ಕೋಟಿ ಬರಪರಿಹಾರ ನಿಧಿ ಸಮನಾಗಿ ಹಂಚಿಕೆ: ಸಚಿವ ಡಿಕೆಶಿ
ಕನಕಪುರ: ಸಂಪುಟದರ್ಜೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅವರು ಅಳ್ಳಿಮಾರನಹಳ್ಳಿ, ಕುರುಬರಹಳ್ಳಿ ಹಾಗೂ ಹೆಚ್.ಕೊತ್ತನೂರು ಗ್ರಾಮಗಳಲ್ಲಿ ಪರಿಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆಯನ್ನು ನೆರವೇರಿಸಿದರು.
ರಾಮನಗರ ಜಿಲ್ಲೆಗೆ ಬಿಡುಗಡೆಯಾಗಿರುವ 1.30 ಕೋಟಿ ಬರಪರಿಹಾರ ನಿಧಿಯನ್ನು ನಾಲ್ಕೂ ತಾಲೂಕುಗಳಿಗೆ ಯಾವುದೇ ಪಕ್ಷಪಾತವಿಲ್ಲದೆ ಹಂಚಿಕೆ ನಡೆಸುವುದಾಗಿ ಹೇಳಿದ ಸಚಿವ ಶಿವಕುಮಾರ್ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಎಸಗದೆ ಕಾರ್ಯನಿರ್ವಹಿಸುತ್ತೇನೆ. ಇಡೀ ಬೆಂಗ್ರಾ ಲೋಕಸಭಾ ಕ್ಷೇತ್ರದಲ್ಲಿ ಒಂದುನೂರಕ್ಕೂ ಹೆಚ್ಚು ಶುದ್ಧನೀರು ಘಟಕಗಳ ಸ್ಥಾಪನೆಯನ್ನು ಡಿಕೆಎಸ್ ಟ್ರಸ್ಟ್ ವತಿಯಿಂದ ನಡೆಸುವುದಾಗಿ ತಿಳಿಸಿದರು.
ಜಿಲ್ಲೆಯ ಪ್ರಮುಖ ನದಿಯಾದ ಅರ್ಕಾವತಿ ಸಂಪೂರ್ಣವಾಗಿ ಕಲುಷಿತಗೊಂಡಿದ್ದು ಜನರು ಈ ಮಲಿನ ನೀರನ್ನೇ ಉಪಯೋಗಿಸಬೇಕಾದ ಪರಿಸ್ಥಿತಿಯಿದೆ. ಇದನ್ನು ನೀಗಿಸಲು ತಕ್ಷಣಕ್ಕೆ ಶುದ್ಧ ನೀರುಘಟಕಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ, ಮುಂಬರುವ ದಿನಗಳಲ್ಲಿ ಸಾತನೂರು ಹೋಬಳಿಗೆ ಶಿಂಷಾ ನದಿಯಿಂದ ನೀರು ಪೂರೈಸುವ ಕಾಮಗಾರಿ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ, ಕಾವೇರಿ ನದಿಯಿಂದ ಕನಕಪುರ ಕಸಬಾ ಒಳಗೊಂಡಂತೆ ಕ್ಷೇತ್ರದ ಮಿಕ್ಕ ಎಲ್ಲಾ 224 ಗ್ರಾಮಗಳಿಗೆ ಕಾವೇರಿ ನೀರನ್ನು ಸರಬರಾಜು ಮಾಡುವ ಯೋಜನೆಗೆ ಈಗಾಗಲೇ ಮಂಜೂರಾತಿ ದೊರೆತಿದ್ದು ಸಮೀಕ್ಷಾಕಾರ್ಯ ಭರದಿಂದ ನಡೆಯುತ್ತಿದೆ. ಜನರ ಬೆಂಬಲ ವಿಶ್ವಾಸಗಳೇ ತಮಗೆ ಉತ್ಸಾಹದಿಂದ ಕಾರ್ಯನಿರ್ವಹಿಸಲು ಉತ್ತೇಜನ ನೀಡುತ್ತಿವೆ,ಎಂದು ಶಿವಕುಮಾರ್ನುಡಿದರು.
ಸಮಾರಂಭದಲ್ಲಿ ತಹಸೀಲ್ದಾರ್ ಡಾ.ದಾಕ್ಷಾಯಣಿ, ಜಿಪಂ ಸದಸ್ಯ ವೆಂಕಟೇಶಯ್ಯ, ನಳಿನಾ ರವಿಶಂಕರ್, ಎಸ್.ರವಿ, ಮುಖಂಡರಾದ ವಿ.ಶ್ರೀನಿವಾಸ್, ವಿಜಯದೇವ್, ದಿಲೀಪ್, ಲೋಕೇಶ್, ಸಿ.ವಿಜಯ್ ಪಾಲ್ಗೊಂಡಿದ್ದರು