ಪ್ರಮಾಣಿಕ ಶಿಕ್ಷಕರು ನೆಮ್ಮದಿಯಿಂದ ಇರಲಾಗದ ದಯನೀಯ ಸ್ಥಿತಿ
ಚನ್ನಪಟ್ಟಣ: ಶಿಕ್ಷಣ ಇಲಾಖೆ ಮತ್ತು ಸಚಿವಾಲಯದ ಭ್ರಷ್ಟಾಚಾರದಿಂದಾಗಿ ಪ್ರಮಾಣಿಕ ಶಿಕ್ಷಕರು ನೆಮ್ಮದಿಯಿಂದ ತಮ್ಮ ಕೆಲಸ ನಿರ್ವಹಿಸಲಾಗದಂತಹ ದಯನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಕಿಡಿಕಾರಿದರು.
ಪಟ್ಟಣದ ವಿವಿಧ ಶಾಲೆಗಳಿಗೆ ಭೇಟಿನೀಡಿ ಶಿಕ್ಷಕರ ಕುಂದು ಕೊರತೆ ಆಲಿಸುವ ಹಿನ್ನೆಲೆಯಲ್ಲಿ ತಾಲೂಕಿಗೆ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಣ ಇಲಾಖೆ ಪ್ರತಿಯೊಂದು ಹಂತದಲ್ಲೂ ಶಿಕ್ಷಕರನ್ನು ಶೋಷಿಸುತ್ತಿದ್ದು, ಉಸಿರು ಗಟ್ಟುವ ವಾತಾವರಣದಲ್ಲಿ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗದಾಗಿದೆ ಎಂದು ವಿಷಾದಿಸಿದರು.
ಇತರ ಇಲಾಖೆಗಳನ್ನು ಮೀರಿಸುವ ಮಟ್ಟದಲ್ಲಿ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ವಿವಿಧ ಭತ್ಯೆಗಾಗಿ, ವರ್ಗಾವಣೆಗಾಗಿ, ರಜೆ,ವಿವಿಧ ಇಲಾಖೆ ಸೌಲಭ್ಯಗಳನ್ನು ಪಡೆದು ಕೊಳ್ಳಲು ಶಿಕ್ಷಕರುಗಳು ಲಂಚ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಪವಿತ್ರ ವೃತ್ತಿಯಾದ ಶಿಕ್ಷಕ ವೃತ್ತಿಗೆ ಕಳಂಕ ತಂದೊಡ್ಡಿದೆ ಎಂದರು.
ಶಿಕ್ಷಕರನ್ನು ಶಿಕ್ಷಣ ಇಲಾಖೆಯ ಕೆಲಸವನ್ನು ಹೊರತು ಪಡಿಸಿದರೆ ಬೇರೆ ಯಾವ ಕೆಲಸಗಳಿಗೆ ನಿಯೋಜಿಸ ಬಾರದೆಂದು ಹಲವಾರು ಸಂದರ್ಭದಲ್ಲಿ ಸರ್ಮೊಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆಯಾದರೂ ಸರ್ಕಾರ ಬಿಸಿಯೂಟ, ಕ್ಷೀರಭಾಗ್ಯ, ತರಬೇತಿ, ಗಣತಿ ಸೇರಿದಂತೆ ವಿವಿಧ ಕೆಲಸಗಳಿಗೆ ಶಿಕ್ಷಕರುಗಳನ್ನೇ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಣ ಮೌನ: ಗುತ್ತಿಗೆ ಆಧಾರದ ಮೇಲೆ, ಅನುಧಾನಿತ ವಿದ್ಯಾಸಂಸ್ಥೆಗಳ ಶಿಕ್ಷಕರಿಗೆ ನೇಮಕಾತಿ ದಿನದಿಂದ ಹಣಕಾಸಿನ ಸವಲತ್ತು ನೀಡುವಂತೆ ಸರ್ಮೊಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆಯಾದರೂ ಸರ್ಕಾರ ಏನೂ ತಿಳಿಯದಂತೆ ಜಾಣಮೌನ ತಳೆದಿದೆ. ಸರ್ಕಾರ ಮತ್ತು ಅಧಿಕಾರಿಗಳಿಂದ ಶಿಕ್ಷಕರ ಮೇಲೆ ನಿರಂತರವಾಗಿ ನಡೆಯುತ್ತಿರುವ ಧೌರ್ಜನ್ಯವನ್ನು ತಡೆಯಲು ಉಗ್ರ ಹೋರಾಟ ಹಮ್ಮಿ ಕೊಳ್ಳುವುದಾಗಿ ಅವರು ತಿಳಿಸಿದರು.
800 ಕೋಟಿ ಯಾಕೆ ಬಂದಿಲ್ಲ: ಸರ್ವಶಿಕ್ಷಣ ಅಭಿಯಾನದಡಿ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿದ್ದ 800 ಕೋಟಿ ರು. ಹಣ ಈ ಬಾರಿ ಬಂದಿಲ್ಲ. ಇದರಿಂದಾಗಿ ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ನಷ್ಟವಾಗಿದ್ದು ಈ ಹಣ ಕೈತಪ್ಪಲು ಯಾರು ಕಾರಣವೋ ಅವರ ವಿರುದ್ಧ ಕ್ರಮ ಜರುಗಿಸ ಬೇಕೆಂದು ಪುಟ್ಟಣ್ಣ ಆಗ್ರಹಿಸಿದರು. ರಾಜ್ಯದ ಯಾವುದೇ ಭಾಗದ ಶಿಕ್ಷಕರ ಸಮಸ್ಯೆ ಎದುರಾದರೂ ನಾನು, ಮತ್ತೊಬ್ಬ ಸದಸ್ಯರಾದ ಮರಿತಿಬ್ಬೇಗೌಡರು ಮೊದಲು ನಿಂತು ಹೋರಾಟ ನಡೆಸುತ್ತೇವೆ. ದೇಶದ ಭವಿಷ್ಯ ರೂಪಿಸುವ ಶಿಕ್ಷಕರ ಸಮಸ್ಯೆಗೆ ದನಿಯಾಗುವುದೇ ನನ್ನ ಧ್ಯೇಯವಾಗಿದ್ದು ಮೌಲ್ಯಮಾಪನದ ಗೊಂದಲ ಸೇರಿದಂತೆ ಎಂತಹುದೇ ಸಂದರ್ಭದಲ್ಲೂ ಶಿಕ್ಷಕರ ಪರ ನಿಂತು ಹೋರಾಡಿದ್ದೇನೆ ಎಂದರು.