ಟೀಕೆ-ಟಿಪ್ಪಣಿಗೆ ಹೆದರಲ್ಲ, ಎತ್ತಿನಹೊಳೆ ಕೈಬಿಡಲ್ಲ
ಕ. ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಜ.18
ಯಾರು ಏನೇ ಟೀಕೆ-ಟಿಪ್ಪಣಿ ಮಾಡಿದರೂ ಎತ್ತಿನಹೊಳೆ ಯೋಜನೆ ಅನುಷ್ಠಾನ ಖಚಿತ. ಅಲ್ಲದೆ ಚಿಕ್ಕಬಳ್ಳಾಪುರ ಕ್ಷೇತ್ರದ ಕೆಲ ಭಾಗಕ್ಕೆ ಕಾವೇರಿ 4ನೇ ಹಂತದ ಹೆಚ್ಚುವರಿ ನೀರನ್ನು ಒದಗಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಶನಿವಾರ ಸಂಜೆ ತಾಲೂಕಿನ ಕನಸವಾಡಿ ಸರ್ಕಾರಿ ಪ.ಪೂ.ಕಾಲೇಜು ಆವರಣದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮತ್ತು ಬೆಂ.ಗ್ರಾ.ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ತಾಲೂಕಿನ ಕನಸವಾಡಿ ಮತ್ತು ಮಜರಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅನುಷ್ಠಾನ ನಿಲ್ಲದು: ನನ್ನನ್ನು ಎಷ್ಟೇ ಸುಳ್ಳುಗಾರನೆಂದು ಜರಿದರೂ ನನ್ನ ಜನಪರ ಯೋಜನೆಗಳ ಅನುಷ್ಠಾನ ನಿಲ್ಲದು. ಮತಗಳನ್ನು ಅತಿಕ್ರಮಿಸುವ ಯೋಜನೆ ನನ್ನದಲ್ಲ. ಕ್ಷೇತ್ರದ ಜನರ ಋಣ ತೀರಿಸುವುದಷ್ಟೇ ನನ್ನ ಕೆಲಸ. ಎಂತಹ ಅಡ್ಡಿ-ಆತಂಕಗಳು ಎದುರಾದರೂ ಜ.31ಕ್ಕೆ ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆ ನಿಶ್ಚಿತ. ಈ ಹಂತದಲ್ಲಿ ಯಾವುದೇ ಕುತಂತ್ರ ರಾಜಕಾರಣಗಳಿಂದ ಇದನ್ನು ತಡೆಯಲಾಗದು. ಜನ ಮತ್ತೆ ಮತನೀಡಲಿ ಎಂದು ಯೋಜನೆ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಅಸಾಧ್ಯವಲ್ಲ: ಬರುವ 1 ವರ್ಷದಲ್ಲಿ ಎತ್ತಿನಹೊಳೆಯಿಂದ ನೀರು ತರಲಾಗುವುದು. 2 ವರ್ಷದಲ್ಲಿ ಮಹಾರಾಷ್ಟ್ರದಿಂದ ಬೆಂಗಳೂರಿಗೆ 860 ಕಿ.ಮೀ ದೂರದಿಂದ ಅನಿಲ ಕೊಳವೆ ಅಳವಡಿಸಿದ್ದು ಸಾಧ್ಯವಾಗಿದೆ ಎನ್ನುವುದಾದರೆ 260 ಕಿ.ಮೀ ದೂರದಿಂದ 1 ವರ್ಷಕ್ಕೆ ನೀರು ತರುವುದು ಅಸಾಧ್ಯವಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇಂಧನ ಸ್ವಾಯತ್ತತೆ ಶೀಘ್ರ: ರಾಷ್ಟ್ರದಲ್ಲಿ ಮಿತಿಮೀರಿ ಏರಿಕೆಯಾಗುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಕುರಿತು ಪ್ರಸ್ತಾಪಿಸಿದ ಮೊಯ್ಲಿ, ಹೊರದೇಶಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿ ಬೆಲೆ ಏರಿಕೆ ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿದೆ. ಆದರೆ ಭಾರತೀಯ ಪೆಟ್ರೋಲಿಯಂ ಕಂಪನಿಗಳು ಸ್ವಾಯತ್ತತೆಯ ಕಡೆ ದಾಪುಗಾಲಿಟ್ಟು ನಡೆಯುತ್ತಿದ್ದು, ಮುಂಬರುವ ಕೆಲವೇ ವರ್ಷಗಳಲ್ಲಿ ಭಾರತ ಇಂಧನ ಸ್ವಾಯತ್ತತೆ ಸಾಧಿಸಲಿದೆ. ಆಗ ಶೇ.100 ಉತ್ಪಾದನೆ ಮತ್ತು ಬಳಕೆ ಸಾಧ್ಯವಾಗುತ್ತದೆ. ಇತರ ದೇಶಗಳ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ. ಜಗತ್ತಿನ ದೊಡ್ಡಶಕ್ತಿಯಾಗಿ ಭಾರತ ಬೆಳೆಯುತ್ತದೆ ಎಂದರು. ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕ್ಷೇತ್ರದಲ್ಲಿ ಹಲವು ಯೋಜನೆಗಳ ಅನುಷ್ಠಾನ ನಿರಂತರವಾಗಿ ನಡೆಯುತ್ತಿದೆ. ಸಂಸದರ ನಿಧಿಯಿಂದ ಗರಿಷ್ಠ ಪ್ರಮಾಣದ ಯೋಜನೆಗಳನ್ನು ತರಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಜೊತೆಗೆ ಖಾಸಗಿ ಕಂಪನಿಗಳ ಮೂಲಕ ಕೂಡ ಸಾಮಾಜಿಕ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿರುವುದು ವಿಶೇಷ ಎಂದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ನ ಕರ್ನಾಟಕ ವಿಭಾಗದ ಕಾರ್ಯಕಾರಿ ನಿರ್ವಾಹಕ ಆರ್.ಕೆ. ಅರೋರ, ವಿಭಾಗೀಯ ವ್ಯವಸ್ಥಾಪಕ ಫ್ರಾಂಚೀಸ್ ಅಗಸ್ಟಿ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತಿರುವರಂಗ ನಾರಾಯಣಸ್ವಾಮಿ, ಉಪಾಧ್ಯಕ್ಷ
ಎನ್. ಹನುಮಂತೇಗೌಡ, ತಾ.ಪಂ ಅಧ್ಯಕ್ಷೆ ನರಸಮ್ಮ, ಉಪಾಧ್ಯಕ್ಷ ಕೆ.ಮುನಿಯಪ್ಪ, ಜಿ.ಪಂ ಸಿಇಓ
ಎನ್. ಕೃಷ್ಣಪ್ಪ, ತಾ.ಪಂ ಇಓ ಅಶ್ವತ್ಥರೆಡ್ಡಿ, ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ನನ್ನನ್ನು ಎಷ್ಟೇ ಸುಳ್ಳುಗಾರನೆಂದು ಜರೆದರೂ ನನ್ನ ಜನಪರ ಯೋಜನೆಗಳ ಅನುಷ್ಠಾನ ನಿಲ್ಲದು. ಮತಗಳನ್ನು ಅತಿಕ್ರಮಿಸುವ ಯೋಜನೆ ನನ್ನದಲ್ಲ. ಕ್ಷೇತ್ರದ ಜನರ ಋಣ ತೀರಿಸುವುದಷ್ಟೇ ನನ್ನ ಕೆಲಸ. ಎಂತಹ ಅಡ್ಡಿ-ಆತಂಕಗಳು ಎದುರಾದರೂ ಜ.31ಕ್ಕೆ ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆ ನಿಶ್ಚಿತ. ಈ ಹಂತದಲ್ಲಿ ಯಾವುದೇ ಕುತಂತ್ರ ರಾಜಕಾರಣಗಳಿಂದ ಇದನ್ನು ತಡೆಯಲಾಗದು.
- ಎಂ.ವೀರಪ್ಪ ಮೊಯ್ಲಿ