ಪೋಲಿಯೊ ಅಭಿಯಾನಕ್ಕೆ ರೋಟರಿ ಅಧ್ಯಕ್ಷ ಸಿ. ವಿಜಯ್ ಚಾಲನೆ
ಕನಕಪುರ: ಕನಕಪುರದ ರೋಟರಿ ಭವನದಲ್ಲಿ ಪಲ್ಸ್ ಪೋಲಿಯೊ ಅಭಿಯಾನಕ್ಕೆ ರೋಟರಿ ಅಧ್ಯಕ್ಷ ಸಿ.ವಿಜಯ್ ಚಾಲನೆ ನೀಡಿದರು.
ರೋಟರಿ ಮತ್ತಿತರ ಸಂಘಸಂಸ್ಥೆಗಳು ಆರೋಗ್ಯ ಇಲಾಖೆ ಹಾಗೂ ಆಡಳಿತ ಯಂತ್ರದ ಸಹಯೋಗದಲ್ಲಿ ಮಾಡಿರುವ ಅತ್ಯಪೂರ್ವವಾದ ಸಾಧನೆ ಮಾರಕ ಪೋಲಿಯೊ ರೋಗದಿಂದ ಭಾರತ ದೇಶವನ್ನು ಮುಕ್ತಿಗೊಳಿಸಿರುವುದು ಹರ್ಷದ ಸಂಗತಿ ಎಂದರು.
ಪಲ್ಸ್ ಪೋಲಿಯೊ ಸಂಚಾಲಕ ಎಸ್.ಗೋಪಾಲ ಮಾತನಾಡಿ, ರೋಟರಿ ವತಿಯಿಂದ ಪಟ್ಟಣವ್ಯಾಪ್ತಿಯಲ್ಲಿ ಪೋಲಿಯೊ ಲಸಿಕೆಗಳನ್ನು ನೀಡಲು 34 ಬೂತ್ಗಳನ್ನು ಏರ್ಪಡಿಸಲಾಗಿದೆ. ನಂತರ ಮೂರು ದಿನಗಳ ಕಾಲ ಸ್ವಯಂಸೇವಕರು ಪಟ್ಟಣದ ಮನೆಮನೆಗಳಿಗೆ ತೆರಳಿ ಒಂದು ಮಗುವೂ ಪೋಲಿಯೊ ಲಸಿಕೆಗಳಿಂದ ತಪ್ಪಿಸಿಕೊಳ್ಳದಂತೆ ಜಾಗೃತಿ ವಹಿಸಿ ಲಸಿಕೆಗಳನ್ನು ನೀಡಲಿದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ 18 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಅವುಗಳ ವ್ಯಾಪ್ತಿಯಲ್ಲಿ ಇಲಾಖೆಯ ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು ಲಸಿಕೆ ನೀಡಿಕೆ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಕಾರ್ಯದರ್ಶಿ ಮುರಡಿಗಿರೀಶ್, ಪುಟ್ಟಸ್ವಾಮಿ, ಚಂದ್ರಪ್ರಭಾ, ಉಮಾರಾಜ್, ರಮೇಶ್, ರಾಜು ಬೈರೇಗೌಡ, ನಾರಾಯಣ್, ರಾಮಕೃಷ್ಣ ಪಾಲ್ಗೊಂಡಿದ್ದರು.