ಕೋಳಿ ತ್ಯಾಜ್ಯ ವಿಲೇವಾರಿಗೆ ಕಡಿವಾಣ ಹಾಕಿ...
ಚನ್ನಪಟ್ಟಣ: ತಾಲೂಕಿನ ಕೂಡ್ಲೂರು ಕೆರೆ ಏರಿ ಮೇಲೆ ಪುರ ಪ್ರದೇಶದ ಕೆಲ ಕೋಳಿ ಅಂಗಡಿಯ ಮಾಲೀಕರು ಕೋಳಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅದರಲ್ಲೂ ದ್ವಿಚಕ್ರವಾಹನ ಸವಾರರಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ.
ರಾತ್ರಿ ವೇಳೆ ಮೂಟೆಗಳಲ್ಲಿ ಕೋಳಿ ತ್ಯಾಜ್ಯ ತಂದು ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಿದ್ದು, ಒಂದೆಡೆ ಕೋಳಿ ತ್ಯಾಜ್ಯ ಕೊಳೆತು ದುರ್ನಾತ ಬೀರುವುದರಿಂದ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿ ತಿರುಗಾಡುವಂತಾಗಿದೆ. ಮತ್ತೊಂದೆಡೆ ಈ ಕೋಳಿ ತ್ಯಾಜ್ಯಗಳನ್ನು ತಿನ್ನಲು ಹತ್ತಾರು ನಾಯಿಗಳ ಹಿಂಡು ಬರುವುದರಿಂದ ರಾತ್ರಿ ವೇಳೆ ತಿರುಗಾಡುವ ದ್ವಿಚಕ್ರ ವಾಹನ ಸವಾರರ ಪಾಲಿಗೆ ಈ ನಾಯಿಗಳು ಸಮಸ್ಯೆಯಾಗಿ ಪರಿಣಮಿಸಿವೆ.
ಕೂಡ್ಲೂರು ಕೆರೆ ಏರಿಯ ಮೂಲಕ ಪ್ರತಿ ನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿದ್ದು ಕೋಳಿ ತ್ಯಾಜ್ಯಕ್ಕಾಗಿ ಕಚ್ಚಾಡುವ ನಾಯಿಗಳು ದ್ವಿಚಕ್ರ ವಾಹನಕ್ಕೆ ಇದ್ದಕ್ಕಿದ್ದಂತೆ ಅಡ್ಡ ಬರುವುದರಿಂದ ವಾಹನ ಸವಾರರು ಆಯತಪ್ಪಿ ಕೆಳಗೆ ಬಿದ್ದು ಕೈಕಾಲು ಮುರಿದು ಕೊಂಡಿರುವ ಉದಾಹರಣೆ ಸಾಕಷ್ಟಿದೆ. ಅಲ್ಲದೆ ಈ ನಾಯಿಗಳು ದ್ವಿಚಕ್ರ ವಾಹನ ಸವಾರರ ಮೇಲೆ ಹಲವಾರು ಬಾರಿ ದಾಳಿ ಮಾಡಿವೆ. ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ತಂದೊಡ್ಡಿರುವ ಕೋಳಿ ತ್ಯಾಜ್ಯಗಳನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡುವಂತೆ ಕೋಳಿ ಅಂಗಡಿ ಮಾಲೀಕರಿಗೆ ತಾಕೀತು ಮಾಡುವ ಕೆಲಸವನ್ನು ಸಂಬಂಧಿಸಿದ ಮಂದಿ ಮಾಡಬೇಕಿದೆ.
ಬಸ್ ಪಾಸ್ ಅವ್ಯವಸ್ಥೆ ಸರಿಪಡಿಸಿ
ಬಿಡದಿ ಸುತ್ತಮುತ್ತಲ ಗ್ರಾಮಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಇನ್ನಿತರೆ ಕಾಲೇಜುಗಳಿಗೆ ವ್ಯಾಸಂಗ ಮಾಡಲು ಪ್ರತಿನಿತ್ಯ ಆಗಮಿಸುತ್ತಾರೆ.
ರಾಮನಗರದಿಂದ ಬಿಡದಿಗೆ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಇದೆ. ಆದರೆ, ಬಿಡದಿಯಿಂದ ಸುತ್ತಮುತ್ತಲ ಗ್ರಾಮಗಳಿಗೆ ಬಿಎಂಟಿಸಿ ಬಸ್ಗಳು ಮಾತ್ರ ಸಂಚರಿಸುತ್ತವೆ. ವಿದ್ಯಾರ್ಥಿಗಳಿಗೆ ರಾಮನಗರದ ಬಸ್ ಘಟಕವು ಕೇವಲ ಕೆಎಸ್ಆರ್ಟಿಸಿ ಬಸ್ಗಳಿಗೆ ಮಾತ್ರ ಪಾಸ್ಗಳನ್ನು ವಿತರಣೆ ಮಾಡಿದೆ.
