದೆ ನೀಡಲೇಬೇಕೆನ್ನುವ ಸುಧಾ ರಾಜು ಹಕ್ಕು ಪ್ರತಿಪಾದನೆಗೆ ಸದಸ್ಯ ರಮೇಶ್ ಧ್ವನಿಗೂಡಿಸಿದ್ದಾರೆ. ಉಳಿದ ಸದಸ್ಯರಲ್ಲಿ ಬದಲಾವಣೆ ಕುರಿತು ಭಿನ್ನರಾಗ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಭೆ ಕರೆಯುವುದಾಗಿ ಹೇಳಿ ಸದಸ್ಯರನ್ನು ಕುಮಾರಸ್ವಾಮಿ ಸಾಗ ಹಾಕಿದ್ದಾರೆ.
ಸುಧಾಗೆ ತೀವ್ರ ವಿರೋಧ: ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಸಭೆಗೆ ಜೆಡಿಎಸ್ 12 ಸದಸ್ಯರ ಪೈಕಿ 8 ಮಂದಿ
ಮಾತ್ರವೇ ಹಾಜರಿದ್ದು, ನಾಲ್ವರು ಗೈರಾಗಿದ್ದರು. ತನ್ಮಧ್ಯೆ, ಸುಧಾ ರಾಜು ಪ್ರತಿನಿಧಿಸುತ್ತಿರುವ ಕೋಡಂಬಳ್ಳಿ
ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಮುಖಂಡರು ಮತ್ತು ತಾ.ಪಂ. ಸದಸ್ಯರ ನಿಯೋಗವು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಯಾವ ಕಾರಣಕ್ಕೂ ಸುಧಾ ರಾಜು ಅವರಿಗೆ ಜಿ.ಪಂ. ಅಧ್ಯಕ್ಷ ಗಾದಿ ನೀಡದಂತೆ ಆಕ್ಷೇಪ ವ್ಯಕ್ತಪಡಿಸಿದೆ.
ಸುಧಾ ರಾಜು ಕಮೀಷನ್ ಆಸೆಗಾಗಿ ಕಾಮಗಾರಿಯನ್ನು ಅನ್ಯ ಕ್ಷೇತ್ರ ವ್ಯಾಪ್ತಿಗೆ ಮಂಜೂರು ಮಾಡುತ್ತಿದ್ದಾರೆ. ಯಾವುದೇ ಹಂತದಲ್ಲೂ ತಮ್ಮ ಮಾತು ಪರಿಗಣಿಸುತ್ತಿಲ್ಲ. ಚುನಾವಣೆಯಲ್ಲೂ ಪಕ್ಷ ನಿಷ್ಠೆ ಮೆರೆಯಲಿಲ್ಲ ಎಂದು ತಾ.ಪಂ. ಸದಸ್ಯರಾದ ಕಾಂತರಾಜು, ವೆಂಕಟೇಶ್, ಮಾರೇಗೌಡ, ಭಾನುಪ್ರಕಾಶ್, ಜೆಡಿಎಸ್ ಪ್ರಭಾವಿ ಮುಖಂಡರಾದ ಸಿಂ.ಲಿಂ.ನಾಗರಾಜು, ವಡ್ಡರಹಳ್ಳಿ ರಾಜಣ್ಣ, ಹುಚ್ಚೇಗೌಡ, ಈಶ್ವರಯ್ಯ, ವಿಜಿ ಮತ್ತಿತರರಿದ್ದ ನಿಯೋಗ ವಾಗ್ದಾಳಿ ನಡೆಸಿದೆ.
ರಾಜು ಆಡಳಿತಕ್ಕೆ ಮೆಚ್ಚುಗೆ: ಪ್ರಸ್ತುತ ಅಧ್ಯಕ್ಷರಾಗಿರುವ ಎಚ್.ಸಿ. ರಾಜು ಅವರು ದಕ್ಷ ಆಡಳಿತಗಾರ ಮತ್ತು ಪಕ್ಷ ನಿಷ್ಠರಾಗಿದ್ದಾರೆ. ಸಮರ್ಥವಾಗಿ ಸಭೆಗಳನ್ನು ನಡೆಸಿಕೊಂಡು, ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರಿಂದ ಜಿ.ಪಂ. ಒಳಗೆ ಮತ್ತು ಹೊರಗೆ ಪಕ್ಷಕ್ಕಾಗಲೀ, ನಾಯಕತ್ವಕ್ಕಾಗಲೀ ಯಾವುದೇ ಅಪಮಾನ, ಅಗೌರವ ಉಂಟಾಗಿಲ್ಲ. ಹೀಗಿರುವಾಗ ಬದಲಾವಣೆಗೆ ಕೈ ಹಾಕಿ ಅನಾವಶ್ಯಕ ತೊಂದರೆ ತಂದೊಡ್ಡಿಕೊಳ್ಳುವುದೇಕೆ ಎನ್ನುವ ಪ್ರಶ್ನೆಯೇ ಉದ್ಭವಿಸಿದೆ.
