ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಿತ್ಯಾನಂದ ಗಡಿಪಾರಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

Vishwanath S
Updated On : 17 Jan 2014, 1:07 am

ಕ.ಪ್ರ.ವಾರ್ತೆ , ರಾಮನಗರ , ಜ.16
ಬಿಡದಿ ಬಳಿಯ ಧ್ಯಾನಪೀಠದ ಕೃಷಿ ಜಮೀನಿನಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳ ತೆರವು ಮತ್ತು ಕಪಟಿ ಸ್ವಾಮಿ ನಿತ್ಯಾನಂದ ಗಡಿಪಾರಿಗೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಅಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ.  
ನಿತ್ಯಾಶ್ರಮವಾಗಿರುವ ಬಿಡದಿ ಧ್ಯಾನಪೀಠದ ಎದುರು ಗುರುವಾರ ಮುಂಜಾನೆಯಿಂದಲೇ ಧರಣಿ ಪ್ರಾರಂಭಿಸಿರುವ ಪ್ರತಿಭಟನಾಕಾರರು ನಿತ್ಯಾನಂದ, ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಈಡೇರಿಕೆವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಧ್ಯಾನ ಪೀಠವು ಸುಮಾರು 22 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಪೈಕಿ ಕೇವಲ 1 ಎಕರೆಯಷ್ಟು ಮಾತ್ರವಷ್ಟೇ ಭೂ ಪರಿವರ್ತನೆ ಆಗಿದ್ದು, ಉಳಿದ 21 ಎಕರೆಯಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮವನ್ನು ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಾಣ ಸಹಿತ ಕೃಷಿಯೇತರ ಚಟುವಟಿಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.  
ನಿತ್ಯಾನಂದ ಅಕ್ರಮ: ಭೂ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಜಾರಿಯಾದ ನೊಟೀಸ್‌ಗೆ ನಿತ್ಯಾನಂದ ಕಡೇ ಪಕ್ಷ ಉತ್ತರಿಸುವ ಗೋಜಿಗೂ ಹೋಗದೆ ಅಕ್ರಮ ಕಾರ್ಯಚಟುವಟಿಕೆ ಮುಂದುವರಿಸಿದ್ದಾನೆ. ಕ್ರಮ ಕೈಗೊಳ್ಳಬೇಕಾದ ಸರ್ಕಾರಿ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಬಡವರು ವಾಸಿಸಲು ಕೃಷಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡರೆ ತೆರವುಗೊಳಿಸುವ ಅಧಿಕಾರಿಗಳು ನಿತ್ಯಾನಂದ ಕಟ್ಟಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸದಿರುವ ಹಿಂದಿನ ರಹಸ್ಯವೇನು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಇರುವ ಅಡ್ಡಿಯಾದರೂ ಏನೆನ್ನುವುದನ್ನು ಜಿಲ್ಲಾಡಳಿತ  ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ವಿಷಯವಾಗಿ ಜಿಲ್ಲಾಡಳಿತ ಮೀನಮೇಷ ಎಣಿಸಿದಷ್ಟೂ ಚಳವಳಿಯನ್ನು ಉಗ್ರಗೊಳಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಯೋಗೇಶ್ ಗೌಡ, ರಂಜಿತ್‌ಗೌಡ, ವೆಂಕಟರಾಮು, ನೀಲೇಶ್‌ಗೌಡ, ನವೀನ್‌ಗೌಡ, ಕನ್ನಡ ಹರೀಶ್, ಬೈರೇಗೌಡ, ಮಾರೇಶ, ದಿನೇಶ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement