ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿ ಪೂರ್ಣಗೊಳಿಸಿ: ರಾಜು
ಕ.ಪ್ರ.ವಾರ್ತೆ , ರಾಮನಗರ , ಜ.16
ಪ್ರಸಕ್ತ ಹಣಕಾಸು ವರ್ಷದೊಳಗೆ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಮಾರ್ಚ್ ಅಂತ್ಯಕ್ಕೆ ಕಾದು ಕುಳಿತುಕೊಳ್ಳದೆ ಬಿಲ್ ಮಂಜೂರು ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಯಾವ ಕಾರಣಕ್ಕೂ ಅಕ್ರಮಕ್ಕೆ ಆಸ್ಪದ ಕೂಡದು ಎಂದು ಎಚ್ಚರಿಸಿದರು.
ಪಟ್ಟಿ ತಯಾರಿಸಿ: ಯಾವ ಕಡೆ ಅಂಬೇಡ್ಕರ್ ಭವನದ ನಿರ್ಮಾಣ ಅಗತ್ಯವಿದೆ ಎನ್ನುವ ಕುರಿತು ತ್ವರಿತವಾಗಿ ಪಟ್ಟಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣಾಧಿಕಾರಿಗೆ ಸೂಚಿಸಿದ ಅಧ್ಯಕ್ಷ ರಾಜು, ಶಾದಿ ಮಹಲ್ ಮತ್ತು 15 ಅಂಶಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಜರೂರು ಕ್ರಮ ಜರುಗಿಸಲು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೂಚಿಸಿದರು.
ಪರಿಹಾರ ವಿತರಿಸಿ: ಕಾಲುಬಾಯಿ ಜ್ವರಕ್ಕೆ ಬಲಿಯಾದ ರಾಸುಗಳಿಗೆ ಪರಿಹಾರವನ್ನು ತಕ್ಷಣವೇ ವಿತರಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವ ಎಲ್ಲ ಫಲಾನುಭವಿಗಳಿಗೂ ರು.35 ಸಾವಿರ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
ಅಳವಡಿಕೆಗೆ ಸೂಚನೆ: ಪಡಿತರ ಚೀಟಿಯ ಅರ್ಜಿಗಳ ಪರಿಶೀಲನೆ ಹಾಗೂ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋ ಮೆಟ್ರಿಕ್ ಅಳವಡಿಸಿ, ಪಡಿತರ ವಿತರಣೆಯಲ್ಲಾಗುತ್ತಿರುವ ಅಕ್ರಮ ತಡೆಗೆ ಮುಂದಾಗುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಿಗೆ ಸಿಇಒ ಡಾ.ಎಂ.ವಿ. ವೆಂಕಟೇಶ್ ಸೂಚಿಸಿದರು.
ಸಂಪರ್ಕ ಕಲ್ಪಿಸಿ: ಗಂಗಾ ಕಲ್ಯಾಣ ಯೋಜನೆಯಡಿ ಬಾಕಿ ಇರುವ 31 ಫಲಾನುಭವಿಗಳ ಕೊಳವೆ ಬಾವಿಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.
ಈ ವಿಷಯದಲ್ಲಿ ವಿಳಂಬವಾದರೆ ಬೆಸ್ಕಾಂ ಅಧಿಕಾರಿಗಳೇ ಹೊಣೆ ಎಂದು ಅಧ್ಯಕ್ಷ ರಾಜು ಹೇಳಿದರು.
ಸಸಿ ನೆಡಲು ಒತ್ತು: ರಾಮನಗರ ಜಿಲ್ಲೆಯಲ್ಲಿ ಶ್ರೀಗಂಧ, ಹೆಬ್ಬೇವು, ಹೊಂಗೆ, ನೇರಳೆ ಮತ್ತು ಬಿದಿರು ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಈ ವಿಷಯದಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೆ ನೆರವಾಗುವಂತೆ ಜಲಾನಯನ ಅಭಿವೃದ್ಧಿ ಇಲಾಖೆ ಸಲಹೆ ನೀಡಿದರು.
ಸವಲತ್ತು ವಿತರಿಸಿ: ರೇಷ್ಮೆ ಬೆಳೆಗಾರರಿಗೆ ಪ್ರಸಕ್ತ ಸಾಲಿನಲ್ಲಿ ರೈತರಿಗೆ ನೇರವಾಗಿ ಇಸಿಎಸ್ ಮೂಲಕ ಬಾಕಿ ಪ್ರೋತ್ಸಾಹ ಧನ, ಬಸವ ವಸತಿ ಯೋಜನೆಯಡಿ 10 ಚದರ ಮನೆ ನಿರ್ಮಾಣ, ಟ್ರ್ಯಾಕ್ಟರ್ ಖರೀದಿ ಸಾಲ, ಹನಿ ನೀರಾವರಿ ಅಳವಡಿಕೆಗೆ ಸಂಬಂಧಿಸಿದ ಸವಲತ್ತುಗಳನ್ನು ಜರೂರಾಗಿ ವಿತರಿಸಬೇಕು ಎಂದರು.
ಲೈಸನ್ಸ್ ರದ್ದುಪಡಿಸಿ: ವೈದ್ಯರು ಸೂಚಿಸಿದ ಔಷಧಗಳ ಬದಲು ಬೇರೆ ಕಂಪೆನಿ ಔಷಧಗಳನ್ನು ನೀಡುವ ಔಷಧ ಅಂಗಡಿ ಮಾರಾಟಗಾರರ ಲೈಸನ್ಸ್ ರದ್ದುಪಡಿಸಬೇಕು. ಜಿಲ್ಲೆಯಲ್ಲಿ ಕ್ಷಯ ರೋಗ ಪತ್ತೆ, ಔಷಧೋಪಚಾರಕ್ಕೆ ಒತ್ತು ನೀಡಬೇಕು ಎಂದು ಆರೋಗ್ಯಾಧಿಕಾರಿಗೆ ಸಿಇಒ ವೆಂಕಟೇಶ್ ತಿಳಿಸಿದರು.
ನಿರ್ಮಲ ಭಾರತ ಅಭಿಯಾನದಡಿ ವಯಕ್ತಿಕ ಶೌಚಾಲಯ ನಿರ್ಮಾಣ ಗುರಿ ಸಾಧನೆಗೆ ಎಲ್ಲ ಇಲಾಖೆಗಳು ಸಹಕರಿಸಬೇಕು ಎಂದರು. ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಗೌರಮ್ಮ, ಮುಖ್ಯ ಯೋಜನಾಧಿಕಾರಿ ಧನುಷ್, ಉಪ ಕಾರ್ಯದರ್ಶಿ ಆರ್.ಲತಾ ಮತ್ತಿತರರಿದ್ದರು.