ಶೌಚಾಲಯ ನಿರ್ಮಾಣ ಕಡ್ಡಾಯವಾಗಲಿ
ಮಾಗಡಿ: ಶೌಚಾಲಯ ನಿರ್ಮಾಣ ಗ್ರಾಮಾಂದೋಲನವಾಗಬೇಕು. ಎಲ್ಲ ಗ್ರಾಮಗಳು ನಿರ್ಮಲ ಗ್ರಾಮಗಳಾಗಿ ಪರಿವರ್ತನೆಗೊಳ್ಳಲು ಕಡ್ಡಾಯ ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಗ್ರಾಮೀಣ ಜನತೆ ಸಹಕರಿಸಬೇಕು ಎಂದು ತಾಪಂ ಅಧ್ಯಕ್ಷ ಜಿ.ಕೃಷ್ಣ ಕರೆ ನೀಡಿದರು.
ಅವರು ತಾಲೂಕಿನ ಆಗಲಕೋಟೆಯಲ್ಲಿ ಸಾತನೂರು ಗ್ರಾಪಂ ಏರ್ಪಡಿಸಿದ್ದ ಅರ್ಹ ಪಲಾನುಭವಿಗಳಿಗೆ ಕಾರ್ಯಾದೇಶ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬವೂ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಸಹಾಯಧನ ನೀಡುತ್ತಿದೆ. ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ನಿರ್ಮಲ ಗ್ರಾಮ ನಿರ್ಮಾಣಕ್ಕೆ ಸಹಕರಿಸಬೇಕು. ತೆಂಗಿನಗರಿ ಗುಡಿಸಿಲಿನಲ್ಲಿ ರಾಸುಗಳನ್ನು ಕಟ್ಟಿಕೊಳ್ಳುತ್ತಿದ್ದು, ಸ್ವಚ್ಛತೆ ಕಾಪಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ರೈತರು ಜಾನುವಾರು ಸಾಕುತ್ತಿದ್ದಾರೆ. ಇದರಿಂದಾಗಿ ಇತ್ತೀಚೆಗೆ ತಾಲೂಕಿನಲ್ಲಿ ಕಾಲುಬಾಯಿ ಜ್ವರಕ್ಕೆ ನೂರಾರು ರಾಸುಗಳು ಮೃತಪಟ್ಟಿವೆ. ಹೈನುಗಾರಿಕೆಯನ್ನೇ ನಂಬಿ ಜೀವಿಸುತ್ತಿದ್ದ ರೈತರು ಕಂಗಾಲಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಬಂದಿದ್ದು, ವೈಯಕ್ತಿಕ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು 35 ಸಾವಿರ ಧನಸಹಾಯ ನೀಡುತ್ತಿದೆ. ಇದೇ ರೀತಿ ರೇಷ್ಮೆ ಚಾಕಿ ಮನೆ ನಿರ್ಮಾಣ, ರೇಷ್ಮೆ ತೋಟವನ್ನು ಹದ ಮಾಡಿಕೊಳ್ಳಲು ಟ್ರಂಚಿಂಗ್, ಮಲ್ಚಿಂಗ್‌ಗೂ ಸಹಾಯಧನ ನೀಡುತ್ತಿದೆ. ಸರ್ಕಾರದ ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ಯೋಜನೆಯ ಉದ್ದೇಶ, ಮಹತ್ವವನ್ನು ಕುರಿತು ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾತನೂರು ಗ್ರಾಪಂ ಅಧ್ಯಕ್ಷ ಎಸ್.ವಿ. ಮಂಜುನಾಥ್, ರೈತರು ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಸಾತನೂರು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಟಿ.ಮಂಜುನಾಥ್ ಮಾತನಾಡಿದರು. ಸದಸ್ಯ ರಾಮಣ್ಣ, ಮರಿಚನ್ನಯ್ಯ, ಮಲ್ಲಯ್ಯ, ಎಂಜಿನಿಯರ್ ಚಂದ್ರಶೇಖರ್, ಕಾರ್ಯದರ್ಶಿ ವಿಜಯಕುಮಾರ್ ಇತರರು ಇದ್ದರು.