ರೈತರಿಗೆ ನೀಡುತ್ತಿರುವ ದರ ಹೆಚ್ಚಿಸಲು ಸಭೆಯಲ್ಲಿ ಒತ್ತಾಯ
ಕ.ಪ್ರ.ವಾರ್ತೆ ರಾಮನಗರ ಜ.20
ರೈತರಿಗೆ ನೀಡುತ್ತಿರುವ ದರ ಹಾಗೂ ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಹಾಲಿನ ದರದಲ್ಲಿ ರು.10 ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಸರಿದೂಗಿಸಲು ರೈತರಿಗೆ ನೀಡುತ್ತಿರುವ ದರವನ್ನು ಹೆಚ್ಚಿಸಬೇಕೆಂದು ಆಡಳಿತ ಮಂಡಳಿ ಸಭೆಯಲ್ಲಿ ಒತ್ತಾಯಿಸಲಾಗಿದೆ ಎಂದು ಕೆಎಂಎಫ್ ನಿರ್ದೇಶಕ ಪಿ.ನಾಗರಾಜು ತಿಳಿಸಿದರು.
ತಾಲೂಕಿನ ರೇವಣಸಿದ್ದೇಶ್ವರ ಬೆಟ್ಟದಲ್ಲಿ ನಡೆದ ಕೈಲಾಂಚ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಇಂದು ಹೈನುಗಾರಿಕೆ ಬೃಹತ್ ಉದ್ಯಮವಾಗಿ ರೂಪುಗೊಂಡಿದೆ. ರಾಜ್ಯದಲ್ಲಿ ಪ್ರತಿ ತಿಂಗಳು 52 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಹಳೆ ಮೈಸೂರು ಭಾಗಗಳ ಜಿಲ್ಲೆಗಳಿಂದಲೇ 40 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ಬಿಜೆಪಿ ಸರ್ಕಾರದಲ್ಲಿ ನೀಡುತ್ತಿದ್ದ ರು.2 ಪ್ರೋತ್ಸಾಹ ಧನವನ್ನು ಕಾಂಗ್ರೆಸ್ ಸರ್ಕಾರ ರು.4ಕ್ಕೆ ಹೆಚ್ಚಳ ಮಾಡಿದೆ. ಇದರಿಂದ ರೈತರು ಹೈನುಗಾರಿಕೆ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ರೈತರಿಂದ ಒಕ್ಕೂಟಗಳು ರು.21ಕ್ಕೆ ಹಾಲು ಖರೀದಿ ಮಾಡುತ್ತಿವೆ. ಆದರೆ, ಗ್ರಾಹಕರಿಗೆ ರು.31ಕ್ಕೆ ಮಾರಾಟ ಮಾಡಲಾಗುತ್ತಿದೆ. ಖರೀದಿ ಮತ್ತು ಮಾರಾಟದ ನಡುವೆ ರು.10 ಅಂತರವಿದ್ದು, ರೈತರಿಗೆ ರು.3 ಹೆಚ್ಚಿಗೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ರೈತರು ಒಕ್ಕೂಟಕ್ಕೆ ಸರಬರಾಜು ಮಾಡುತ್ತಿರುವ ಹಾಲಿನ ದರವನ್ನು ಹಾಲಿನಲ್ಲಿರುವ ಕೊಬ್ಬಿನಂಶದ ಮೇಲೆ ನಿಗದಿ ಪಡಿಸಬೇಕೆಂಬ ಒತ್ತಾಯವನ್ನು ಮಾಡಲಾಗಿದೆ. ಕೊಬ್ಬಿನಂಶದ ಮೇಲೆ ಹಾಲನ್ನು ಕೊಂಡ ಸಂದರ್ಭದಲ್ಲಿ ರೈತರು ಉತ್ತಮ ಗುಣಮಟ್ಟದ ಹಾಲನ್ನು ಸಹಕಾರ ಸಂಘಗಳಿಗೆ ಸರಬರಾಜು ಮಾಡುವರು ಎಂದು ಅವರು ತಿಳಿಸಿದರು.
ಪೌಡರ್ ತಯಾರಿಕಾ ಘಟಕ ಆರಂಭ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ನಂದಿನಿ ಪೌಡರ್ ತಯಾರಿಕಾ ಘಟಕ ಪ್ರಾರಂಭಿಸಲು ಕೆ.ಎಂ.ಎಫ್. ಉತ್ಸುಕವಾಗಿದೆ.
ಈ ಬಗ್ಗೆ ಪೂರ್ವ ತಯಾರಿ ನಡೆಸಲಾಗಿದ್ದು, 50 ಎಕರೆ ಸ್ಥಳವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಜಮೀನು ಮಂಜೂರು ಮಾಡುತ್ತಿದ್ದಂತೆ ಯೋಜನೆ ಆರಂಭಿಸಲಾಗುವುದು. ಅಲ್ಲದೇ ರಾಮನಗರ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟವನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ರಾಮನಗರದ ಬಮೂಲ್ ಶಿಬಿರದ ಡಾ.ಶ್ರೀನಿವಾಸ್, ವಿಸ್ತರಣಾಧಿಕಾರಿಗಳಾದ ಕೆ.ಎನ್. ನಂಜಯ್ಯ, ಕೃಷ್ಣಪ್ಪ, ರಮೇಶ್, ಶ್ರೀಕಂಠಯ್ಯ, ತಾಲೂಕು ಕಾರ್ಯದರ್ಶಿಗಳ ಒಕ್ಕೂಟದ ಅಧ್ಯಕ್ಷ ಗುಂಡಪ್ಪ, ಕಾರ್ಯದರ್ಶಿ ಅನಿಲ್ ಕುಮಾರ್, ಶಿವರಾಜು, ಉಮೇಶ್, ಕರುಬಳ್ಳಿದೊಡ್ಡಿ ಪ್ರಕಾಶ್, ಅರ್ಕೇಶ್, ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೆ ಸಂದರ್ಭದಲ್ಲಿ ಅಕಾಲಿಕವಾಗಿ ಮರಣ ಹೊಂದಿದ ರಾಸುಗಳ ಮಾಲೀಕರಿಗೆ ಕೆಎಂಎಫ್ ವತಿಯಿಂದ ಪರಿಹಾರದ ಚೆಕ್ಕುಗಳನ್ನು ವಿತರಿಸಲಾಯಿತು. ಕೈಲಂಚ ಹೋಬಳಿಯ ಹಾಲು ಉತ್ಪಾದಕರ ನೌಕರರ ಪರವಾಗಿ ಕೆಎಂಎಫ್ ನಿರ್ದೇಶಕ ಪಿ.ನಾಗರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.