ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರಕ್ಕೆ ಇಬ್ಬರು ಶಾಸಕರು: ಮೊಯ್ಲಿ ಉವಾಚ

Vishwanath S
Updated On : 19 Jan 2014, 1:26 am

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಟಿ.ವೆಂಕಟರಮಣಯ್ಯ ಶಾಸಕರು. ಅವರ ಮಾರ್ಗದರ್ಶಕರಾಗಿ ಕ್ಷೇತ್ರದ ಅಭ್ಯುದಯಕ್ಕೆ ಸ್ಪಂದಿಸುತ್ತಿರುವ ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಅವರೂ ಕೂಡ ಶಾಸಕರ ರೀತಿಯಲ್ಲೇ ಹೊಣೆಗಾರಿಕೆ ನಿಭಾಯಿಸುತ್ತಿರುವುದು ಅವರ ಜನಪರ ಕಾಳಜಿಗೆ ಸಾಕ್ಷಿ. ಒಂದು ರೀತಿಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಈಗ ಇಬ್ಬರು ಶಾಸಕರಿದ್ದಾರೆ ಎಂಬ ಕೇಂದ್ರ ಸಚಿವ ಮೊಯ್ಲಿ ಹೇಳಿಕೆ ಈಗ ಕ್ಷೇತ್ರದ ಜನರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಎಪಿಎಲ್ ಕಾರ್ಡ್‌ಗೆ ಸೀಮೆಎಣ್ಣೆ ಅಕ್ಕಿ ವಿತರಿಸಿ
ದೊಡ್ಡಬಳ್ಳಾಪುರ: ಎಪಿಎಲ್ ಪಡಿತರ ಚೀಟಿದಾರರಿಗೂ ಸೀಮೆಎಣ್ಣೆ ಮತ್ತು ಅಕ್ಕಿ ವಿತರಣೆ ಮಾಡುವ ವ್ಯವಸ್ಥೆ ಜಾರಿಗೆ ತನ್ನಿ ಎಂದು ಆಗ್ರಹಿಸಿ ಕನಸವಾಡಿ ಹೋಬಳಿಯ ಪ್ರಮುಖ ಮುಖಂಡರು, ಸಾರ್ವಜನಿಕರು ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅದೇ ರೀತಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರ್ವಜನಿಕರು ಕೂಡ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಕೇಂದ್ರ ಹೋರಾಟದ ದನಿಯಿಲ್ಲ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ದೊಡ್ಡಬಳ್ಳಾಪುರವನ್ನು ಘೋಷಿಸಬೇಕು ಎಂಬ ಆಗ್ರಹ-ಒತ್ತಾಯಗಳು ತೀವ್ರವಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವರು ಈ ಬಗ್ಗೆ ವಿಚಾರವನ್ನೇ ಪ್ರಸ್ತಾಪ ಮಾಡಿಲ್ಲ. ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕಿಗಳಲ್ಲಿ ಹೋರಾಟಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳನ್ನು ಪ್ರತಿನಿಧಿಸುವ ವೀರಪ್ಪ ಮೊಯ್ಲಿ ಗಂಭೀರವಾಗಿ ದನಿಯೆತ್ತಬೇಕು. ಅರ್ಹತೆ ಮೇರೆಗೆ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಲು ಸರ್ಕಾರಕ್ಕೆ ಒತ್ತಾಯ ಹೇರಬೇಕು ಎಂಬ ಆಗ್ರಹ ಕೇಳಿ ಬಂದವು.
ವಧು-ವರರ 7ನೇ ಸಮಾವೇಶ
ವಿಜಯಪುರ: ಪಟ್ಟಣದ ಅಯೋಧ್ಯನಗರ ಶಿವಾಚಾರ ವೈಶ್ಯ ನಗರ್ತ ವಧು-ವರರ ವಿವಾಹ ವೇದಿಕೆ ವತಿಯಿಂದ ಭಾನುವಾರದಂದು ಬೆಳಿಗ್ಗೆ 11ಘಂಟೆಗೆ ನಗರ್ತ ವಧು-ವರರ 7ನೇ ಬೃಹತ್ ವಾರ್ಷಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶವು ಇಲ್ಲಿನ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು,ಉದ್ಘಾಟನೆಯನ್ನು ಬೆಂಗಳೂರು ಆಸ್ಪತ್ರೆಯ ನಿರ್ದೇಶಕರು ಡಾ. ಚೂಡಪ್ಪ ನೆರವೇರಿಸಲಿದ್ದಾರೆ.
