ಯೋಜನೆ ಕುರಿತ ಅಜ್ಞಾನ ಅಪಾಯಕಾರಿ: ಶಾಸಕ
ದೊಡ್ಡಬಳ್ಳಾಪುರ: ಇಂದಿಗೂ ಗ್ರಾಮಾಂತರ ಪ್ರದೇಶದ ಜನತೆ ಸರ್ಕಾರದ ಹಲವು ಯೋಜನೆಗಳ ಕುರಿತು ಅಜ್ಞಾನ ಎದುರಿಸುತ್ತಿದ್ದಾರೆ. ಹೀಗಾಗಿ ಯೋಜನೆಗಳ ಸಮರ್ಪಕ ಬಳಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದು ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು.
ತಾಲೂಕಿನ ಹಾಡೋನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ ಅರ್ಹ ಫಲಾನುಭವಿಗಳಿಗೆ ನೇರ ಸಾಲ ಯೋಜನೆಯ ಚೆಕ್ಗಳನ್ನು ವಿತರಿಸಿ ಅವರು ಮಾತನಾಡಿದರು.
ಯುವಸಮುದಾಯ ಉತ್ತಮ ಶೈಕ್ಷಣಿಕ ಜ್ಞಾನ ಹೊಂದಿದಾಗ ಮಾತ್ರ ಈ ಬಗೆಯ ಯೋಜನೆಗಳ ನೇರ ಲಾಭ ಪಡೆಯಲು ಸಾಧ್ಯ. ಆಡಳಿತ ವ್ಯವಸ್ಥೆಯ ಸುಧಾರಣೆ ಮತ್ತು ಅಭಿವೃದ್ಧಿ ಚಿಂತನೆಗೆ ಭ್ರಷ್ಟಾಚಾರ ನಿರ್ಮೂಲನೆ ಅನಿವಾರ್ಯವಾಗಿದೆ. ಶಿಕ್ಷಣದಿಂದ ಭ್ರಷ್ಟಾಚಾರ ನಿಗ್ರಹ ಸಾಧ್ಯ ಎಂದರು.
ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಎಚ್.ಅಪ್ಪಯ್ಯಣ್ಣ ಮಾತನಾಡಿದರು. ಹಾಡೋನಹಳ್ಳಿ ಗ್ರಾಪಂ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಗ್ರಾಪಂ ಸದಸ್ಯ ಎಚ್.ಎ.ನಾಗರಾಜ್, ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಪ್ರಧಾನ ಕಾರ್ಯದರ್ಶಿ ಮುನಿಕೃಷ್ಣಪ್ಪ, ಅಧಿಕಾರಿ ಎಚ್.ಪ್ರಕಾಶ್, ಮೆಳೇಕೋಟೆ ಗ್ರಾಪಂ ಮಾಜಿ ಅಧ್ಯಕ್ಷ ಚಿದಾನಂದ್, ರೈತ ಸಂಘದ ಮುಖಂಡ ವಾಸು, ಸೇಂಟ್ ಥಾಮಸ್ ಕಾಲೇಜಿನ ಡೆವಿಡ್ ಲಾರೆನ್ಸ್ ಇದ್ದರು.
ಹಳ್ಳಿ ಜಾನಪದ ತಂಡದ ಕಲಾವಿದರಿಂದ ಜಾನಪದ ಗೀತ ಗಾಯನ, ನೃತ್ಯ ಕಾರ್ಯಕ್ರಮಗಳು ನಡೆದವು.