ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಡಿಸಿಗೆ ಮನವಿ

Vishwanath S
Updated On : 18 Jan 2014, 2:06 am

ಎಲ್ಲ ಇಲಾಖೆಗಳ ಜಿಲ್ಲಾ ಕಚೇರಿಗಳು ದೇವನಹಳ್ಳಿಗೆ ವರ್ಗಾವಣೆಯಾಗಲಿ
ದೇವನಹಳ್ಳಿ: ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದಲ್ಲದೆ ಉಪವಿಭಾಗಾಧಿಕಾರಿಗಳ ಕಚೇರಿ ಜೊತೆಯಲ್ಲಿ ಎಲ್ಲ ಇಲಾಖೆಗಳ ಜಿಲ್ಲಾ ಕಚೇರಿಗಳು ದೇವನಹಳ್ಳಿಗೆ ವರ್ಗಾವಣೆಯಾಗಬೇಕೆಂಬ ಮನವಿಯನ್ನು ಜಿಲ್ಲಾ ಹೋರಾಟ ಸಮಿತಿಯ ಮುಖಂಡರು ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶಂಕರ್‌ಗೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಸರ್ಕಾರದ ಆದೇಶದಂತೆ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳಿಗೆ ಸಂಬಂಧಪಟ್ಟಂತೆ ಬೆಂಗಳೂರಿನಿಂದ ಇರುವ ದೂರ, ಜೊತೆಗೆ ಇತರ ತಾಲೂಕುಗಳಿಗೆ ಇರುವ ಸಂಪರ್ಕ ರಸ್ತೆಗಳ ದೂರ, ಪ್ರಾದೇಶಿಕ ವ್ಯವಹಾರಗಳು, ಜಿಲ್ಲಾ ಕೋರ್ಟ್‌ಗಳ ವ್ಯವಹಾರ, ಮುಂದಿನ ದಿನಗಳಲ್ಲಿ ಎರಡು ಪಟ್ಟಣಗಳ ಬೆಳವಣಿಗೆಗಳ ಬಗ್ಗೆ ವಾಸ್ತವ ವರದಿಯನ್ನು ನೀಡಲಾಗಿದೆ. ಅಲ್ಲದೆ ಉಪವಿಭಾಗಾಧಿಕಾರಿಗಳ ಕಚೇರಿ ಬಗ್ಗೆ ದೊಡ್ಡಬಳ್ಳಾಪುರದಲ್ಲಿ ಸ್ಥಳ ಪರಿಶೀಲನೆ ಸಹ ಮಾಡಲಾಗಿದೆ. ಒಂದು ವೇಳೆ ಸರ್ಕಾರದ ಉಪವಿಭಾಗಾಧಿಕಾರಿಗಳ ಕಚೇರಿ ದೇವನಹಳ್ಳಿಯಲ್ಲಿಯೇ ಆಗಬೇಕು ಎಂದಾದರೆ ಈಗಿರುವ ಮಿನಿ ವಿಧಾನಸೌಧದ ಮೂರನೆಯ ಮಹಡಿಯೇ ಸಾಕಾಗುತ್ತದೆ ಎಂದು ತಿಳಿಸಿದರು.
ಇಂತಹ ತಾಲೂಕನ್ನೇ ಜಿಲ್ಲಾ ಕೇಂದ್ರವನ್ನಾಗಿ ಮಾಡಿರಿ ಎಂದು ನಾವು ಸರ್ಕಾರಕ್ಕೆ ಹೇಳುವ ಹಾಗಿಲ್ಲ. ಕೇವಲ ವರದಿಯನ್ನು ಮಾತ್ರ ಕಳುಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರಲ್ಲದೆ ಬೇಕಾದರೆ ನಾಲ್ಕು ತಾಲೂಕುಗಳ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಗೆ ಸಭೆ ಸೇರಿ ಸರ್ಕಾರಕ್ಕೆ ಮನವಿ ಮಾಡಿರಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಚಾಲಕ ಬಿ.ಕೆ.ಶಿವಪ್ಪ, ಮಾಜಿ ಪುರಸಭಾಧ್ಯಕ್ಷ ಎಸ್.ಲಕ್ಷ್ಮೀನಾರಾಯಣ್ ಹಾಗೂ ದಲಿತ ಸಂಘರ್ಷ ಸಮಿತಿಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಉಪವಿಭಾಗಾಧಿಕಾರಗಳ ಕಚೇರಿ ದೇವನಹಳ್ಳಿಯಲ್ಲಿಯೇ ಆಗಬೇಕು ಎಂದು ಒತ್ತಾಯಪೂರ್ವಕವಾಗಿ ಜಿಲ್ಲಾಧಿಕಾರಿಗಳಲ್ಲಿ ಕೋರಿದರಲ್ಲದೆ ಸೋಮವಾರದಿಂದ ಮಿನಿ ವಿಧಾನಸೌಧದ ಬಳಿ ನಿರಂತರವಾಗಿ ಧರಣಿ ಸತ್ಯಾಗ್ರಹ ಆಯೋಜಿಸಿರುವುದಾಗಿ ತಿಳಿಸಿದರು.
ಜಿಲ್ಲಾ ಹೋರಾಟ ಸಮಿತಿಯ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್.ರವಿಕುಮಾರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ರೀನಿವಾಸಗೌಡ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಎ.ಶಿವರಾಮಯ್ಯ, ಡಾ.ಮೂರ್ತಿ, ಮಹಿಳಾ ಸಂಘಟನೆಯ ಸೂರ್ಯಕಲಾ ಮೂರ್ತಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೀರಭದ್ರಪ್ಪ, ಸಾವುಕನಹಳ್ಳಿ ಮುನಿರಾಜು, ರೈತ ಸಂಘದ ಗೋಪಾಲಸ್ವಾಮಿ, ಜಾಲಿಗೆ ಗ್ರಾಪಂ ಉಫಾಧ್ಯಕ್ಷ ಆನಂದಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement