ಆಟೋ ನಿಲ್ದಾಣಕ್ಕೆ ಕೊನೆಗೂ ಪರ್ಯಾಯ ವ್ಯವಸ್ಥೆ
ದೊಡ್ಡಬಳ್ಳಾಪುರ: ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿ ಹೆಚ್ಚಿರುವ ವಾಹನದಟ್ಟಣೆ ಮತ್ತು ಕಿಷ್ಕಿಂದ ರಸ್ತೆಯಿಂದಾಗಿ ಉಂಟಾಗುತ್ತಿರುವ ಅವ್ಯವಸ್ಥೆ ಸರಿಪರಿಸಿ ಆಟೋ ನಿಲ್ದಾಣಕ್ಕೆ ಪರ್ಯಾಯ ವ್ಯವಸ್ಥೆ ಸೂಚಿಸುವಂತೆ ಕನ್ನಡಪ್ರಭ ಕಳೆದ ಡಿ.14ರಂದು ಪ್ರಕಟಿಸಿದ್ದ ವರದಿ ಫಲಕೊಟ್ಟಿದೆ.
ಪರಿಣಾಮವಾಗಿ ಅವ್ಯವಸ್ಥೆ ನಿವಾರಿಸುವ ನಿಟ್ಟಿನಲ್ಲಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿದ್ದ ಕೆಇಬಿ ವಸತಿ ಸಮುಚ್ಚಯದ ಕಾಂಪೌಂಡ್ ಅನ್ನು ಗುರುವಾರ ಸಂಜೆ ತೆರವು ಮಾಡಲಾಗಿದೆ. ಅಲ್ಲದೆ ಈ ಸ್ಥಳವನ್ನು ಆಟೋ ನಿಲ್ದಾಣವಾಗಿ ಬಳಸಿಕೊಳ್ಳುವಂತೆ ಶಾಸಕ ಟಿ.ವೆಂಕಟರಮಣಯ್ಯ ಸೂಚಿಸಿದ್ದಾರೆ.
ಶಾಸಕರ ನೇತೃತ್ವದಲ್ಲಿ ಸಂಜೆ 6.30ರ ನಂತರ ಈ ಕಾರ್ಯಾಚರಣೆ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ನಗರ ದಿನೇದಿನೇ ಬೆಳೆಯುತ್ತಿದೆ. ನಿಲ್ದಾಣಕ್ಕೆ ಬರುವ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು, ನೂರಾರು ಆಟೋಗಳು, ದ್ವಿಚಕ್ರವಾಹನಗಳಿಂದ ತುಂಬಿ ಓಡಾಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ವಸತಿ ಸಮುಚ್ಚಯದ ತಡೆಗೋಡೆಯನ್ನು ತೆರವುಗೊಳಿಸಲಾಗಿದೆ. ಈ ಸ್ಥಳವನ್ನು ಸದ್ಯಕ್ಕೆ ಆಟೋ ನಿಲಾದಣವಾಗಿ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಕುರಿತಂತೆ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿದ್ದು, ಈ ಜಾಗವನ್ನು ಆಟೋ ನಿಲ್ದಾಣಕ್ಕೆ ಬಿಡುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳೂ ಹಲವು ಬಾರಿ ಎಚ್ಚರಿಸಿದ್ದವು. ಸಮುಚ್ಚಯಕ್ಕೆ ಪರ್ಯಾಯ ಜಾಗ ಕೊಡುವ ಭರವಸೆ ನೀಡಿದ್ದೇವೆ ಎಂದು ವಿವರಿಸಿದರು.
ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ, ನಗರಸಭೆ ಆಯುಕ್ತ ಬಿಳಿಕೆಂಚಪ್ಪ, ಬೆಸ್ಕಾಂ ಅಧಿಕಾರಿ ಗಂಗರಾಜು, ನಗರಸಭಾ ಸದಸ್ಯ ಲೋಕೇಶ್‌ಬಾಬು, ಶಿವಕುಮಾರ್, ಪಿಎಸೈ ಗಿರೀಶ್, ಕೃಷ್ಣಕುಮಾರ್ ಮತ್ತಿತರರು ಇದ್ದರು.