ಅನುದಾನಿತ ಖಾಸಗಿ ಶಾಲೆಗಳಲ್ಲಿ ಪೌಷ್ಟಿಕ ಆಹಾರ ನೀಡುತ್ತಿಲ್ಲ
ಮಾಗಡಿ: ಅನುದಾನಿತ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡುತ್ತಿಲ್ಲ ಎಂದು ಪೋಷಕರಿಂದ ಹಲವಾರು ದೂರು ಬಂದಿದ್ದು, ಸಂಬಂಧಪಟ್ಟ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾ.ಪಂ. ಅಧ್ಯಕ್ಷ ಜಿ. ಕೃಷ್ಣ, ಬಿಇಓ ರಂಗಸ್ವಾಮಿ ಅವರಿಗೆ ಸೂಚಿಸಿದರು.
ಅವರು ತಾಲೂಕು ಪಂಚಾಯ್ತಿಯಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅನುದಾನಿತ ಖಾಸಗಿ ಶಾಲಾ ಶಿಕ್ಷಕರುಗಳೇ ಬಿಸಿಯೂಟಕ್ಕೆ ನೀಡಿದ್ದ ಎಣ್ಣೆ, ಬೇಳೆ ಇತರೆ ವಸ್ತುಗಳನ್ನು ಕದ್ದು ಮನೆಗೆ ಕೊಂಡೊಯ್ಯುತ್ತಿದ್ದಾರೆ ಎಂದು ವ್ಯಾಪಕ ಆರೋಪಗಳು ಕೇಳಿಬರುತ್ತಿದೆ.ಇಷ್ಟೆಲ್ಲ ತಪ್ಪುಗಳು ನಡೆಯುತ್ತಿದ್ದರೂ ಸಹ ಬಿಇಓ ಗಮನಕ್ಕೆ ಏಕೆ ಬಂದಿಲ್ಲ, ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಏಕೆ ಎಂದು ಕೃಷ್ಣ ಪ್ರಶ್ನಿಸಿದರಲ್ಲದೆ, ಆಂತಹ ಶಾಲೆಗಳಿಗೆ ಬಿಇಓ ಕೂಡಲೆ ಭೇಟಿ ನೀಡಿ ಪರಿಶೀಲಿಸಬೇಕು. ಕಳ್ಳತನದ ತಪ್ಪುಗಳು ನಡೆದಿರುವುದು ಕಂಡು ಬಂದರೆ ಕೂಡಲೆ ಅಂತಹವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ತಾಲೂಕಿನಲ್ಲಿ ಕ್ಷೀರಭಾಗ್ಯ ಉತ್ತಮವಾಗಿ ನಡೆಯುತ್ತಿದೆ. ಯಾವುದೇ ಸಮಸ್ಯೆ ಇಲ್ಲ, ಎಂದು ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ ಸಭೆಯಲ್ಲಿ ವಿವರಿಸಿದರು. ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳಿಗೆ ಆದಷ್ಟು ಬೇಗ ವೇತನ ಬಿಡುಗಡೆ ಮಾಡುವಂತೆ ಇಓಗೆ ಕೃಷ್ಣ ಸೂಚಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಗತಿ ಪ್ರಶ್ನಿಸಿದ ಕೃಷ್ಣ, ಸ್ವಯಂ ಉದ್ಯೋಗ ಕೈಗೊಳ್ಳಲು ಸುಮಾರು 2500 ಅರ್ಜಿ ಸ್ವೀಕರವಾಗಿದೆ. ಇದರಲ್ಲಿ ಕೇವಲ 26 ಜನಕ್ಕೆ ಸಹಾಯಧನ ನೀಡಲು ಅವಕಾಶವಿದೆ. ಗಂಗ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಸಹ 350 ಅರ್ಜಿಗಳು ಬಂದಿದೆ. ಕೇವಲ 55 ಪಲಾನುಭವಿಗಳಿಗೆ ಅವಕಾಶವಿದ್ದು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಬಸವರಾಜು ತಿಳಿಸಿದರು.
ನೀರು ಪೂರೈಸಿ: ಆಯುರ್ವೇದ ಆಸ್ಪತ್ರೆಗೆ ಅಗತ್ಯ ನೀರು ಪೂರೈಕೆಗೆ ಕೊಳವೆ ಬಾವಿ ಕೊರೆಸಲು ಕಳೆದ 6 ತಿಂಗಳ ಹಿಂದೆಯೇ ಪತ್ರ ಬರೆದಿದ್ದರೂ ಸಂಬಂಧ ಪಟ್ಟ ಪುರಸಭೆ ಇಲ್ಲಿಯವರೆವಿಗೂ ಅಗತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವ ಬಗ್ಗೆ ಹಾಗೂ ಕೂಡಲೆ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸುವಂತೆ ಕೂಡಲೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಾ.ಪಂ. ಅಧ್ಯಕ್ಷ ಜಿ.ಕೃಷ್ಣ ತಿಳಿಸಿದರು.
ಜಲಾನಯನ, ಪಶು ಇಲಾಖೆ, ತೋಟಗಾರಿಕೆ, ಕೃಷಿ, ರೇಷ್ಮೆ, ಬೆಸ್ಕಾಂ, ಅರಣ್ಯ, ಸಮಾಜ ಕಲ್ಯಾಣ ಇಲಾಖೆ, ಮೀನುಗಾರಿಕೆ, ಕೈಗಾರಿಕೆ, ಸಾರ್ವಜನಿಕ ಆಸ್ಪತ್ರೆ ಪ್ರಗತಿ ಕುರಿತು ಚರ್ಚಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.