'ಯುವಕರು ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿ'
ಹೊಸಕೋಟೆ : ಯುವಕರು ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ್ದು ಅತ್ಯವಶ್ಯಕವಾಗಿದೆ.ಈ ನಿಟ್ಟಿನಲ್ಲಿ ಯುವ ಜನಾಂಗ ಮುಂದಡಿ ಇಡಬೇಕು ಎಂದು ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದರು. ತಾಲೂಕಿನ ನಂದಗುಡಿ ಹೋಬಳಿ ನೆಲವಾಗಿಲು ಗ್ರಾಮದಲ್ಲಿ ಏರ್ಪಡಿಸಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಮೆ ನಿರ್ಮಾಣಕ್ಕೆ ಲೋಹ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ಕಾರ್ಯವನ್ನು ತಾಲೂಕಿನ 26 ಗ್ರಾ.ಪಂ.ವ್ಯಾಪ್ತಿಯಲೂ ಕೈಗೊಳ್ಳಲಾಗಿದೆ. ಪ್ರಾಂತ್ಯಗಳನ್ನು ಒಗ್ಗೂಡಿಸಿ ಸದೃಢವಾದ ರಾಷ್ಟ್ರ ಸ್ಥಾಪನೆಗೆ ಮಹತ್ತರವಾದ ಕೊಡುಗೆ ನೀಡಿದ ಮಹಾನ್ ವ್ಯಕ್ತಿಯ ಬಗ್ಗೆ ಅಭಿಮಾನ ಹೊಂದುವುದರೊಂದಿಗೆ ರೈತರು ಪ್ರತಿಮೆ ನಿರ್ಮಾಣಕ್ಕೆ ತಮ್ಮ ಉಪಯುಕ್ತ ಕೊಡುಗೆ ನೀಡಲು ಪ್ರೇರೇಪಣೆ ನೀಡಲು ಸಾಧ್ಯವಾಗಲಿದೆ ಎಂದರು. ಶೀಘ್ರದಲ್ಲಿಯೇ ಲೋಕಸಭೆ ಚುನಾವಣೆ ಘೋಷಣೆಯಾಗಲಿದ್ದು, ಕಾರ್ಯಕರ್ತರು 100 ದಿನ 100 ಮನೆ ಘೋಷಣೆಯಡಿ ಮನೆ ಮನೆಗೂ ತೆರಳಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು, ಕೇಂದ್ರ ಸರಕಾರದ ವೈಫಲ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, 5 ದಿನಗಳ ಕಾಲ ತಾಲೂಕಿನಾದ್ಯಂತ ಈ ಕಾರ್ಯಕೈಗೊಂಡು ನಿಗದಿಪಡಿಸಿರುವ ಪ್ರಮಾಣದ ಲೋಹ, ಮಣ್ಣನ್ನು ಸಂಗ್ರಹಿಸಿ ಜಿಲ್ಲಾ ಕೇಂದ್ರಕ್ಕೆ ಹಸ್ತಾಂತರಿಸಲಾಗುವುದು. ತಾಲೂಕಿನ 264 ಬೂತ್ ಹಂತದ ಕಾರ್ಯಕರ್ತರಿಗಾಗಿ ಕರ್ತವ್ಯ ನಿರ್ವಹಣೆ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.