ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

24ರಂದು ಸಿದ್ಧರಾಮೇಶ್ವರ ಜಯಂತ್ಯುತ್ಸವ

Vishwanath S
Updated On : 18 Jan 2014, 2:07 am

ರಾಮನಗರ: ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಜ.24ರ ಬೆಳಗ್ಗೆ 10ಕ್ಕೆ ಕಂದಾಯ ಭವನದ ಆವರಣದಿಂದ ಅಂಬೇಡ್ಕರ್ ಭವನದವರೆಗೆ ವಿವಿಧ ಕಲಾತಂಡದೊಂದಿಗೆ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ತರಲಾಗುವುದು. ಬೆಳಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಉಪನ್ಯಾಸ ಹಾಗೂ ವಚನ ಗಾಯನ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿಶ್ವನಾಥ್ ಹೇಳಿದರು.  ಸಭೆಯಲ್ಲಿ ಜಿಲ್ಲಾ ಯೋಜನಾಧಿಕಾರಿ ವೈಶಾಲಿ, ಡಿಡಿಪಿಐ ಪ್ರಹ್ಲಾದಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತಮ್ಮ, ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಎಸ್.ಎಂ.ಚಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಘುನಾಥ್ ಮತ್ತಿತರರು ಹಾಜರಿದ್ದರು.
ಇಂದು ಬರ ಪರಿಸ್ಥಿತಿ ಕುರಿತು ಸಭೆ
ರಾಮನಗರ: ಬರಪರಿಸ್ಥಿತಿ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಭೆಯು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಜ.18ರಂದು ಬೆಳಗ್ಗೆ 11ಕ್ಕೆ ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಪ್ರಕೃತಿ ವಿಕೋಪ ನಿಧಿಯ ಕ್ರಿಯಾ ಯೋಜನೆ ರೂಪಿಸಲಾಗುವುದು.
ರಾಮನಗರಕ್ಕೆ ಡಿಕೆಶಿ ಉಸ್ತುವಾರಿ
ರಾಮನಗರ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ರಾಮನಗರ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಬದಲಾವಣೆಯೊಂದಿಗೆ ಜಿಲ್ಲೆಯಾಗಿ 7 ವರ್ಷ ತುಂಬಿರುವ ರಾಮನಗರವು ಹನ್ನೊಂದನೇ ಉಸ್ತುವಾರಿ ಸಚಿವರನ್ನು ಕಂಡಂತಾಗಿದೆ. ಬಿಜೆಪಿ ಸರ್ಕಾರದಲ್ಲಿ 7, ಕಾಂಗ್ರೆಸ್ ಸರ್ಕಾರದಲ್ಲೇ ಮೂರು ಬಾರಿ ಈ ಹುದ್ದೆಗೆ ಬದಲಾವಣೆ ನಡೆದಿದೆ.
ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
ರಾಮನಗರ: ಕನಕಪುರ ತಾಲೂಕಿನ ಪರಿಶಿಷ್ಟ ಜಾತಿ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಲಘು ವಾಹನ(ಕಾರು) ಚಾಲನಾ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ನಮೂನೆಗಳನ್ನು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಫೆ.7ರೊಳಗೆ ಸದರಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ, ದೂರವಾಣಿ- 0802-7522593 ಸಂಪರ್ಕಿಸಬಹುದು.
ಪಡಿತರ ಚೀಟಿ ನವೀಕರಣಕ್ಕೆ ಸೂಚನೆ
ರಾಮನಗರ: 2010ಕ್ಕಿಂತ ಮೊದಲು ವಿತರಿಸಿದ ಪಡಿತರ ಚೀಟಿಗಳ ನವೀಕರಣ ಕಾರ್ಯವನ್ನು ರಾಜ್ಯಾದ್ಯಂತ ಕೈಗೊಂಡಿದ್ದು, ಈ ವರೆಗೂ ಭಾವಚಿತ್ರ ಹಾಗೂ ಬೆರಳಚ್ಚು ನೀಡದೇ ಇರುವ ಪಡಿತರ ಚೀಟಿದಾರರು ಫೆಬ್ರವರಿ ಒಳಗೆ ನೀಡಬೇಕೆಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚಿಸಿದೆ. 2014ರ ಫೆಬ್ರವರಿ ತಿಂಗಳಿನಿಂದ ಪಡಿತರ ಪಡೆಯಲು ಅರ್ಹತೆ ಪಡೆಯಬೇಕಾದರೆ ಕಡ್ಡಾಯವಾಗಿ ತಮ್ಮ ಕುಟುಂಬದ ಸದಸ್ಯರ ಫೋಟೋ ಹಾಗೂ ಬೆರಳಚ್ಚನ್ನು ಸಂಬಂಧಪಟ್ಟ ಸೇವಾ ಕೇಂದ್ರಗಳಲ್ಲಿ ಫೆ.15ರೊಳಗಾಗಿ ನೀಡುವುದು ಕಡ್ಡಾಯವಾಗಿದೆ. ಈ ಹಿಂದೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ. ಕಾರ್ಡುದಾರರು ಕೂಡಲೇ ಸಂಬಂಧಪಟ್ಟ ಸೇವಾ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆನ್‌ಲೈನ್ ಮೂಲಕ ನವೀಕರಣ ಅರ್ಜಿಯನ್ನು ನೋಂದಾಯಿಸಿ, ಅಗತ್ಯ ದಾಖಲೆಗಳನ್ನು ನೀಡಿ ತಮ್ಮ ಕುಟುಂಬದ ಸದಸ್ಯರ ಫೋಟೋ ಹಾಗೂ ಬೆರಳಚ್ಚು ನೀಡಬೇಕೆಂದು ಸೂಚಿಸಲಾಗಿದೆ.
