ಜಿಲ್ಲಾ ಕೇಂದ್ರ ದೊಡ್ಡಬಳ್ಳಾಪುರದ ಹಕ್ಕು
ದೊಡ್ಡಬಳ್ಳಾಪುರ: ಜಿಲ್ಲಾ ಕೇಂದ್ರವಾಗುವುದು ದೊಡ್ಡಬಳ್ಳಾಪುರದ ಹಕ್ಕು. ನ್ಯಾಯಯುತವಾಗಿ ದೊಡ್ಡಬಳ್ಳಾಪುರವನ್ನು ಈ ಹಿಂದೆಯೇ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ವ್ಯವಸ್ಥಿತ ನಿರ್ಲಕ್ಷ್ಯದ ಪರಿಣಾಮ ಇಂದು ಹೋರಾಟ ಅನಿವಾರ್ಯವಾಗಿದೆ ಎಂದು ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಬೃಹತ್ ಸಭೆಯಲ್ಲಿ ಹತ್ತಾರು ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿ ಮುಖಂಡರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೊಡ್ಡಬಳ್ಳಾಪುರವೇ ಕೇಂದ್ರವಾಗಿದೆ. ಅದನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಷ್ಟೇ. ಈ ಹಂತದಲ್ಲಿ ನೆರೆಯ ದೇವನಹಳ್ಳಿಯಲ್ಲಿ ಇತ್ತೀಚೆಗೆ ಜಿಲ್ಲಾ ಕೇಂದ್ರದ ಕೂಗೆದ್ದಿದೆ. ಆದರೆ ಇತಿಹಾಸ, ಆಡಳಿತ ಪರಂಪರೆ, ಸರ್ಕಾರದ ಅಂಕಿ-ಅಂಶಗಳು, ಉಪವಿಭಾಗ ಕೇಂದ್ರ ಸೇರಿದಂತೆ ಎಲ್ಲ ಬಗೆಯ ಅರ್ಹತೆಗಳೂ ದೊಡ್ಡಬಳ್ಳಾಪುರಕ್ಕೆ ಮಾತ್ರ ಇದೆ. ಹೀಗಾಗಿ ಇದರ ಪರ್ಯಾಯವಾದ ಆಲೋಚನೆ ಸರ್ಕಾರ ಮಾಡಬಾರದು. ನ್ಯಾಯಯುತ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿ ಕೂಡಲೇ ಜಿಲ್ಲಾ ಕೇಂದ್ರದ ಘೋಷಣೆ ಮಾಡಬೇಕು. ಜಿಲ್ಲಾ ಕೇಂದ್ರ ದೊಡ್ಡಬಳ್ಳಾಪುರದಲ್ಲಿ ಸ್ಥಾಪನೆಯಾಗುವವರೆಗೆ ಭಿನ್ನರೀತಿಯ ಹೋರಾಟಗಳು ಮುಂದುವರೆಯಲಿವೆ ಎಂದು ಘೋಷಿಸಿದರು.
ಅರ್ಹತೆಯಲ್ಲ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಜಿಲ್ಲಾ ಕೇಂದ್ರವಾಗಲು ಅರ್ಹತೆಯಲ್ಲ. ಜಿಲ್ಲಾ ಕೇಂದ್ರವಾಗಬೇಕಿರುವುದು ಸಾಮಾನ್ಯ ಜನರಿಗೆ ಆಡಳಿತ ಸುಲಭದ ರೀತಿಯಲ್ಲಿ ಸಿಗುವುದಕ್ಕಾಗಿಯೇ ಹೊರತು ವಿದೇಶಕ್ಕೆ ಹಾರುವುದಕ್ಕಲ್ಲ. ಜೊತೆಗೆ ದೇವನಹಳ್ಳಿ ಕ್ಲಸ್ಟರ್ ಸಿಟಿಯಾಗಿ ಬೆಂಗಳೂರಿನ ಒಳಗೇ ಸೇರಿಕೊಳ್ಳುತ್ತಿದೆ. ಹೀಗಿರುವಾಗ ಪ್ರತ್ಯೇಕ ಮತ್ತು ಸ್ವತಂತ್ರ ಅಸ್ತಿತ್ವವುಳ್ಳ ನಗರವಾಗಿ ದೊಡ್ಡಬಳ್ಳಾಪುರ ಮಾತ್ರವೇ ಜಿಲ್ಲಾ ಕೇಂದ್ರವಾಗಲು ಸೂಕ್ತ ಎಂದರು.
ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾ ಕೇಂದ್ರ ಘೋಷಣೆ ವಿಚಾರದಲ್ಲಿ ಈಗಾಗಲೇ ಹಲವು ಪ್ರಕ್ರಿಯೆಗಳು ಸರ್ಕಾರದ ಹಂತದಲ್ಲಿ ನಡೆಯುತ್ತಿವೆ. ಪಕ್ಕದ ತಾಲೂಕು ಕೂಡ ಈ ವಿಚಾರದಲ್ಲಿ ಸ್ಪರ್ಧೆಗಿಳಿದಿರುವುದರಿಂದ ಸ್ವಲ್ಪ ಮಟ್ಟಿಗೆ ಪೈಪೋಟಿ ಏರ್ಪಟ್ಟಿದೆ. ಗಂಭೀರವಾಗಿ ಈ ವಿಚಾರ ಚರ್ಚೆಯಲ್ಲಿದ್ದು, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.
ಪಿಳ್ಳಮುನಿಶಾಮಪ್ಪ ವಿರುದ್ಧ ಆಕ್ರೋಶ: ಇದೇ ಸಂದರ್ಭದಲ್ಲಿ ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ವಿರುದ್ಧ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಅವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರೇ ಹೊರತು ದೇವನಹಳ್ಳಿ ತಾಲೂಕಿಗೆ ಮಾತ್ರ ಶಾಸಕರಲ್ಲ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಆಲೋಚಿಸಬೇಕು. ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯೂ ಸೇರುತ್ತದೆ. ದೊಡ್ಡಬಳ್ಳಾಪುರ ತಾಲೂಕಿನ 80ಕ್ಕೂ ಹೆಚ್ಚು ಗ್ರಾಮಗಳ 70 ಸಾವಿರಕ್ಕೂ ಅಧಿಕ ಜನಸಂಖ್ಯೆಗೆ ಅವರು ಶಾಸಕರು. ಹೀಗಿರುವಾಗ ದೊಡ್ಡಬಳ್ಳಾಪುರದ ವಿರುದ್ಧ ಮಾತನಾಡುವ ವರ್ತನೆ ಸರಿಯಲ್ಲ. ಪ್ರಜ್ಞಾವಂತಿಕೆ ಇದ್ದರೆ ಅವರು ದೊಡ್ಡಬಳ್ಳಾಪುರದ ಜನರ ಹೋರಾಟವನ್ನೂ ಬೆಂಬಲಿಸಬೇಕು. ಮುಂದಿನ ದಿನಗಳಲ್ಲಿ ಅವರು ಪ್ರತಿನಿಧಿಸುವ ತೂಬಗೆರೆ ಕ್ಷೇತ್ರದ ಜನ ಅವರ ವಿರುದ್ಧ ಹೋರಾಟ ಆರಂಭಿಸಲಿದ್ದಾರೆ ಎಂದರು. ಸಭೆಯಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ, ಸಂಚಾಲಕರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕನ್ನಡಪರ, ರೈತಪರ, ಪ್ರಗತಿಪರ ಹತ್ತಾರು ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.