ಕೆಎಸ್ಆರ್ಟಿಸಿ ಘಟಕವು ವಾರ್ಷಿಕ ಬಸ್ ಪಾಸ್ ಶುಲ್ಕ ಪಡೆದಿದೆ. ಈ ಪಾಸ್ನಿಂದ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಲು ಅವಕಾಶವಿರುವುದಿಲ್ಲ. ಇದರಿಂದ ಪ್ರತಿನಿತ್ಯ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಅನನುಕೂಲ ಉಂಟಾಗಿದೆ. ಇದೇ ಪಾಸ್ನಿಂದ ಬಿಎಂಟಿಸಿ ಬಸ್ಗ್ಳಲ್ಲಿ ಸಂಚರಿಸಲು ಅನುವು ಮಾಡಿಕೊಡುವಂತೆ ಕೆಎಸ್ಆರ್ಟಿಸಿ ಅಧಿಕಾರಿಗಳೂ ಸೇರಿದಂತೆ ರಾಮನಗರ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳಿಗಾಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಿದೆ.
- ನಾಗರಾಜು, ವಿದ್ಯಾರ್ಥಿ.
ಕಡಿದಾದ ತಿರುವನ್ನು ಶೀಘ್ರ ಸರಿಗೊಳಿಸಿ
ಮಾಗಡಿ ಪಟ್ಟಣದ ಗೌರಮ್ಮನಕೆರೆ-ತಿರುಮಲೆ ಮುಖ್ಯ ರಸ್ತೆ ಸೇತುವೆಯ ಬಳಿ ಹೆಚ್ಚು ತಿರುವಿದ್ದು, ಅನೇಕ ವಾಹನ ಸವಾರರು ರಸ್ತೆ ಅಪಘಾತದಿಂದ ಬಿದ್ದು ಗಾಯಗೊಂಡಿದ್ದಾರೆ. ಅವೈಜ್ಞಾನಿಕವಾಗಿ ಸೇತುವೆ ತಿರುವ ಮಾಡಿರುವುದರಿಂದ ರಸ್ತೆಯ ಎದುರಿಗೆ ಬರುವ ವಾಹನಗಳು ವಾಹನ ಸವಾರರಿಗೆ ಕಣ್ಣಿಗೆ ಕಾಣುವುದಿಲ್ಲ. ಇಲ್ಲಿ ಪಾದಚಾರಿಗಳು ನಡೆದು ಹೋಗಲು ಹೆದರುತ್ತಾರೆ. ಅನೇಕ ಬಾರಿ ಪಾದಚಾರಿಗಳಿಗೂ ವಾಹನ ಡಿಕ್ಕಿ ಹೊಡೆದು ಪದಚಾರಿಗಳು ಬಿದ್ದು ಗಾಯಗೊಂಡಿರುವ ಅನೇಕ ಉದಾಹರಣೆಗಳಿವೆ. ಈ ರಸ್ತೆಯಲ್ಲಿಯೇ ಲೋಕೋಪಯೋಗಿ ಇಲಾಖೆ, ಕೃಷಿ, ತೋಟಗಾರಿಕೆ, ತಾ.ಪಂ. ಹಾಗೂ ಜಿ.ಪಂ. ಎಂಜಿನಿಯರ್ಗಳು ವಾಹನಗಳಲ್ಲಿ ಹಾದು ಹೋಗುತ್ತಾರೆ. ಅವರಿಗೂ ಈ ಅತ್ಯಂತ ಕಡಿದಾದ ತಿರುವು ಕಣ್ಣಿಗೆ ಕಾಣಿಸುತ್ತಿಲ್ಲವೆ? ಪಟ್ಟಣಕ್ಕೆ ಬಂದರೆ ಪ್ರವಾಸಿ ಮಂದಿರಕ್ಕೆ ಬರಬೇಕಾದ ಶಾಸಕರು ಈ ಈ ಕಡಿದಾದ ಸೇತುವೆ ತಿರುವಿನಲ್ಲೇ ಹಾದು ಹೋಗಬೇಕು. ಅವರಿಗಾದರೂ ಮನವರಿಕೆಯಾಗಲ್ಲವೇ. ಸೇತುವೆ ತಿರುವು ಸರಿಪಡಿಸುವಂತೆ ಹಲವಾರು ಬಾರಿ ಪುರಸಭೆಗೆ ಮನವಿ ಮಾಡಲಾಗಿದೆ. ಆದರೂ ಸಂಬಂಧಪಟ್ಟ ಎಂಜಿನಿಯರ್ ಆಗಲಿ, ಪುರಸಭೆಯಾಗಲಿ ಇತ್ತ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗದೆ ಇರುವುದು ವಿಪರ್ಯಾಸದ ಸಂಗತಿ. ಇನ್ನು ಮುಂದಾದರೂ ಪುರಸಭೆ ಎಚ್ಚೆತ್ತು ಅತ್ಯಂತ ಕಡಿದಾದ ತಿರುವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದೇ ಕಾದು ನೋಡಬೇಕಿದೆ.
- ಎಚ್.ಶಿವಕುಮಾರ್, ಮಾಗಡಿ