ಅಪರಿಚಿತ ವ್ಯಕ್ತಿಯ ಶವ ಪತ್ತೆ
ಹೊಸಕೋಟೆ: ತಾಲೂಕಿನ ಕುರುಬರಹಳ್ಳಿ ರಮೇಶ್‌ಕುಮಾರ್ ಎಂಬುವವರ ಜಮೀನಿನಲ್ಲಿ ಸುಟ್ಟ ಶವವೊಂದು ಪತ್ತೆಯಾಗಿದೆ. ಯಾರೊ ದುಷ್ಕರ್ಮಿಗಳು ಬೇರೆ ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಸುಟ್ಟು ಹಾಕಿದ್ದಾರೆ.
 ಮುಂಜಾನೆ ತೋಟದಕಡೆ ಹೋಗುವಾಗ ನಾಯಿಗಳು ಶವವನ್ನು ಕೀಳುತ್ತಿದ್ದವು. ಇದನ್ನು ನೋಡಿ ಹತ್ತಿರದ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಲಾತು. ಅಲ್ಲಿಗೆ ಬಂದ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್‌ಕುಮಾರ್ ಹಾಗೂ ಸಬ್ ಇನ್ಸ್‌ಪೆಕ್ಟರ್  ಬಾಲಾಜಿ ಶವವನ್ನು ಪರೀಕ್ಷಿಸಿ ನಂತರ ಶವವನ್ನು ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿದ್ದ ಇಬ್ಬರು ರೌಡಿಗಳ ಬಂಧನ
ರಾಮನಗರ : ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿದ್ದ ಇಬ್ಬರು ಕುಖ್ಯಾತ ರೌಡಿಗಳನ್ನು ಜಿಲ್ಲಾ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.
ನಾಗೇಂದ್ರ ಅಲಿಯಾಸ್ ವಡ್ಡಾನಾಗ ಮತ್ತು ಮಂಜುನಾಥ್ ಅಲಿಯಾಸ್ ಭವಾನಿ ಬಂಧಿತ ಆರೋಪಿಗಳು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವರ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.  ಬಂಧಿತರ ವಿರುದ್ಧ ರೌಡಿಶೀಟ್ ತೆರೆದಿದ್ದರೂ ಕೂಡ ಸಮಾಜ ಘಾತುಕ ಕೃತ್ಯಗಳನ್ನು ಮುಂದುವರೆಸಿದ್ದರಿಂದ ಜಿಲ್ಲಾಧಿಕಾರಿ ಡಾ.ಎಸ್.ಡಿ. ವಿಶ್ವನಾಥ್ ಇವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.  ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಆಹಾದ್ ನೇತೃತ್ವದ ತಾವರೆಕೆರೆ ಪೊಲೀಸರು ಶನಿವಾರ ನಾಗೇಂದ್ರ ಮತ್ತು ಮಂಜುನಾಥ್‌ನನ್ನು ಬಂಧಿಸಿ, ಶಿವಮೊಗ್ಗ ಜೈಲಿಗೆ ರವಾನೆ ಮಾಡಿದ್ದಾರೆ.
ಪೆಟ್ರೋಲ್ ಬಂಕ್‌ನಲ್ಲಿ ವಂಚನೆ: ದೂರು
ಸೂಲಿಬೆಲೆ: ಪಟ್ಟಣದ ದೇವನಹಳ್ಳಿ ಮಾರ್ಗದಲ್ಲಿರುವ ಪೆಟ್ರೋಲ್ ಬಂಕ್ ಒಂದರಲ್ಲಿ ಹಣಕ್ಕೆ ತಕ್ಕ ಪ್ರಮಾಣದಲ್ಲಿ ಪೆಟ್ರೋಲ್ ಹಾಕದೆ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೌಡರೆಡ್ಡಿ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ.
