ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಿ
ಕ.ಪ್ರ.ವಾರ್ತೆ , ರಾಮನಗರ , ಜ.18
ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಲು ಸರ್ಕಾರ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಜಯಕರ್ನಾಟಕ ಸಂಘಟನೆಯು ನಿರಂತರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ತಿಳಿಸಿದರು.
ಬಿಡದಿ ಬಳಿಯ ಹೆಜ್ಜಾಲದಲ್ಲಿ ಜಯಕರ್ನಾಟಕ ಸಂಘಟನೆ ಆಯೋಜಿಸಿದ್ದ 3ನೇ ವರ್ಷದ ಕನ್ನಡ ಹಬ್ಬ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆಯನ್ನು ಮೂಡಿಸಲು ಏಕರೂಪ ಶಿಕ್ಷಣ ಪದ್ಧತಿ ಜಾರಿಯಾಗಬೇಕು ಎಂದರು.
ಶಿಕ್ಷಣ ಕ್ಷೇತ್ರ ಇಂದು ಮಾರುವ ವಸ್ತುವಾಗಿದೆ. ಸಂಪೂರ್ಣ ವ್ಯಾಪಾರೀ ಮನೋಭಾವ ಹೊಂದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರು.ವಸೂಲಿ ಮಾಡುವ ಮೂಲಕ ಪೋಷಕರ ಸುಲಿಗೆಯಲ್ಲಿ ನಿರತವಾಗಿವೆ. ಗುಣಮಟ್ಟದ ಶಿಕ್ಷಣ ಕೇವಲ ಉಳ್ಳವರ ಸ್ವತ್ತಾಗಿದ್ದು, ಬಡವರು ಮಾತ್ರ ಸರ್ಕಾರಿ ಶಾಲೆಯಲ್ಲಿ ಕಲಿಯುವಂತಾಗಿದೆ. ಇದರಿಂದ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತಿದೆ ಎಂದು ಅವರು ವಿಷಾದಿಸಿದರು.
ಕಲಿಕೆಗೆ ಪೂರಕವಾದ ಸಹಕಾರ, ಆರೋಗ್ಯ ಮತ್ತು ನೇತ್ರ ತಪಾಸಣೆ ಶಿಬಿರಗಳ ಆಯೋಜನೆ, ಗ್ರಾಮೀಣ ಭಾಗದಲ್ಲಿ ಕುಲ ಕಸುಬುಗಳಲ್ಲಿ ತೊಡಗಿಕೊಂಡಿರುವ ಪ್ರತಿಭಾವಂತರನ್ನು ಗೌರವಿಸುವುದು, ಪ್ರತಿಭಾ ಪುರಸ್ಕಾರಗಳ ಮೂಲಕ ಶಾಲಾ ಮಕ್ಕಳನ್ನು ಉತ್ತೇಜಿಸುವ ಕಾಯಕವನ್ನು ಜಯಕರ್ನಾಟಕ ಸಂಘಟನೆ ಮಾಡುತ್ತಾ ಬಂದಿದ್ದು, ಇದನ್ನು ನಿರಂತವಾಗಿ ಮುಂದುವರೆಸಲಿದೆ ಎಂದರು.
ಕನ್ನಡ ಭಾಷೆ ಪ್ರೀತಿಸಿ: ನಾಡಿನ ಜನರಲ್ಲಿ ಕನ್ನಡಾಭಿಮಾನವನ್ನು ಬೆಳೆಸುವ ಈ ನಿಟ್ಟಿನಲ್ಲಿ ಸಂಘಟನೆಯು ಪ್ರತಿ ವರ್ಷವೂ ಕನ್ನಡ ಹಬ್ಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಕನ್ನಡ ಭಾಷೆಯಲ್ಲಿಯೇ ಮಾತಾಡುವ ಮೂಲಕ ಕನ್ನಡಿಗರು ಸೇರಿದಂತೆ ಅನ್ಯ ಭಾಷಿಕರಲ್ಲಿಯೂ ಸಹ ಕನ್ನಡದ ಬಗ್ಗೆ ಅಭಿಮಾನ ಮೂಡಿಸಬೇಕಾಗಿದೆ. ನಮ್ಮ ಮಾತೃಭಾಷೆಯನ್ನು ನಾವು ಯಾವಾಗ ಪ್ರೀತಿಸುತ್ತೇವೆಯೋ ಆಗ ಮಾತ್ರ ನಾಡ ಭಾಷೆ ರಕ್ಷಣೆ ಸಾಧ್ಯ ಎಂದ ಅವರು ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲಾ ಸಂಘಟನೆಗಳು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಿಸ್ವಾರ್ಥ ಸೇವೆಗೆ ಮುಂದಾಗಬೇಕು ಎಂದು ಮುತ್ತಪ್ಪ ರೈ ಕರೆ ನೀಡಿದರು.
ಸಂಖ್ಯೆ ಕ್ಷೀಣಿಸುತ್ತಿದೆ: ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್ ಮಾತನಾಡಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಅನ್ಯ ಭಾಷಿಕರ ವಲಸೆಯಿಂದಾಗಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಕನ್ನಡ ನಾಡು ನುಡಿ, ನೆಲ ಜಲ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದ ಅವರು ಕನ್ನಡದ ಅಳಿವು-ಉಳಿವಿನ ಪ್ರಶ್ನೆ ಉದ್ಭವಿಸಿರುವ ಸನ್ನಿವೇಶದಲ್ಲಿ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಕೊಂಡಿಯಾಗಲಿ: ಭಾಷೆಯು ಬಾಂಧವ್ಯ ಬೆಸೆಯುವ ಕೊಂಡಿಯಾಗಬೇಕೆ ಹೊರತು ಪರಸ್ಪರ ಹೊಡೆದಾಟಕ್ಕೆ ಅಸ್ತ್ರವಾಗಬಾರದು. ಮಾತೃಭಾಷೆ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿರುವ ಕನ್ನಡಿಗರು ಮಾತೃಭಾಷೆಯನ್ನು ಕಡೆಗಣಿಸುವುದು ಸರಿಯಲ್ಲ ಎಂದು ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ್ ರೈ ಹೇಳಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರಗಳು, ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗಳಿಗೆ ಪಾತ್ರೆಗಳನ್ನು ವಿತರಿಸಲಾಯಿತು. ಜಿ.ಪಂ ಸದಸ್ಯೆ ಶಾಂತಮ್ಮ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಷಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಬ್ಯಾಟಪ್ಪ, ಸಂಘಟನೆಯ ಜಿಲ್ಲಾಧ್ಯಕ್ಷ ಡಿ.ಜಿ.ಕುಮಾರ್, ಪದಾಧಿಕಾರಿಗಳಾದ ಜಗದೀಶ್, ಕೆ.ರವಿ, ಭಾಗ್ಯೇಶ್ ರೈ, ರಮೇಶ್, ರಾಜಣ್ಣ, ಶಿವಕುಮಾರ್, ಲೋಕೇಶ್, ಶಾಂತರಾಜು, ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.