ಅವಶ್ಯಕತೆಯೇ ಆವಿಷ್ಕಾರದ ತಾಯಿ: ಎಚ್.ವಿ. ಗುಂಡಣ್ಣ
ಕನಕಪುರ: ಅವಶ್ಯಕತೆಯೇ ಆವಿಷ್ಕಾರದ ತಾಯಿಯಾಗಿದ್ದು, ಶಾಲಾ ದಿನಗಳಿಂದಲೇ ವಿದ್ಯಾರ್ಥಿಗಳ ಬೌದ್ಧಿಕ ಹಸಿವನ್ನು ತೀರಿಸುವ ಅವರ ಸಮಸ್ಯೆಗಳಿಗೆ ಉತ್ತರ ಹೇಳುವ ಪ್ರಶ್ನೆಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿ ಹೇಳುವ ವಿಜ್ಞಾನ ವಸ್ತುಪ್ರದರ್ಶನಗಳು ಹೆಚ್ಚುಹೆಚ್ಚಾಗಿ ನಡೆಯಬೇಕು ಎಂದು ಆದರ್ಶ ವಿದ್ಯಾಸಂಸ್ಥೆ ಸಂಸ್ಥಾಪಕ ಎಚ್.ವಿ.ಗುಂಡಣ್ಣ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ದೊಡ್ಡಕೊಪ್ಪ ಗ್ರಾಮದ ಆದರ್ಶ ವಿದ್ಯಾಮಂದಿರ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ-ವಿಸ್ಮಯ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಹಿರಿಯ ಶಿಕ್ಷಕರ ಮಾರ್ಗದರ್ಶನದಲ್ಲಿ ರೂಪಿಸಿದ ವಿಜ್ಞಾನ ಮಾದರಿಗಳ, ಪ್ರಯೋಗಗಳ ಪ್ರದರ್ಶನವನ್ನು ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ವಸ್ತು ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ವಿವರಣೆ ನೀಡಿ ಅವರ ಅನುಮಾನಗಳನ್ನು ತಣಿಸಿದರು.
ರಾಷ್ಟ್ರಪ್ರಶಸ್ತಿ ವಿಜೇತ ವಿಜ್ಞಾನಶಿಕ್ಷಕ ತುಮಕೂರಿನ ರಾಮಸ್ವಾಮಿ, ಕೆ.ವಿ.ಸತ್ಯನಾರಾಯಣ, ಭಾರ್ಗವ, ರಾಮಮೂರ್ತಿ, ಶಿವಣ್ಣ ಮೊದಲಾದ ಶಿಕ್ಷಕರ ನೇತೃತ್ವದಲ್ಲಿ ನಡೆದ ವಿಜ್ಞಾನ-ವಿಸ್ಮಯ ವಸ್ತುಪ್ರದರ್ಶನ ವೀಕ್ಷಿಸಲು ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 200ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಆಗಮಿಸಿದ್ದು ವಿಶೇಷವಾಗಿತ್ತು.