ಜ.17 ರಂದು ಕಾರ್ಯನಿಮಿತ್ತ ಸೂಲಿಬೆಲೆ ಮಾರ್ಗದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಚೌಡರೆಡ್ಡಿ ಸೂಲಿಬೆಲೆಯ ದೇವನಹಳ್ಳಿ ಮಾರ್ಗದಲ್ಲಿರುವ ಪೆಟ್ರೋಲ್ ಬಂಕ್ ಒಂದರಲ್ಲಿ 1 ಸಾವಿರ ರು.ಗೆ ಪೆಟ್ರೋಲ್ ಹಾಕುವಂತೆ ಹೇಳಿದ್ದಾರೆ.1 ಸಾವಿರ ರು.ಬೆಲೆ ಅಗತ್ಯವಾಗಿದ್ದ 12.72 ಲೀ ಪೆಟ್ರೋಲ್ ಬರಲಿಲ್ಲವೆಂದು ಬಂಕಿನ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ನಂತರ ಕಾರಿನಲ್ಲಿನ ಪೆಟ್ರೋಲ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಕಾರಿನಲ್ಲಿ ಉಳಿಕೆಯಿದ್ದ ಪೆಟ್ರೋಲ್ ಸೇರಿ ಕೇವಲ 11 ಲೀ ಇತ್ತು. ಈ ಬಗ್ಗೆ ಪ್ರಶ್ನೆಸಿದಾಗ ಬಂಕ್ ಸಿಬ್ಬಂದಿ ತಪ್ಪು ಒಪ್ಪಿಕೊಳ್ಳದೇ  ದೌರ್ಜನ್ಯವೆಸಗಿದ್ದಾರೆ. ಮೋಸ ಮಾಡಿ ಬೆದರಿಕೆ ಹಾಕಿರುವ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಇಂದು ಪ್ರಚಂಡ ರಾವಣ ನಾಟಕ
ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ಸರ್ಕಲ್‌ನ ಹರ್ಷ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ  ರಂಗ ಶಿಕ್ಷಣ ಕೇಂದ್ರದ 19ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜನವರಿ 19ರ ಭಾನುವಾರದಂದು ಸಂಜೆ 6-30ಕ್ಕೆ ಪ್ರಚಂಡ ರಾವಣ ಮತ್ತು ಜನವರಿ 20ರ ಸೋಮವಾರದಂದು ಸಂಜೆ 6-30ಕ್ಕೆ ಯಾರು ಹೊಣೆ ಎಂಬ ನಾಟಕಗಳನ್ನು ಪ್ರದರ್ಶಿಸಲಾಗುವುದು.  ಲೋಕೊಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಬಿ.ಟಿ. ಮುನಿರಾಜಯ್ಯ, ಅತಿಥಿಗಳಾಗಿ ನಾಟಕ ಪ್ರಾಧ್ಯಾಪಕ ಡಾ.ನಾಗೇಶ್ ಬೆಚ್ಚಕೋಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮಯ್ಯ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಜಗದೀಶ್ ಪ್ರಸಾದ್ ಆಗಮಿಸಲಿದ್ದಾರೆ. ಹರ್ಷ ಗ್ರೂಪ್ಸ್‌ನ ಚೇರ್ಮನ್ ಎಸ್. ಶಿವಕುಮಾರ್ ಪ್ರಶಸ್ತಿ ಪತ್ರ ವಿತರಣೆ ಮಾಡಲಿದ್ದಾರೆ ಎಂದು ರಂಗ ಶಿಕ್ಷಣ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಮಂಜುಳ ಸಿದ್ದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇಂದು ಹೋಮಿಯೋಪತಿ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್‌ಮತ್ತು ಲಯನೆಸ್ ಸಂಸ್ಥೆ ಹಾಗೂ ಲಯನ್ಸ್ ಸೇವಾ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ ಜ.19ರಂದು ಉಚಿತ ಹೋಮಿಯೋಪತಿ ಶಿಬಿರವನ್ನು ಲಯನ್ಸ್ ಸೇವಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ನಾಗರಾಜಯ್ಯ ತಿಳಿಸಿದ್ದಾರೆ. ಯಲಹಂಕ ಹೋಮಿಯೋ ಕೇರ್ ಕ್ಲಿನಿಕ್ ವೈದ್ಯರಾದ ಡಾ. ವಿಶ್ವನಾಥ್ ಹಾಗೂ ಡಾ. ಡಿ.ಎ.ಅನುರಾಧ ವಿಶ್ವನಾಥ್ ಎಲ್ಲ ರೀತಿಯ ಕಾಯಿಲೆಗಳ ಪರೀಕ್ಷೆ ಮಾಡಿ ಉಚಿತವಾಗಿ ಔಷಧ ನೀಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement