ನಿರುದ್ಯೋಗಿಗಳಲ್ಲಿ ಆಶಾಭಾವನೆ ಮೂಡಿಸಿದ ಉದ್ಯೋಗ ಮೇಳ
ಕ.ಪ್ರ.ವಾರ್ತೆ ರಾಮನಗರ ಜ.18
ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವುದು ಹಾಗೂ ಕೌಶಲ್ಯ ವೃದ್ಧಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಇದೇ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳವು ನಿರುದ್ಯೋಗಿಗಳಲ್ಲಿ ಆಶಾಭಾವನೆ ಮೂಡಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಡಿಎಸ್. ವಿಶ್ವನಾಥ್ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೈಗಾರಿಕಾ ಇಲಾಖೆ, ಕಾರ್ಮಿಕ ಇಲಾಖೆಯಿಂದ ಶನಿವಾರ ನಡೆದ ಉದ್ಯೋಗ ಮತ್ತು ಕೌಶಲ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಿರುದ್ಯೋಗ ನಿವಾರಣೆಗೆ ಜಿಲ್ಲಾಡಳಿತ ಈ ಮೇಳವನ್ನು ಆಯೋಜಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಉದ್ಯೋಗಕ್ಕೆ ತೀರಾ ಅವಶ್ಯಕವಾಗಿರುವ ಕೆಲವು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಉದ್ಯೋಗ ಮೇಳದಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲಾಗಿದ್ದು, ನಿರುದ್ಯೋಗಿ ಯುವ ಮಿತ್ರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ರ ನಿರ್ದೇಶನದ ಮೇರೆಗೆ ಇದೇ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ಉದ್ಯೋಗ ಮೇಳವನ್ನು ಆಯೋಜಿಲಾಗಿತ್ತು. ಮೇಳದಲ್ಲಿ ಸುಮಾರು 60 ಉದ್ಯಮಗಳು ಭಾಗವಹಿಸುವಂತೆ ಮನವಿ ಮಾಡಲಾಗಿತ್ತು. ಆದರೆ 18 ಸಂಸ್ಥೆಗಳು ಮಾತ್ರ ಭಾಗವಹಿಸಿದ್ದು, ಆಗಮಿಸಿದ್ದ 1200ಕ್ಕೂ ಹೆಚ್ಚು ಅಭ್ಯರ್ಥಿಗಳು ಮೇಳಕ್ಕೆ ಆಗಮಿಸಿದ್ದು, ಈ ಪೈಕಿ 82 ಮಂದಿಗೆ ವಿವಿಧ ಸಂಸ್ಥೆಗಳು ಉದ್ಯೋಗ ಕಲ್ಪಿಸಿವೆ ಎಂದು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಬಾಲ್ಯ ನಾಯಕ್ ತಿಳಿಸಿದರು.
ಇಂಗ್ಲಿಷ್ ತಿಳಿವಳಿಕೆ ಅಗತ್ಯ: ಇಂದಿನ ದಿನಗಳಲ್ಲಿ ಯಾವುದೇ ಉದ್ಯೋಗ ಗಿಟ್ಟಿಸಲು ಇಂಗ್ಲಿಷ್ ಹಾಗೂ ಕಂಪ್ಯೂಟರ್ ತಿಳಿವಳಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಸ್ಪೀಕ್ ಇಂಗ್ಲಿಷ್ ಸಂಸ್ಥೆಯು ಸುಲಭವಾಗಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಮತ್ತು ಸಂವಹಿಸುವ ಕಲೆಗಳ ಬಗ್ಗೆ ಹಾಗೂ ಕಂಪ್ಯೂಟರ್ ಕಲಿಕಾ ಕೇಂದ್ರ ಎನ್.ಐ.ಐ.ಟಿ ಅಭ್ಯರ್ಥಿಗಳ ವಿದ್ಯಾರ್ಹತೆ, ಉದ್ಯೋಗದ ಆಸಕ್ತಿಗೆ ತಕ್ಕಂತೆ ಕಲಿಯಬೇಕಾದ ಕಂಪ್ಯೂಟರ್ ಕೋರ್ಸುಗಳ ಬಗ್ಗೆ ತಿಳಿವಳಿಕೆ ನೀಡಿದೆ. ಈ ಎರಡೂ ಸಂಸ್ಥೆಗಳು ಅಭ್ಯರ್ಥಿಗಳ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಎಸ್.ಜೆ. ಹೇಮಚಂದ್ರ ಹೇಳಿದರು.
ಸ್ಪೀಕ್ ಇಂಗ್ಲಿಷ್ ಸಂಸ್ಥೆ ಸುಮಾರು 50 ಅಭ್ಯರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸಲು ಮುಂದೆ ಬಂದಿದೆ. ಆಸಕ್ತ ಅಭ್ಯರ್ಥಿಗಳಿಗೆ ಉಚಿತ ವಾಹನ ಸೇವೆಯನ್ನು ದೊರಕಿಸಿಕೊಟ್ಟು ಬೆಂಗಳೂರಿನ ತನ್ನ ಸಂಸ್ಥೆಯಲ್ಲಿ ಇಂಗ್ಲಿಷ್ ಕಲಿಸಲಿದೆ ಎಂದರು.
