ನಾಯಿಗಳ ದಾಳಿ: 4 ಕುರಿಗಳ ಸಾವು, 5 ಕುರಿಗಳು ಚಿಂತಾಜನಕ
ದೊಡ್ಡಬಳ್ಳಾಪುರ: ಕುರಿದೊಡ್ಡಿಯಲ್ಲಿ ಮಲಗಿದ್ದ ಕುರಿಗಳ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿರುವ ಪರಿಣಾಮ 4 ಕುರಿಗಳು ಸಾವನ್ನಪ್ಪಿದ್ದು, 5 ಕುರಿಗಳ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಶಿರವಾರ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ನಾಯಿಗಳು ಒಟ್ಟು 9 ಕುರಿಗಳನ್ನು ಕಚ್ಚಿಗಾಯಗೊಳಿಸಿದ್ದವು. ಈ ಕುರಿಗಳು ಗ್ರಾಮದ ರೈತರೊಬ್ಬರಿಗೆ ಸೇರಿದ್ದಾಗಿದೆ.
ಗ್ರಾಮಸ್ಥರ ಆಕ್ರೋಶ: ಕುರಿಗಳ ಸಾವಿನಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಈ ಘಟನೆಗೆ ಗ್ರಾಮದ ಸುತ್ತಮುತ್ತ ಇರುವ ಕೋಳಿಫಾರಂಗಳ ಅವೈಜ್ಞಾನಿಕ ನಿರ್ವಹಣೆ ಕಾರಣ ಎಂದು ಆರೋಪಿಸಿದ್ದಾರೆ. ಈ ಕೋಳಿಫಾರಂಗಳಲ್ಲಿ ಸತ್ತು ಹೋಗುವ ಕೋಳಿಗಳನ್ನು ಬೀದಿಗೆಸೆಯುತ್ತಿದ್ದು, ಇವುಗಳನ್ನು ತಿನ್ನಲು ಬೀದಿನಾಯಿಗಳು ತಂಡೋಪತಂಡವಾಗಿ ಬರುತ್ತವೆ. ಅಲ್ಲಿ ಕೋಳಿಗಳು ಸಿಗದೇ ಇದ್ದಾಗ ಈ ರೀತಿಯಾಗಿ ಗ್ರಾಮಗಳ ಮೇಲೆ ದಾಳಿ ಮಾಡುತ್ತವೆ. ಹಲವು ಬಾರಿ ಈ ನಾಯಿಗಳು ಮನುಷ್ಯರಿಗೂ ಕಚ್ಚುವುದು ಸಾಮಾನ್ಯವಾಗಿದೆ. ಹತ್ತಿಪ್ಪತ್ತು ನಾಯಿಗಳು ಒಂದೇ ಬಾರಿ ದಾಳಿ ಮಾಡಿದಾಗ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಕೆಲವು ಬಾರಿ ರಾತ್ರಿ ವೇಳೆ ಗ್ರಾಮದ ರಸ್ತೆಗಳಲ್ಲಿ ಓಡಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳದೇ ಹೋದ ಪರಿಣಾಮ ಈ ಘಟನೆ ನಡೆದಿದೆ ಎಂದು ದೂರುತ್ತಾರೆ.
ಪರಿಹಾರ ಕೊಡಿ: ಘಟನೆಯಲ್ಲಿ 9 ಕುರಿಗಳು ದಾಳಿಗೀಡಾಗಿದ್ದು, ಇದರಿಂದ ಕುರಿಸಾಕಿದ್ದ ರೈತ ತೀವ್ರ ಸಂಕಷ್ಟಕ್ಕೀಡಾಗಿದ್ದಾನೆ. ಕನಿಷ್ಠ 50 ಸಾವಿರದಷ್ಟು ನಷ್ಟ ಸಂಭವಿಸಿದೆ. ಜೀವನೋಪಾಯಕ್ಕೆ ಯಾವುದೇ ಬೇರೆ ಮೂಲಗಳಿಲ್ಲದ ಆ ರೈತ ಕುರಿ ಸಾಕಾಣಿಕೆಯಿಂದಲೇ ಜೀವನ ಸಾಗಿಸುತ್ತಿದ್ದ. ಹೀಗಾಗಿ ಗ್ರಾಮ ಪಂಚಾಯಿತಿ ಮತ್ತು ಸಂಬಂಧಪಟ್ಟ ಇಲಾಖೆ ರೈತನಿಗೆ ನಷ್ಟ ಭರಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.