ಉದ್ಯೋಗ ಪತ್ರ ವಿತರಣೆ
ರಾಮನಗರ: ಜಿಲ್ಲಾಡಳಿತ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆಯಿಂದ ಕೌಶಲ್ಯ ಮತ್ತು ಉದ್ಯೋಗ ಮೇಳದ ಉದ್ಯೋಗ ಪತ್ರ ವಿತರಣಾ ಕಾರ್ಯಕ್ರಮ ಜ.18ರಂದು ನಗರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಸಂಸದ ಡಿ.ಕೆ.ಸುರೇಶ್ ಸಹಿತ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
70 ಎಕರೆ ಭೂಮಿ ಹಿಂತಿರುಗಿಸಲು ರೈತರಿಗೆ ಹೈ ಕೋರ್ಟ್ ಆದೇಶ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಬಡಾವಣೆ ನಿರ್ಮಾಣಕ್ಕೆ ನೀಡಿದ್ದ 70 ಎಕರೆ ಭೂಮಿಯನ್ನು ರೈತರಿಗೆ ಹಿಂತಿರುಗಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ರಾಜ್ಯ ಸರ್ಕಾರದ ಅನುಮತಿಯಿಲ್ಲದೇ ಸೂರ್ಯಸಿಟಿ ಬಡಾವಣೆ ನಿರ್ಮಾಣಕ್ಕೆ ಕೆಐಎಡಿಬಿ ಹಾಗೂ ಕೆಎಚ್‌ಬಿಯು 70 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಟ್ಟಿತ್ತು. ಆದರೆ ಕೆಐಎಡಿಬಿ ಮತ್ತು ಕೆಎಚ್‌ಬಿ ಕ್ರಮವನ್ನು ವಿರೋಧಿಸಿ ಸ್ಥಳೀಯ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಭೂಮಿ ಅಭಿವೃದ್ಧಿ ಹಾಗೂ ಬಡಾವಣೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ. ಅನುಮೋದನೆ ಪಡೆಯದೇ ಕೃಷಿ ಭೂಮಿಯನ್ನು ಬಡಾವಣೆ ನಿರ್ಮಾಣಕ್ಕೆ ನೀಡಿರುವ ಇವೆರಡು ಸಂಸ್ಥೆಗಳ ಕ್ರಮ ಕಾನೂನು ಬಾಹಿರ. ಕೋರ್ಟ್‌ನಲ್ಲಿರುವ ದಾಖಲೆಗಳ ಪ್ರಕಾರ ಈ ಯೋಜನೆಗೆ ರಾಜ್ಯ ಸರ್ಕಾರ ಅನುಮತಿಯನ್ನೇ ನೀಡಿಲ್ಲ. ಆದ್ದರಿಂದ ಭೂಮಿ ಅಭಿವೃದ್ಧಿ ಪಡಿಸಿದ್ದರೂ ಎಲ್ಲ 70 ಎಕರೆಯನ್ನು ರೈತರಿಗೆ ಅಥವಾ ಮೂಲ ಮಾಲೀಕರಿಗೆ  ಹಿಂತಿರುಗಿಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ. ಆನೇಕಲ್ ತಾಲೂಕಿನ ಆನೆಗೊಂಡನಹಳ್ಳಿ, ಅಲ್ಲಾಲಸಂದ್ರ, ಯಡವನಹಳ್ಳಿ ಹಾಗೂ ಜಿಗಳ ಗ್ರಾಮದಲ್ಲಿ ಕಳೆದ 2008ರಲ್ಲಿ 70 ಎಕರೆ ಭೂಮಿಯನ್ನು ಕೆಐಎಡಿಬಿ ಹಾಗೂ ಕೆಎಚ್‌ಬಿ ಸ್ವಾಧೀನಪಡಿಸಿಕೊಂಡಿತ್ತು. ಆ ಬಳಿಕ ಕೋಟ್ಯಾಂತರ ಹಣ ವ್ಯಯಿಸಿ ನಿವೇಶನ ಅಭಿವೃದ್ಧಿ ಕಾರ್ಯ ಪ್ರಾರಂಭಿಸಲಾಗಿತ್ತು. ಆದರೆ 2011ರಲ್ಲಿ ಜಮೀನು ಕಳೆದುಕೊಂಡ ರೈತರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಕೌಶಲ, ಉದ್ಯೋಗ ಮೇಳ
ಕ.ಪ್ರ.ವಾರ್ತೆ  ರಾಮನಗರ  ಜ.16
ಜಿಲ್ಲಾಡಳಿತ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ಜ.18ರ ಬೆಳಗ್ಗೆ 9ಕ್ಕೆ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೌಶಲ ಮತ್ತು ಉದ್ಯೋಗ ಮೇಳ ನಡೆಯಲಿದೆ.
ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳು, ವ್ಯಕ್ತಿ ಪರಿಚಯ ಪತ್ರಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕಿದೆ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ (ಉತ್ತೀರ್ಣ ಹಾಗೂ ಅನುತೀರ್ಣ), ಪಿಯುಸಿ, ಐಟಿಐ, ಜೆಒಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಯೊಂದಿಗೆ ತೇರ್ಗಡೆಯಾಗಿದ್ದು, 18 ವರ್ಷ ಮೇಲ್ಪಟ್ಟವರು ಭಾಗವಹಿಸಿ ಹೆಸರು ನೋಂದಾಯಿಸಿಕೊಂಡು ನೇರಸಂದರ್ಶನದಲ್ಲಿ ಭಾಗವಹಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement