ಸಂಘಟನೆಯಿಂದ ಪ್ರಗತಿ:ರೇಣುಕಾನಂದ ಸ್ವಾಮೀಜಿ
ದೊಡ್ಡಬಳ್ಳಾಪುರ: ಸಂಘಟನೆಯಿಂದ ಮಾತ್ರ ಪ್ರಗತಿ ಸಾಧ್ಯ. ಸಮಾಜದಲ್ಲಿ ಹಿಂದುಳಿದ ಸಮುದಾಯಗಳು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಬೇಕಿದೆ ಎಂದು ಈಡಿಗ ಮಹಾ ಸಂಸ್ಥಾನದ ಕುಲಗುರು ಆರ್ಯ ಶ್ರೀರೇಣುಕಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಮಾಂಗಲ್ಯ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ನಡೆದ ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಎಲ್ಲ ಸಮುದಾಯಗಳ ಜೊತೆ ಜೊತೆಗೆ ಗುರುತಿಸಿಕೊಳ್ಳುತ್ತಲೇ ರಾಜಕೀಯ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈಡಿಗ ಸಮುದಾಯಕ್ಕೆ ಸೂಕ್ತ ಪ್ರಾಶಸ್ತ್ಯ ಮತ್ತು ಸ್ಥಾನಮಾನಗಳು ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ. ಹೀಗಾಗಿ ಹೋರಾಟ ಅಸ್ತಿತ್ವದ ಹಿತದೃಷ್ಠಿಯಿಂದ ಅನಿವಾರ್ಯ ಎಂದರು.
ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಮಾತನಾಡಿ, ಸಮುದಾಯದ ಸರ್ವಾಂಗೀಣ ಪ್ರಗತಿಗೆ ಯುವ ಸಂಘಟನೆಗಳು ಹೆಚ್ಚಿನ ಶ್ರಮ ವಹಿಸಬೇಕು. ಸಾಮಾಜಿಕ ಜಾಗೃತಿಯ ಸಂಘಟನೆ ಬಹು ಮುಖ್ಯವಾಗಿದ್ದು, ಅಸ್ತಿತ್ವದ ಪ್ರತಿಪಾದನೆಗೆ ಇದು ಸಹಕಾರಿಯಾಗುತ್ತದೆ. ಗಣನೀಯ ಸಂಖ್ಯೆಯಲ್ಲಿರುವ ಸಮುದಾಯ ಇಂದಿಗೂ ಹಿಂದುಳಿದಿದೆ. ಪ್ರಬುದ್ಧ ಸಂಘಟನೆಯ ಕೊರತೆ ಇದಕ್ಕೆ ಕಾರಣ ಎಂದರು.
ಸಂಘದ ಗೌ.ಅಧ್ಯಕ್ಷ ಸುನೀಲ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಎನ್.ಅರವಿಂದ್, ಸಂಘದ ಅಧ್ಯಕ್ಷ ಕೆ.ಜಿ.ಶ್ರೀನಿವಾಸಮೂರ್ತಿ, ಚಿತ್ರನಟ ಬಾಲರಾಜ್, ಖಾಸಗಿ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಜೆ.ನಾಗೇಂದ್ರಸ್ವಾಮಿ, ಎಸ್ಡಿಯುಇಟಿ ಟ್ರಸ್ಟಿ ಜೆ.ರಾಜೇಂದ್ರ, ಸಂಘದ ಖಜಾಂಚಿ ಕೆ.ಜಿ.ಹನುಮಂತರಾಜು, ಮುಖಂಡರಾದ ಉದಯ್, ಟಿ.ನರಸಿಂಹಸ್ವಾಮಿ, ದರ್ಗಾಜೋಗಿಹಳ್ಳಿ ಗ್ರಾಪಂ ಅಧ್ಯಕ್ಷ ಗಂಗಮ್ಮ, ತ್ಯಾಮಗೊಂಡ್ಲು ತಿಮ್ಮಯ್ಯ, ಮಂಚೇನಹಳ್ಳಿ ರಘುಪತಿ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರೇಣುಕಾನಂದ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು.