ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣಗೊಳಿಸಲು ಸಹಕರಿಸಿ

Vishwanath S
Updated On : 20 Jan 2014, 12:31 pm

ಚನ್ನಪಟ್ಟಣ: ಫೆ.15 ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣಗೊಳಿಸಲು ತಾಲೂಕಿನ ಕನ್ನಡ ಮನಸ್ಸುಗಳು ಸಹಕರಿಸಬೇಕೆಂದು ಕಸಾಪ ತಾಲೂಕು ಅಧ್ಯಕ್ಷ ಎಂ.ಶಿವಮಾದು ಮನವಿ ಮಾಡಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ವಿವಿಧ ಸಮಿತಿಗಳು ಮತ್ತು ಸಮ್ಮೇಳನದ ರೂಪುರೇಷೆ ರಚಿಸುವ ಸಂಬಂಧ ಕರೆಯಲಾಗಿದ್ದ ಪರಿಷತ್ತಿನ ಪದಾಧಿಕಾರಿಗಳು ಮತ್ತು ಹಿತೈಷಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿ ಗೊಳಿಸುವ ಉದ್ದೇಶದಿಂದ ಸಮಾನಮನಸ್ಕರಿಂದ ಸಲಹೆ ಸಹಕಾರ ಪಡೆಯುತ್ತಿದ್ದು ಈ ಕಾರ್ಯಕ್ಕೆ ತಾಲೂಕಿನ ಜನತೆ ಮುಕ್ತ ಮನಸ್ಸಿನಿಂದ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ: ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಕೆಲ ಸಾಹಿತಿಗಳ ಪಟ್ಟಿಯನ್ನು ಸಭೆಯಲ್ಲಿ ಸಿದ್ಧಪಡಿಸಲಾಯಿತಾದರೂ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ಮುಂದಿನ ಸಭೆಯಲ್ಲಿ ಮಾಡಲು ತೀರ್ಮಾನಿಸಲಾಯಿತು.
ಸಾಹಿತ್ಯದ ಅನುಭವ, ವಯಸ್ಸು, ಕೊಡುಗೆಯನ್ನು ಪರಿಗಣಿಸಿ ತಾಲೂಕಿನ ಸಾಹಿತ್ಯ ವಲಯ ಒಪ್ಪುವ ರೀತಿಯಲ್ಲಿ ಅಧ್ಯಕ್ಷರ ಆಯ್ಕೆಮಾಡುವಂತೆ ಸಭೆಯು ಪರಿಷತ್ತಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ತಿಳಿಸಿತು. ಅಧ್ಯಕ್ಷ ಶಿವಮಾದು ಸಮ್ಮೇಳನದ ಅಧ್ಯಕ್ಷ ಆಯ್ಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ ಸಮರ್ಥರನ್ನು ಆಯ್ಕೆ ಮಾಡಲು ಪರಿಷತ್ತು ಬದ್ಧವಾಗಿದ್ದು ಕಾರ್ಯಕಾರಿ ಸಮಿತಿಯ ಸಭೆಯ ತೀರ್ಮಾನದಂತೆ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಪ್ರಕಟಣಾ ಸಮಿತಿ, ಹಣಕಾಸು ಸಮಿತಿ, ಮೆರವಣಿಗೆ ಸಮಿತಿ, ಪ್ರಚಾರ ಸಮಿತಿ, ಆಹಾರ ಸಮಿತಿ, ಹಾಗೂ ಸಾಂಸ್ಕೃತಿಕ ಸಮಿತಿಗಳನ್ನು ರಚನೆ ಮಾಡಲಾಯಿತು. ಸಮ್ಮೇಳನದ ಖರ್ಚು, ವೆಚ್ಚ, ಅಧ್ಯಕ್ಷರ ಮೆರವಣಿಗೆ, ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ನಿಕಟಪೂರ್ವ ಅಧ್ಯಕ್ಷ ಬಿ.ಟಿ.ಚಿಕ್ಕಪುಟ್ಟೇಗೌಡ, ಮಾಜಿ ಅಧ್ಯಕ್ಷರಾದ ಸು.ತ.ರಾಮೇಗೌಡ, ಸಿಸಿರಾ, ಸಿಂ.ಲಿಂ.ನಾಗರಾಜ್, ತೋಟದ ಮನೆ ಕೃಷ್ಣೇಗೌಡ, ಚನ್ನವೀರೇಗೌಡ, ಮೈಲನಾಯಕನಹಳ್ಳಿ ಶಿವರಾಮಯ್ಯ, ಎಚ್.ನಾಗರಾಜು, ಧರಣೇಶ್ ರಾಂಪುರ, ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ, ಮತ್ತೀಕೆರೆ ಚಲುವರಾಜು, ಚೌಡೇಗೌಡ, ಹರಿದಾಸ್, ಸಿ.ರಾಜಶೇಖರ್, ಡಿ.ರಾಜಶೇಖರ್, ಶ್ರೀನಿವಾಸ್ ರಾಂಪುರ, ಕೋಶಾಧ್ಯಕ್ಷ ಕೂರಣಗೆರೆ ಕೃಷ್ಣಪ್ಪ, ಗೌರವ ಕಾರ್ಯದರ್ಶಿಗಳಾದ ಬ್ರಹ್ಮಣೀಪುರ ರಾಮಕೃಷ್ಣಯ್ಯ, ವಿಜ್‌ಯ್‌ರಾಂಪುರ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement