ಉಪವಿಭಾಗಾಧಿಕಾರಿ ಕಚೇರಿ ಕಾರ್ಯಾರಂಭದ ಲಿಖಿತ ಆದೇಶ ನೀಡಿ
ದೊಡ್ಡಬಳ್ಳಾಪುರ: ಉಪವಿಭಾಗಾಧಿಕಾರಿ ಕಚೇರಿ ದೊಡ್ಡಬಳ್ಳಾಪುರದಲ್ಲಿ ಕಾರ್ಯಾರಂಭ ಮಾಡದ ಹೊರತು ಯಾವುದೇ ಕಾರಣಕ್ಕೂ ಜ.26ರ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಉಪವಿಭಾಗಾಧಿಕಾರಿಗಳು ಧ್ವಜಾರೋಹಣ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಒಕ್ಕೊರಲ ತೀರ್ಮಾನ ಕೈಗೊಂಡಿದೆ.
ಈ ನಿರ್ಧಾರಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಕೂಡ ಧ್ವನಿಗೂಡಿಸಿದ್ದು, ಲಿಖಿತ ಆದೇಶ ನೀಡದ ಹೊರತು ನಾವೂ ಉಪವಿಭಾಗಾಧಿಕಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಬದಲಿಗೆ ಚಳವಳಿಗೆ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸಭೆ ನಡೆಯಿತು. ಅದೇ ಸಮಯಕ್ಕೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಶಾಸಕರ ನೇತೃತ್ವದಲ್ಲಿ ನಡೆಯಿತು.
ಜಿಲ್ಲಾ ಹೋರಾಟ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಹತ್ತಾರು ಸಂಘಟನೆಗಳ ಮುಖಂಡರು, 2 ಅಂಶದ ನಿರ್ಧಾರ ಕೈಗೊಂಡರು. ಕೂಡಲೇ ದೊಡ್ಡಬಳ್ಳಾಪುರದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಕಾರ್ಯಾರಂಭ ಮಾಡಬೇಕು. ಮಾಡದ ಹೊರತು ಗಣರಾಜ್ಯೋತ್ಸವದಲ್ಲಿ ಶಾಸಕರು, ಜಿಲ್ಲಾ ಮಂತ್ರಿಗಳು,ತಹಶೀಲ್ದಾರರು, ತಪ್ಪಿದಲ್ಲಿ ಸಾಮಾನ್ಯ ಹಿರಿಯ ನಾಗರೀಕರೊಬ್ಬರಿಂದ ಧ್ವಜಾರೋಹಣ ಮಾಡಬೇಕು. ಜಿಲ್ಲಾ ಕೇಂದ್ರ ಘೋಷಣೆ ಸಂಬಂಧ ಸರ್ಕಾರ ಕೂಡಲೇ ನಿರ್ಧಾರ ಪ್ರಕಟಿಸಬೇಕು ಎಂಬ ತೀರ್ಮಾನದೊಂದಿಗೆ ಎಲ್ಲ ಮುಖಂಡರು ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿದರು.
ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ತಾಲೂಕು ಆಡಳಿತ ಮತ್ತು ಶಾಸಕರಿಗೆ ಸ್ಪಷ್ಟ ಸಂದೇಶ ರವಾನಿಸಿದರು. ಕಳೆದ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೆ ಉಪವಿಭಾಗಾಧಿಕಾರಿಗಳಿಗೆ ಅವಕಾಶ ಕೊಡಲ್ಲ ಎಂದು ಪ್ರತಿಭಟನೆಗಳು ನಡೆದಾಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ 2 ತಿಂಗಳೊಳಗೆ ಉಪವಿಭಾಗ ಕಚೇರಿಯನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದರು. ಆದರೆ 6 ತಿಂಗಳಾದರೂ ಕಚೇರಿ ಇನ್ನೂ ಸ್ಥಳಾಂತರವಾಗಿಲ್ಲ. ಗಣರಾಜ್ಯೋತ್ಸವ ಹತ್ತಿರ ಬರುತ್ತಿದ್ದಂತೆ ಇಲ್ಲಿಗೆ ಬಂದು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದಾರೆ. ಇದು ಕಾರ್ಯರೂಪಕ್ಕೆ ಬರಲು ಇನ್ನೆಷ್ಟು ದಿನ ಕಾಯಬೇಕೋ ಗೊತ್ತಿಲ್ಲ. ಹೀಗಾಗಿ ಸರ್ಕಾರ ವಿಳಂಬ ಧೋರಣೆಯನ್ನು ಉದ್ದೇಶಪೂರ್ವಕವಾಗಿ ಅನುಸರಿಸುತ್ತಿದೆ. ಇದನ್ನು ಶಾಸಕರು ತೀವ್ರವಾಗಿ ಖಂಡಿಸಬೇಕು. ಸರ್ಕಾರದ ಹಂತದಲ್ಲಿ ಪ್ರತಿಭಟಿಸಿ ಕಾರ್ಯಸಾಧಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸ್ಥಳದಲ್ಲೇ ಉಪವಿಭಾಗಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಮ್ಮ ನಿರ್ಧಾರ ಪ್ರಕಟಿಸಿದರು. ದೊಡ್ಡಬಳ್ಳಾಪುರದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಕಾರ್ಯಾರಂಭ ಮಾಡುವುದು ಖಚಿತ. ಆದರೆ ಪದೇ ಪದೇ ವಿಳಂಬವಾಗುತ್ತಿರುವುದು ಸರಿಯಲ್ಲ. ಹೀಗಾಗಿ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ದೊಡ್ಡಬಳ್ಳಾಪುರಕ್ಕೆ ದಶಕಗಳಿಂದ ಆಗಿರುವ ವಂಚನೆಯನ್ನು ಸರಿಪಡಿಸುವುದು ಸರ್ಕಾರದ ಹೊಣೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಜೋಷಿ, ತಾ.ಪಂ ಉಪಾಧ್ಯಕ್ಷ ಕೆ.ಮುನಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಜರಿದ್ದರು.