ವಿಕಲಚೇತನರಿಗೆ ಉದ್ಯೋಗ ಪತ್ರ: ಉದ್ದಿಮೆದಾರರ ಪರವಾಗಿ ಮಾತನಾಡಿದ ಸಮರ್ಥನಂ ಟ್ರಸ್ಟ್ ಸತೀಶ್ ಮಾತನಾಡಿ ಮೇಳದಲ್ಲಿ ಭಾಗವಹಿಸಿದ್ದ ತಮ್ಮ ಸಂಸ್ಥೆ ಇಬ್ಬರು ವಿಕಲಚೇತನರಿಗೆ ಉದ್ಯೋಗ ಪತ್ರವನ್ನು ನೀಡಿದೆ ಎಂದರು. ತಮ್ಮ ಸಂಸ್ಥೆ ಈಗಾಗಲೆ ಬಿಡದಿಯಲ್ಲಿ ಬಿಪಿಒ ಕಂಪನಿ ಆರಂಭಿಸಿದ್ದು, ಬಹುತೇಕ ಅಂಗವಿಕಲರಿಗೆ ಉದ್ಯೋಗ ನೀಡಲಾಗಿದೆ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗರಾಜು ಮಾತನಾಡಿ, ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ಉದ್ದಿಮೆದಾರರು ಉದ್ಯೋಗಾಕಾಂಕ್ಷಿಗಳನ್ನು ಸಂದರ್ಶಿಸಿ, ಉದ್ಯೋಗ ನೀಡಲು ಆಗಮಿಸಿದ್ದುದು ಆಶಾದಾಯಕವಾಗಿತ್ತು. ಆದರೆ, ಮೇಳದ ಪ್ರಯೋಜನ ಪಡೆದುಕೊಳ್ಳಲು ಆಗಮಿಸಿದ್ದ ನಿರುದ್ಯೋಗಿಗಳ ಸಂಖ್ಯೆ ನಮ್ಮ ನಿರೀಕ್ಷೆಯನ್ನು ಹುಸಿಯಾಗಿಸಿದೆ ಎಂದು ವಿಷಾದಿಸಿದರು.
ಶಶಿಧರ್ ಮಾತನಾಡಿ ಅರ್ಹ ಅಭ್ಯರ್ಥಿಗಳ ಅನ್ವೇಷಣೆಯಲ್ಲಿದ್ದ ತಮ್ಮ ಸಂಸ್ಥೆಗೆ ಈ ಮೇಳದಿಂದ ಉಪಯೋಗವಾಗಿದೆ ಎಂದರು. ಮೇಳದಲ್ಲಿ ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹಾಜರಿದ್ದರು.
ಮೇಳದಲ್ಲಿ ಭಾಗವಹಿಸಿದ್ದ ಉದ್ದಿಮೆಗಳು: ಏಜಿಲಾ ಸ್ಪೆಷಾಲಿಟಿಸಿ ಪ್ರೈವೇಟ್ ಲಿ., ಸ್ಪೀಕಿಂಗ್ ಇಂಗ್ಲಿಷ್, ಕಾನ್ಫಿಡೆಂಟ್ ಡೆಂಟಲ್ ಎಕ್ವಿಪ್ಮೆಂಟ್ಸ್, ಸಮರ್ಥನಂ ಸಂಸ್ಥೆ, ಸಮರ್ಥನಂ ಕಿರಣ ಇನ್ಫರ್ಮೇಷನ್ ಟೆಕ್ನಾಲಜಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಅಪೆರಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್, ಅಪ್ಲಿ ಕಂಪ್ ಇಂಡಿಯಾ ಲಿಮಿಟೆಡ್, ಆದಿತ್ಯಾ ಬಿರ್ಲಾ ನೊಮೊ ಲಿಮಿಟೆಡ್, ಕೆಫೆ ಕಾಫಿ ಡೆ, ಎನ್ಐಟಿ-ಐಸಿಸಿಐ ಬ್ಯಾಂಕ್, ಯರೇಖಾ ಫೋರ್ಬ್ಸ್, ಜಯಶ್ರೀ, ಅನಂತರಾಮ್, ಲುಮೇಕ್ಸ್ ಇಂಡಸ್ಟ್ರೀಸ್, ಲಿವಿಂಗ್ ಡಿಸೈನ್ ಪ್ರೈವೇಟ್ ಲಿಮಿಟೆಡ್, ಆದರ್ಶ ಪ್ಯಾಕೆಜಿಂಗ್ ಪ್ರೈವೇಟ್ ಲಿ, ಪಾರ್ಶನ್ ನ್ಯೂಟ್ರಿಷಿನಲ್ ಪ್ರೈವೇಟ್ ಲಿ, ಆರ್ಜಿಯಾನ್ ಪ್ರೈವೇಟ್ ಲಿ, ಪ್ರವೀಣ್ ಎಂಟರ್ ಪ್ರೈಸಸ್ ಹಾಗೂ ವಂಡರ್ ಬ್ಲೂ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಂಡಿದ್ದವು.