ಬೆಸ್ಕಾಂ ಎಂಜಿನಿಯರ್ ಬೇಜಾವ್ದಾರಿಗೆ ಆಕ್ರೋಶ
ಮಾಗಡಿ: ಬೆಸ್ಕಾಂ ಎಂಜಿನಿಯರ್ಗಳ ಬೇಜಾವ್ದಾರಿಯಿಂದ ರೈತರ ಮೋಟರ್ ಪಂಪ್ಸೆಟ್ಗಳು, ಕೇಬಲ್ಗಳು ಸುಟ್ಟು ಹೋಗುತ್ತಿದೆ ಎಂದು ಆರೋಪಿ, ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಕುದೂರು ಹೋಬಳಿ ಬೀಚನಹಳ್ಳಿ, ಹುಲೀಕಲ್, ಜಗ್ಗನಹಳ್ಳಿ, ಮಂದಾನಿಪಾಳ್ಯ, ಗುಂಡೀಗೆರೆ ಸುತ್ತಮುತ್ತಲ ರೈತರು ಕುದೂರು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಸಿಂಗಲ್ ಪೇಸ್ ವಿದ್ಯುತ್ ಲೈನ್ಗೆ ಏಕಾಏಕಿ ತ್ರೀಪೇಸ್ ವಿದ್ಯುತ್ ಸಂಪರ್ಕ ನೀಡುತ್ತಿರುವುದರಿಂದ ರೈತರು ಕೊಳವೆ ಬಾವಿಗೆ ಅಳವಡಿಸಿರುವ ಮೋಟರ್ ಪಂಪ್ ಸೆಟ್ ಸುಟ್ಟು ಹೋಗುತ್ತಿವೆ. ಸದರಿ ಗ್ರಾಮಗಳಿಗೆ ನಿರಂತರ ಜ್ಯೋತಿ ಮಂಜೂರಾಗಿದ್ದರೂ ನೀಡುತ್ತಿಲ್ಲ, ದಿನಕ್ಕೆ ಕೇವಲ 3 ಗಂಟೆಕಾಲ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಇದರಲ್ಲೂ ಸಹ ಸರಿಯಾಗಿ ಪೂರೈಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಮೂರು ಗಂಟೆ ಮಾತ್ರ ತ್ರೀಪೇಸ್ ನೀಡುವುದಿರಂದ ರೈತರು ಕೊಳವೆ ಬಾವಿಯಿಂದ ನೀರು ಹರಿಸುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ. ರಾತ್ರಿ ವೇಳೆ ವಿದ್ಯುತ್ ಸರಬರಾಜು ಇಲ್ಲದ ಕಾರಣ ರೈತರ ಒಂಟಿ ಮನೆಗಳಲ್ಲಿ ಕಳ್ಳತನಗಳು ಹೆಚ್ಚಾಗುತ್ತಿವೆ.
ಮ್ತತೊಂದೆಡೆ ಕಾಡುಪ್ರಾಣಿಗಳ ಕಾಟ ಎದುರಿಸುತ್ತಿದ್ದೇವೆ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಇಂದನ ಸಚಿವರಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಮನವಿ ಮಾಡಿರುವುದಾಗಿ ರೈತರು ತಿಳಿಸಿದರು.
ಸಿದ್ದಗಂಗಯ್ಯ, ಶ್ರೀನಿವಾಸ್,ಮುತ್ತುರಾಜು, ರಾಜಣ್ಣ, ಜಯಣ್ಣ, ನರಸಿಂಹಮೂರ್ತಿ, ಕೆಂಪರಂಗಯ್ಯ, ರಮೇಶ್ ನಂಜಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೆಂಗಲ್ ದನಗಳ ಜಾತ್ರೆ ನಿಷೇಧಿಸುವಲ್ಲಿ ಜಿಲ್ಲಾಡಳಿತ ವಿಫಲ
ಚನ್ನಪಟ್ಟಣ: ಕೆಂಗಲ್ ದನಗಳ ಜಾತ್ರೆಯನ್ನು ನಿಷೇಧಿಸುವಲ್ಲಿ ಜಿಲ್ಲಾಡಳಿತ ವಿಫಲಗೊಂಡಿದ್ದು, ಬುಧವಾರ ತಹಸೀಲ್ದಾರ್ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿ ಅಸಂಖ್ಯಾತ ಸಂಖ್ಯೆಯಲ್ಲಿ ರಾಸುಗಳು ಜಾತ್ರೆಯಲ್ಲಿ ಜಮಾವಣೆ ಗೊಂಡಿವೆ. ಸಂಕ್ರಾಂತಿ ಮುಗಿಯುತ್ತಿದ್ದಂತೆ ಕೆಂಗಲ್ನತ್ತ ದನಗಳೊಂದಿಗೆ ಸಾಕಷ್ಟು ಮಂದಿ ರೈತರು ಧಾವಿಸುವುದರೊಂದಿಗೆ ಜಾತ್ರೆಯಗೆ ಚಾಲನೆ ನೀಡಿದ್ದಾರೆ. ಗುರುವಾರ ಮುಂಜಾನೆ ತಾಲೂಕು ಆಡಳಿತ ಸಾಕಷ್ಟು ಪ್ರಯತ್ನ ಪಟ್ಟಿತಾದರೂ ರಾಸುಗಳ ಮಾಲೀಕರು ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ. ಗುರುವಾರ ಸಾವಿರಕ್ಕೂ ಹೆಚ್ಚಿನ ರಾಸುಗಳು ಜಮಾವಣೆ ಗೊಳ್ಳುವುದರೊಂದಿಗೆ ಕೆಂಗಲ್ ಜಾತ್ರೆಯಲ್ಲಿ ದನಗಳ ವ್ಯಾಪಾರ ವಹಿವಾಟು ಬಿರುಸುಗೊಂಡಿತು. ತಾಲೂಕು ಆಡಳಿತ ಹಿಂದಿನ ವರ್ಷಗಳಂತೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸದಿದ್ದರೂ ರೈತರು ನಿಯಮ ಬಾಹೀರವಾರವಾಗಿ ಜಾತ್ರೆ ಸೇರಿದರು.
ಆತಂಕ: ತಾಲೂಕಿನಲ್ಲಿ ಮತ್ತೆ ಕಾಲುಬಾಯಿ ಜ್ವರದ ಸಮಸ್ಯೆ ಕಾಣಿಸಿ ಕೊಂಡಿದ್ದು ಕೆಲಗ್ರಾಮಗಳಲ್ಲಿ ರಾಸುಗಳು ಸಾವಿಗೀಡಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಜಾತ್ರೆ ಆರಂಭ ಗೊಂಡಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಸರಳ ಕಾವ್ಯಗಳಿಂದ ಸಮಾಜದ ಅಂಕು ಡೊಂಕು ತಿದ್ದುವ ಕಾರ್ಯ ಸಾಧ್ಯ
ಚನ್ನಪಟ್ಟಣ: ಸರಳ ಕಾವ್ಯಗಳಿಂದ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಬಹುದಾಗಿದ್ದು ಈ ನಿಟ್ಟಿನಲ್ಲಿ ಕವಿಗಳು ಮತ್ತು ಶೋತ್ರುಗಳು ಮುಂದಾಗಬೇಕಿದೆ ಎಂದು ಸಾಹಿತಿ ಮತ್ತು ಪರಿಸರವಾದಿ ಭೂಹಳ್ಳಿಪುಟ್ಟಸ್ವಾಮಿ ಕರೆ ನೀಡಿದರು. ತಾಲೂಕು ಸಾಹಿತ್ಯಪರಿಷತ್ ಸಂಕ್ರಾಂತಿ ಹಬ್ಬದ ಹಂಗವಾಗಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಜಾನಪದ ಗೀತಗಾಯನ ಕಾರ್ಯಕ್ರಮವನ್ನು ಎಳ್ಳು-ಬೆಲ್ಲ ಹಂಚುವ ಮೂಲಕ ಉದ್ಘಾಟಿಸಿ ಮಾತನಾಡಿ, ಸಾಮಾಜದ ಓರೆ ಕೋರೆಗಳನ್ನು ತಿದ್ದುವ ಕಾರ್ಯವನ್ನು ಶತಮಾನಗಳಿಂದ ಕಾವ್ಯ ಮಾಡಿಕೊಂಡು ಬಂದಿದ್ದು ಈ ಪರಂಪರೆಯನ್ನು ಮುಂದುವರೆಸುವ ಕಾರ್ಯ ನಡೆಯಬೇಕಿದೆ ಎಂದರು. ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಆರ್.ವಿ. ಧರಣೇಶ್ಕುಮಾರ್ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಆಧುನಿಕತೆಯ ಹೊಡೆತಕ್ಕೆ ಸಿಲುಕು ವಿನಾಶದತ್ತ ದಾಪುಗಾಲು ಇಡುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ ನಮ್ಮ ಸಂಸ್ಕೃತಿ ತಿಳುವಳಿಕೆ ಕೊರತೆಯಿಂದ ವಿಕೃತಿಯತ್ತ ಪಯಣಿಸುತ್ತಿದೆ. ವೇಗದ ಬದುಕು ಸಮೃದ್ಧ ಸಂಸ್ಕಾರವನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಒತ್ತಡದ ನಡುವೆಯೂ ಕಾವ್ಯ ಪ್ರಕಾರ ಮನಸ್ಸನ್ನು ಹಗುರಗೊಳಿಸುತ್ತದೆ ಎಂದರು.
20 ರಂದು ಜಿಲ್ಲೆಯಲ್ಲಿ ಪ್ರವಾಸ
ರಾಮನಗರ: ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಲ್ಯಾಣ ಮತ್ತು ಸಂರಕ್ಷಣೆಯ ವಿವಿಧ ರಕ್ಷಾ ಕ್ರಮಗಳ ಕಾರ್ಯಕ್ಷಮತೆಯನ್ನು ಪರಿಶೋಧಿಸುವ ಹಾಗೂ ಪರಿಶೀಲಿಸುವ ಸಂಬಂಧ ಜ.20 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಾಗಿದೆ.
ಅಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ದಲಿತ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ತಿಳಿಸಿದ್ದಾರೆ.
ಪತ್ನಿ ನಡತೆ ಬಗ್ಗೆ ಅನುಮಾನ: ಕೊಲೆ
ಕ.ಪ್ರ.ವಾರ್ತೆ , ರಾಮನಗರ , ಜ.16
ಪತ್ನಿಯ ನಡತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತಿಯು ವೇಲ್ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದೆ.
ಬಿಡದಿ ಹೋಬಳಿಯ ರಾಮನಹಳ್ಳಿಯ ಸವಿತಾ(24) ಕೊಲೆಯಾದ ಮಹಿಳೆ. ಚನ್ನಪಟ್ಟಣದ ಬ್ರಹ್ಮಣೀಪುರದ ಉಮೇಶ್ ಪತ್ನಿಯನ್ನೇ ಅಮಾನುಷವಾಗಿ ಕೊಲೆಗೈದ ಆರೋಪಿ. ಸವಿತಾಳನ್ನು 2009ರಲ್ಲಿ ಉಮೇಶನಿಗೆ ಮದುವೆ ಮಾಡಿಕೊಡಲಾಗಿತ್ತು. ಗಾರ್ಮೆಂಟ್ ನೌಕರರಾಗಿದ್ದ ದಂಪತಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದಂಪತಿಗೆ 4 ವರ್ಷದ ಗಂಡು ಮಗುವಿದೆ.
ಪತಿ ಉಮೇಶನಿಗೆ ತನ್ನ ಪತ್ನಿ ಸವಿತಾ ನಡತೆಯ ಮೇಲೆ ಅನುಮಾನವಿತ್ತು. ಈ ಸಂಬಂಧ ಇಬ್ಬರ ನಡುವೆ ಪದೇ ಪದೇ ಕಲಹ ನಡೆಯುತ್ತಿತ್ತು. 3 ದಿನದ ಹಿಂದೆ ಇದೇ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದ ಕಾರಣ ಸವಿತಾಳನ್ನು ಆಕೆಯ ತವರು ಮನೆಗೆ ತಂದು ಬಿಟ್ಟಿದ್ದ ಉಮೇಶ ತನ್ನ ಸ್ವಂತ ಊರಾದ ಬ್ರಹ್ಮಣೀಪುರದಲ್ಲಿದ್ದನು. ಗುರುವಾರ ರಾಮನಹಳ್ಳಿಯ ಸವಿತಾ ಮನೆಗೆ ಸುಮಾರು 10.30ರ ವೇಳೆಗೆ ಆಗಮಿಸಿದ ಆರೋಪಿ ಉಮೇಶ ಪತ್ನಿಯನ್ನು ಪುಸಲಾಯಿಸಿ ಯಾರೂ ಇಲ್ಲದ ಮನೆಗೆ ಕರೆದೊಯ್ದು ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಚನ್ನಪಟ್ಟಣದಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತ ಸವಿತಾಳ ಕಣ್ಣುಗಳನ್ನು ಆಕೆಯ ಪೋಷಕರು ಬಿಡದಿಯ ಡಾ.ರಾಜ್ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾರು ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
ರಾಮನಗರ: 2013-14ನೇ ಸಾಲಿಗೆ ತಾಲೂಕಿನ ಪರಿಶಿಷ್ಟ ಜಾತಿ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಕಾರು ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಫೆ.7ರೊಳಗೆ ಸದರಿ ಕಚೇರಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ ದೂ: 0802-7272214 ಸಂಪರ್ಕಿಸುವುದು.
ಚಿನ್ನಾಭರಣ ಕಳವು
ನೆಲಮಂಗಲ: ತಾಲೂಕಿನ ಹೊನ್ನರಾಯನಹಳ್ಳಿಯ ಮನೆಯೊಂದರಲ್ಲಿ ಬೀಗ ಒಡೆದು ಎರಡೂವರೆ ಲಕ್ಷ ರು. ಬೆಲೆಬಾಳುವ ಸುಮಾರು 100 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮನೆ ಮಾಲೀಕರಾದ ಶಿವರುದ್ರಮ್ಮರವರು ಮನೆಗೆ ಬೀಗ ಹಾಕಿ ತಮ್ಮ ಮಗನ ಮನೆಗೆ ಹೋಗಿದ್ದಾಗ, ದುಷ್ಕರ್ಮಿಗಳು ಮನೆ ಬೀಗ ಒಡೆದು ಕಳ್ಳತನವೆಸಗಿದ್ದಾರೆ. ಗುರುವಾರ ಬೆಳಿಗ್ಗೆ ಮನೆ ಬೀಗ ಹೊಡೆದಿರುವುದನ್ನು ಅಕ್ಕಪಕ್ಕದವರು ಗಮನಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಬಗ್ಗೆ ಶಿವರುದ್ರಮ್ಮ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.