ಮಾನ ಹರಾಜು: ಈಚೆಗೆ ಆದ ತಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಹುಮತವಿದ್ದರೂ ಜೆಡಿಎಸ್ ಅಧಿಕಾರ ಉಳಿಸಿಕೊಳ್ಳಲಿಲ್ಲ. ಜೆಡಿಎಸ್‌ನಾಯಕರು ತಮ್ಮದೇ ವೈಫಲ್ಯ, ಅಪನಂಬಿಕೆ, ಅಸಡ್ಡೆಯಿಂದಾಗಿ ಮಾನ ಹರಾಜು ಮಾಡಿಕೊಂಡರು. ಈಗಲೂ ಅಂಥದ್ದೇ ಗೊಂದಲವೇಕೆ ಎನ್ನುವುದು ಹಲವರ ಪ್ರಶ್ನೆ. ಜಿ.ಪಂ. ಅಧ್ಯಕ್ಷರ ಬದಲಾವಣೆ ವಿಷಯದಲ್ಲಿ ಮುಖಂಡರ ನಡುವೆಯೂ ಒಮ್ಮತವಿಲ್ಲ. ಹಕ್ಕೊತ್ತಾಯದ ಹಿಂದೆ ದೂರದೃಷ್ಟಿಯ ಯೋಜನೆ ಇದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.
ಬದಲಾವಣೆಯ ಸವಾಲು: ಹೇಳಿ ಕೇಳಿ ಇದು ಲೋಕಸಭೆ ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲಿರುವ ಕಾಲ. ಇಂತಹ ಸನ್ನಿವೇಶದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಬದಲಾವಣೆಗೆ ಕೈ ಹಾಕಿ, ಎಡವಟ್ಟೇನಾದರೂ ಆದರೆ ಮತ್ತೊಮ್ಮೆ ಮುಖಭಂಗ ಅನುಭವಿಸಬೇಕಾಗುತ್ತದೆ ಎನ್ನುವ ಆತಂಕ ದಳಪತಿಗಳನ್ನು ಸಹಜವಾಗಿಯೇ ಕಾಡುತ್ತಿದೆ. ಸುಧಾ ರಾಜು ಅವರಿಗೆ ಸ್ವಕ್ಷೇತ್ರದಲ್ಲೇ ವ್ಯಾಪಕ ವಿರೋಧ ಇರುವುದು ಮತ್ತೊಂದು ಸವಾಲಿನ ಸಂಗತಿಯೂ ಹೌದು.
ಸ್ಥಳೀಯ ಮುಖಂಡರು ಹಾಗೂ ಕ್ಷೇತ್ರ ವ್ಯಾಪ್ತಿಯ ತಾ.ಪಂ. ಸದಸ್ಯರ ಮಾತು ಧಿಕ್ಕರಿಸಿ ಸುಧಾ ರಾಜು ಅವರಿಗೇನಾದರೂ ಅಧ್ಯಕ್ಷ ಹುದ್ದೆ ಕಲ್ಪಿಸಲು ವರಿಷ್ಠರು ಮುಂದಾದರೆ, ಜೆಡಿಎಸ್ ಮೂರಾಬಟ್ಟೆಯಾಗಿರುವ ಚನ್ನಪಟ್ಟಣದಂತಹ ಕ್ಷೇತ್ರದಲ್ಲಿ ಮತ್ತೊಂದು ಗಂಡಾಂತರ ಎದುರಾಗುವ ಭೀತಿ ಇಲ್ಲದಿಲ್ಲ. ಒಟ್ಟಾರೆ, ಅಧಿಕಾರ ಹಂಚಿಕೆ ಸೂತ್ರವೇ ಜಿಲ್ಲಾ ಜೆಡಿಎಸ್ ಪಾಲಿಗೆ ಮುಳುವಾಗಿದೆ.
ಆದೇಶ ಪಾಲನೆಗೆ ಸಿದ್ಧ
ನಾನು ಅಧಿಕಾರಕ್ಕಿಂತ ಪಕ್ಷ ಮತ್ತು ನಾಯಕ ನಿಷ್ಠೆ ಉಳ್ಳವನು. ಅಧಿಕಾರಕ್ಕೆ ಅಂಟಿಕೊಂಡು ಕೂರುವ ಇರಾದೆ ನನಗಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸೂಚಿಸಿದ ಕ್ಷಣವೇ ಪದತ್ಯಾಗಕ್ಕೆ ಸಿದ್ಧನಿದ್ದೇನೆ.
- ಎಚ್.ಸಿ.ರಾಜು, ಅಧ್ಯಕ್ಷ, ಜಿ.ಪಂ., ರಾಮನಗರ.
-ಮತ್ತೀಕೆರೆ ಜಯರಾಮ್