ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲಾ ಕೇಂದ್ರ ಘೋಷಣೆ ವಿಳಂಬ ಧೋರಣೆ ಸಲ್ಲ

Vishwanath S
Updated On : 17 Jan 2014, 1:08 am

ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ ,ಜ.16
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನು ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಖಂಡಿಸಿದೆ.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ರಾಜೇಂದ್ರಕುಮಾರ್, ತೂಬಗೆರೆ ಷರೀಫ್ ಮತ್ತಿತರರು, ಜಿಲ್ಲಾ ಕೇಂದ್ರದ ಕುರಿತು ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ನೀಡಿರುವ ಹೇಳಿಕೆ ಖಂಡನಾರ್ಹ. ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಕೂಡ ಅವರ ಕ್ಷೇತ್ರವ್ಯಾಪ್ತಿಗೆ ಬರುತ್ತದೆ. ಆದರೆ ಅವರು ದೊಡ್ಡಬಳ್ಳಾಪುರ ತಾಲೂಕು ವಿರೋಧಿ ಹೇಳಿಕೆ ನೀಡಿದ್ದಾರೆ. ದೇವನಹಳ್ಳಿ ತಾಲೂಕಿನ ಜನರನ್ನು ಓಲೈಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಬುದ್ಧತೆ ಮೀರಿ ದೊಡ್ಡಬಳ್ಳಾಪುರ ತಾಲೂಕನ್ನು ಕಡೆಗಣಿಸುವ ಮಾತನ್ನಾಡಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕೇಂದ್ರದ ಹೋರಾಟ ಆರಂಭವಾಗಿ 6 ವರ್ಷಗಳಾದರೂ ಸರ್ಕಾರಗಳು ದಿವ್ಯ ನಿರ್ಲಕ್ಷ್ಯ ವಹಿಸಿವೆ. ಈಗಾಗಲೇ ತಾಲೂಕಿನಲ್ಲಿ ಸುಮಾರು 25 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಮತ್ತಿತರ ಅಗತ್ಯಗಳಿಗೆ ಪೂರಕವಾಗಿ ಗುರ್ತಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ವರದಿ ಸಲ್ಲಿಕೆಯಾಗಬೇಕು. ಈಗಾಗಲೇ ಅಂಕಿ-ಅಂಶಗಳ ಪರಿಶೀಲನೆ ನಡೆಯುತ್ತಿದೆ. ಈ ಹಂತದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚುರುಕುಗೊಳ್ಳಬೇಕು ಎಂದು ಆಗ್ರಹಿಸಿದರು.
ಹೋರಾಟ ತೀವ್ರ: ಈ ಸಂಬಂಧ ಜ.21ರಂದು ಹೋರಾಟದ ಸ್ವರೂಪ ನಿರ್ಧರಿಸುವ ಪೂರ್ವಭಾವಿಸಭೆ ನಡೆಯಲಿದೆ. ಹಂತ ಹಂತವಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಸರ್ಕಾರ ಕಿವಿಗೊಡದಿದ್ದಲ್ಲಿ ಯಾವುದೇ ಬಗೆಯ ಚಳವಳಿಗೂ ಸಿದ್ಧ ಎಂದು ಸಭೆ ಘೋಷಿಸಿತು. ಸಭೆಯಲ್ಲಿ ಜಿಲ್ಲಾ ಹೋರಾಟ ಸಮಿತಿಯ ಎಂ.ಕೃಷ್ಣಮೂರ್ತಿ, ಹ.ರಾಮಕೃಷ್ಣ, ಸಂಜೀವನಾಯಕ್, ಎಚ್.ಎಸ್.ನಾಗೇಶ್, ಟಿ.ಜಿ.ಮಂಜುನಾಥ್, ಗುರುರಾಜಪ್ಪ, ಗಂಗರಾಜ್, ಎಚ್.ಎಸ್.ವೆಂಕಟೇಶ್, ವಿಮಲಮ್ಮ, ಎನ್.ಸಿ.ಲಕ್ಷ್ಮಿ, ಹನುಮಂತರಾಯಪ್ಪ, ರಾಜಣ್ಣ, ಡಿ.ಪಿ.ಆಂಜನೇಯ, ಪ್ರಕಾಶ್‌ರಾವ್, ಮಂಜು, ರಾಜುಸಣ್ಣಕ್ಕಿ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement