ರಸ್ತೆ ನಿರ್ಮಿಸಲು ಕೋಟಿ ರು. ಬಿಡುಗಡೆ: ಎಚ್ಡಿಕೆ
ಕನ್ನಡಪ್ರಭ ವಾರ್ತೆ, ಕನಕಪುರ, ಜ.17
ಸುಂದರ ಗಿರಿಧಾಮದ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಬಿಳೀಕಲ್ಲುಬೆಟ್ಟಕ್ಕೆ ಡಾಂಬರು ರಸ್ತೆ ನಿರ್ಮಿಸಲು
ಒಂದುಕೋಟಿ ರು.ಗಳು ಬಿಡುಗಡೆಯಾಗಿದೆ. ವರ್ಷಕ್ಕೊಮ್ಮೆ ಮಾತ್ರ ಬರುತ್ತಿದ್ದ ಭಕ್ತಾದಿಗಳೊಂದಿಗೆ ಈ
ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿಸಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಶಾಸಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅವರು ಕನಕಪುರ ತಾಲೂಕಿನ ಪ್ರಸಿದ್ಧ ರಂಗನಾಥಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಮಾಜಿ ಶಾಸಕ ಕೆ.ರಾಜು, ಜೆಡಿಎಸ್ ಮುಖಂಡರುಗಳಾದ ಸಿದ್ಧಮರಿಗೌಡ, ಬಿ.ನಾಗರಾಜು,ಬಿ.ಎಸ್.ಗೌಡ, ಭುಜಂಗಯ್ಯ, ರಾಮಕೃಷ್ಣ, ಕೊಳ್ಳಿಗನಹಳ್ಳಿ ರಾಮು ಪಾಲ್ಗೊಂಡಿದ್ದರು.
ತಾಲೂಕಿನಲ್ಲಿ ಹಣ ಅಧಿಕಾರಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಗೆಡವಲಾಗುತ್ತಿದೆ ಎಂದು ಪರೋಕ್ಷವಾಗಿ ಡಿಕೆಎಸ್ ಸಹೋದರರನ್ನು ಟೀಕಿಸಿದ ಕುಮಾರಸ್ವಾಮಿ ತಾಲೂಕಿನ ಹಾರೋಹಳ್ಳಿ ಮರಳವಾಡಿ ಹೋಬಳಿಗಳು ತಮ್ಮ ಕ್ಷೇತ್ರಕ್ಕೆ ಸೇರಿದ್ದು ಇವುಗಳ ಅಭಿವೃದ್ಧಿಗೆ ಹತ್ತಾರುಕೋಟಿ ಹಣವನ್ನು ಸಂಸದ ಹಾಗೂ ಶಾಸಕರ ಅನುದಾನದಿಂದ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಪ್ರವಾಸಿಗಳು ಉಳಿದುಕೊಳ್ಳಲು ಅನುವಾಗುವಂತೆ ಬಿಳೀಕಲ್ಲು ಬೆಟ್ಟದಲ್ಲಿ ವಸತಿಗೃಹಗಳು ಹಾಗೂ ಇತರೇ ವ್ಯವಸ್ಥೆಗಳನ್ನು ಕಲ್ಪಿಸಲು ಆದ್ಯತೆ ನೀಡುವುದರೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದರು.