ಉಪವಿಭಾಗಾಧಿಕಾರಿಗೆ ಧ್ವಜಾರೋಹಣ ಅವಕಾಶವಿಲ್ಲ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿ ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಅಧಿಕೃತವಾಗಿ ಸ್ಥಳಾಂತರಿಸಿ ಲಿಖಿತ ಆದೇಶ ನೀಡದ ಹೊರತು ಜ.26ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಉಪವಿಭಾಗಾಧಿಕಾರಿಗಳು ಧ್ವಜಾರೋಹಣ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಒಕ್ಕೊರಲ ನಿರ್ಣಯ ಕೈಗೊಂಡಿದೆ.
ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ ಸಮಿತಿಯ ಸಂಚಾಲಕ ರಾಜೇಂದ್ರಕುಮಾರ್, ತೂಬಗೆರೆ ಷರೀಫ್, ವಕೀಲ ಎಂ.ಕೃಷ್ಣಮೂರ್ತಿ ಮತ್ತಿತರರು ಸಭಾ ನಿರ್ಣಯವನ್ನು ಪ್ರಕಟಿಸಿದರು. ಸಭೆಯಲ್ಲಿ ಹಾಜರಿದ್ದ ಶಾಸಕ ಟಿ.ವೆಂಕಟರಮಣಯ್ಯ ಕೂಡ ಹೋರಾಟ ಸಮಿತಿ ನಿರ್ಣಯಕ್ಕೆ ಬೆಂಬಲ ನೀಡಿದ್ದಾರೆ. ಸಭೆಯಲ್ಲಿ 3 ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಬೇಡಿಕೆ ಈಡೇರದ ಹೊರತು ಗಣರಾಜ್ಯೋತ್ಸವದಂದು ಯಾವುದೇ ಕಾರಣಕ್ಕೂ ಶಾಸಕರಾದಿ ಯಾವ ಜನಪ್ರತಿನಿಧಿಯೂ ಭಾಗವಹಿಸಬಾರದು. ಅಂದು ಸರ್ಕಾರದ ಧೋರಣೆ ಖಂಡಿಸಿ ಕನ್ನಡ ಜಾಗೃತ ಭವನದಿಂದ ಕಪ್ಪುಪಟ್ಟಿ ಧರಿಸಿ ಹಕ್ಕೊತ್ತಾಯದ ಪ್ರದರ್ಶನ ನಡೆಸುವುದಾಗಿ ನಿರ್ಧಾರ ಪ್ರಕಟಿಸಲಾಗಿದೆ. ಇದಕ್ಕೆ ಶಾಸಕರ ಬೆಂಬಲವೂ ವ್ಯಕ್ತವಾಗಿದ್ದು, ತಾವೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಪ್ರಕಟಿಸಿದ್ದಾರೆ.
ಅದೇ ರೀತಿ ವಿವಿಧ ರಾಜಕೀಯ ಪಕ್ಷಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತರಾಗಿರುವ ಪ್ರತಿನಿಧಿಗಳಾದಿಯಾಗಿ ಯಾವೊಬ್ಬ ಜನಪ್ರತಿನಿಧಿಯೂ ಭಾಗವಹಿಸದಂತೆ ಮನವಿ ಮಾಡುವುದಾಗಿ ಹೇಳಿರುವ ಸಮಿತಿ, ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಲಿಖಿತ ಆದೇಶ ನೀಡಲು ಗಡವು ನೀಡಲಾಗಿದೆ. ಜ.24ರ ಒಳಗೆ ಆದೇಶ ಹೊರಬೀಳದಿದ್ದರೆ ಹೋರಾಟ ನಿಶ್ಚಿತ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈಗಾಗಲೇ ಈ ಹಂತದಲ್ಲಿ ಎಲ್ಲ ಪ್ರಕ್ರಿಯೆಗಳು ನಡೆದಿವೆ. ಎಪಿಎಂಸಿ ಆವರಣದಲ್ಲಿ ಗುರುತಿಸಿರುವ ಕಟ್ಟಡದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಕಾರ್ಯಾರಂಭ ಮಾಡಬೇಕಿದೆ. ಸರ್ಕಾರದ ಕಾರ್ಯದರ್ಶಿ ಹಂತದಲ್ಲಿ ಚರ್ಚೆ ನಡೆದಿದ್ದು, ಅಡೆತಡೆಗಳ ವಿಚಾರ ನಮಗೆ ಬೇಕಿಲ್ಲ. ನಮ್ಮ ಹಕ್ಕೊತ್ತಾಯಕ್ಕೆ ಬೆಲೆ ಕೊಡಬೇಕಿದೆ ಎಂದಿದ್ದಾರೆ. ಹತ್ತಾರು ಸಂಘಟನೆಗಳು, ರಾಜಕೀಯ ಪಕ್ಷಗಳೂ ನಿರ್ಣಯಕ್ಕೆ ದನಿಗೂಡಿಸಿದ್ದಾರೆ.